ಉಡುಪಿ: ತಾಯಿಯ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿ (Underworld Don Ravi Pujari) ಉಡುಪಿಗೆ ಆಗಮಿಸಿದ್ದಾನೆ.
ಹೃದಯಾಘಾತದಿಂದ ನಿಧನ ಹೊಂದಿದ ತಾಯಿ ಸುಶೀಲಾ ಪೂಜಾರ್ತಿ ಅವರ ಅಂತ್ಯಸಂಸ್ಕಾರ ಇಂದು ಮಲ್ಪೆಯ ನೆರ್ಗಿಯ ಹಿರಿಯ ಮನೆಯಲ್ಲಿ ನಡೆಯಲಿದೆ. ಇದನ್ನೂ ಓದಿ: ಮೋದಿ ಸಮ್ಮುಖದಲ್ಲೇ ನಯವಾಗಿ ರಾಜ್ಯದ ಬೇಡಿಕೆ ಪಟ್ಟಿ ಮುಂದಿಟ್ಟ ಸಿಎಂ
ನ್ಯಾಯಾಲಯದ ವಿಶೇಷ ಅನುಮತಿ ಮೇರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ರವಿ ಪೂಜಾರಿಯನ್ನ ಬೆಂಗಳೂರಿನಿಂದ ಉಡುಪಿಗೆ ಕರೆತರಲಾಗಿದೆ. ಅಂತ್ಯಕ್ರಿಯೆ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮತ್ತೆ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಸುಮಾರು 26 ವರ್ಷಗಳ ಕಾಲ ಭೂಗತ ಜಗತ್ತಿನಲ್ಲಿ ಸಕ್ರಿಯವಾಗಿದ್ದ ರವಿ ಪೂಜಾರಿ ಇದೀಗ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸ್ವಗ್ರಾಮಕ್ಕೆ ಆಗಮಿಸಿದ್ದಾನೆ. ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ಅವರು ಮೊನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಐವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳಿದ್ದು, ಅವರಲ್ಲಿ ರವಿ ಪೂಜಾರಿ ಕೂಡ ಒಬ್ಬ. ಇದನ್ನೂ ಓದಿ: ಯಲಹಂಕದಲ್ಲಿ ಪತ್ನಿ ಎದುರೇ ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ
ಮಲ್ಪೆಯ ನೆರ್ಗಿಯ ಹಿರಿಯ ಮನೆಯಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದ್ದು, ನ್ಯಾಯಾಲಯದ ಅನುಮತಿ ಪಡೆದು ರವಿ ಪೂಜಾರಿಯನ್ನು ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ ಸಿಟಿ ಆರ್ಮ್ಡ್ ರಿಸರ್ವ್ ಪೊಲೀಸರಿಗೆ ಈ ಸಂಬಂಧ ನ್ಯಾಯಾಲಯ ನಿರ್ದೇಶನ ನೀಡಿತ್ತು. ಜೈಲು ಇಲಾಖೆಯಿಂದ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಹೆಚ್ಚುವರಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯೂ ಸ್ಥಳೀಯ ಭದ್ರತಾ ವ್ಯವಸ್ಥೆ ಮಾಡಿದೆ.
ಅಂತ್ಯಕ್ರಿಯೆಯ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ರವಿ ಪೂಜಾರಿಯನ್ನ ಮತ್ತೆ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚಿಸಿದೆ. ಪೊಲೀಸ್ ಎಸ್ಕಾರ್ಟ್ ಭದ್ರತೆಯ ಸಂಪೂರ್ಣ ವೆಚ್ಚವನ್ನೂ ರವಿ ಪೂಜಾರಿಯೇ ಭರಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಇನ್ನು ಕೊಲೆ, ಕೊಲೆ ಯತ್ನ, ಸುಲಿಗೆ, ಹಫ್ತಾ ವಸೂಲಿ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ರವಿ ಪೂಜಾರಿ ಆರೋಪಿಯಾಗಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕರ್ನಾಟಕವೊಂದರಲ್ಲೇ 90ಕ್ಕೂ ಅಧಿಕ ಪ್ರಕರಣಗಳಿವೆ. 2019ರ ಜನವರಿ 19ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ ರವಿ ಪೂಜಾರಿಯನ್ನು ಬಂಧಿಸಲಾಗಿತ್ತು.

