ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ 9 ದಿನಗಳ ನಂತರ ತ್ರಿಶೂಲಿ 3A ಜಲವಿದ್ಯುತ್ ಯೋಜನೆಯ ಸುರಂಗದಿಂದ (Trishuli Tunnel) ಇಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಸುರಂಗದ ಒಳಗಿಂದ ಜನರ ಕೂಗು ಕೇಳಿಬರುತ್ತಿದ್ದು, ರಕ್ಷಣಾ ತಂಡಗಳು ಸಿಲುಕಿರುವವರನ್ನು ಪತ್ತೆಹಚ್ಚಲು ಕೆಲಸ ಮುಂದುವರಿಸಿವೆ.
ಆಗಸ್ಟ್ 26 ರಂದು ಟಿಬೆಟಿಯನ್ ಗಡಿಯಲ್ಲಿರುವ ನೇಪಾಳದ ಹಲವಾರು ಹಳ್ಳಿಗಳನ್ನು ಆವರಿಸಿದ ಪ್ರವಾಹವು ಇಲ್ಲಿಯವರೆಗೆ ಸುಮಾರು 1,200 ಜನರನ್ನು ಬಲಿ ತೆಗೆದುಕೊಂಡಿದೆ. ಸಾವಿರಾರು ಜನ ಪ್ರವಾಹದಿಂದ ನಾಪತ್ತೆಯಾಗಿದ್ದಾರೆ. ತ್ರಿಶೂಲಿ ಸುರಂಗದಲ್ಲಿ, ಕಾರ್ಮಿಕರು ಸೇರಿದಂತೆ ಕನಿಷ್ಠ 40 ಜನರು ಕಾಣೆಯಾಗಿದ್ದಾರೆ. ದೇಶದ ಆರು ಜಲವಿದ್ಯುತ್ ಸ್ಥಾವರಗಳಿಂದ ಕಣ್ಮರೆಯಾದ 900 ಕ್ಕೂ ಹೆಚ್ಚು ಕಾರ್ಮಿಕರು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ:Nepal Flood | ಮೃತರ ಸಂಖ್ಯೆ 1204ಕ್ಕೆ ಏರಿಕೆ, 4,216 ಮಂದಿಗಾಗಿ ಮುಂದುವರಿದ ಶೋಧ ಕಾರ್ಯ
ಸುರಂಗದಿಂದ ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಸಂಜಯ ಶಾ ಹಾಗೂ ಕಬೀರ್ ಮಹಾರ್ಜನ್ ಎಂದು ಗುರುತಿಸಲಾಗಿದೆ. ಇಬ್ಬರಿಗೂ ಆಮ್ಲಜನಕವನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನೇಪಾಳದಲ್ಲಿ (Nepal Floods) ಸಂಭವಿಸಿದ ಭೀಕರ ಜಲಪ್ರಳಯದ ಹೊಡೆತಕ್ಕೆ ಸಿಲುಕಿ ಜನವಸತಿ, ಬೃಹತ್ ಕಟ್ಟಡಗಳೆಲ್ಲವೂ ನಾಮಾವಶೇಷವಾಗಿವೆ. ಟಿಬೆಟ್-ನೇಪಾಳ ಗಡಿಯಲ್ಲಿರುವ ಗೈರಾಂಗ್ ಗಡಿ ಠಾಣೆಯು (Gyirong Border Port) ಪ್ರವಾಹದ ಮಣ್ಣು, ಕಲ್ಲು ಮತ್ತು ಶಿಲಾಖಂಡರಾಶಿಗಳಿಂದ ಕಣ್ಮರೆಯಾಗಿದೆ. ಜಲಪ್ರಳಯ ನಂತರದ ಹೊಸ ವೈಮಾನಿಕ ದೃಶ್ಯಾವಳಿಗಳನ್ನು ನೋಡಿದರೆ, ಅಲ್ಲಿ ಒಂದು ಕಾಲದಲ್ಲಿ ಪ್ರಮುಖ ಗಡಿ ನೆಲೆ ಇದ್ದಿತ್ತೆಂದು ಊಹಿಸುವುದು ಕಷ್ಟ ಎನ್ನುವಂತಾಗಿದೆ.
ಸಂಶೋಧಕ ಇಯಾನ್ ಕ್ಯಾಮರೂನ್ ಹಂಚಿಕೊಂಡ ಡ್ರೋನ್ ಚಿತ್ರಣದಲ್ಲಿ ವಿನಾಶವು ಸ್ಪಷ್ಟವಾಗಿ ಗೋಚರಿಸಿದೆ. ಆಗಸ್ಟ್ 26 ರಂದು ಹಿಮಾಲಯದಲ್ಲಿನ ಅಗಾಧವಾದ ಮಂಜುಗಡ್ಡೆ ಮತ್ತು ಬಂಡೆಗಳಿಂದ ಉಂಟಾದ ಹಿಮಪಾತವು ಮಣ್ಣು-ಕಲ್ಲು ರಾಶಿಗಳ ಹರಿವಾಗಿ ರೂಪಾಂತರಗೊಂಡು ಟಿಬೆಟ್‌ನ ಗೈರಾಂಗ್ ಬಂದರಿನ ಮೂಲಕ ಹರಿದುಹೋದಾಗ ಏನಾಯಿತು ಎಂಬುದರ ಸ್ಪಷ್ಟ ನೋಟವನ್ನು ನೀಡುತ್ತದೆ. ಪ್ರತಿಯೊಂದು ಮೂಲಸೌಕರ್ಯವೂ ಕಣ್ಮರೆಯಾಗಿದೆ ಎಂದು ಕ್ಯಾಮರೂನ್ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಕಟ್ಟಡಗಳು, ರಸ್ತೆಗಳು, ವಾಹನಗಳು ಮತ್ತು ಇತರ ಮೂಲಸೌಕರ್ಯಗಳನ್ನು ಹೊಂದಿದ್ದ ಗಡಿಯು ಈಗ ಕಣಿವೆಯ ನೆಲದಿಂದ ಪ್ರತ್ಯೇಕಿಸಲಾಗದಂತೆ ಕಾಣುತ್ತದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಕಟ್ಟಡಗಳು, ಮೂಲಸೌಕರ್ಯ; ನೇಪಾಳ ಭೀಕರ ಪ್ರವಾಹಕ್ಕೆ ಎಲ್ಲವೂ ನಾಮಾವಶೇಷ
