ಲಕ್ನೋ: ಆ.20 ರಂದು ಇಲ್ಲಿನ (Lucknow) ಬ್ಯಾಂಕ್‌ವೊಂದರ ಹೊರಗೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು (Wife) ಗುಂಡಿಟ್ಟು ಹತ್ಯೆ ಮಾಡಿ, ಬಳಿಕ ತನ್ನ ತಂಗಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ 1 ಕೋಟಿ ರೂ. ಜೀವನಾಂಶ ಕೇಳಿದ್ದಕ್ಕೆ ಬೇಸತ್ತು ಇಬ್ಬರನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವಿಚಾರ ಈಗ ಬಯಲಾಗಿದೆ.
ಮಾನಸ್ ವಾಜಪೇಯಿ (38) ತನ್ನ ಪತ್ನಿ ದಿವ್ಯಾ ಮಿಶ್ರಾಳನ್ನು ಕೆಲಸ ಮಾಡುತ್ತಿದ್ದ ಬ್ಯಾಂಕಿನ ಹೊರಗೆ ಗುಂಡು ಹಾರಿಸಿ ಕೊಂದಿದ್ದ. ನಂತರ ತನ್ನ ಸಹೋದರಿಯನ್ನು ಕೊಲೆಗೈದು, ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನೂ ಓದಿ: ಬ್ಯಾಂಕ್ ಎದುರೇ ಗುಂಡಿಕ್ಕಿ ಪತ್ನಿ ಕೊಲೆ | ಟೊಮ್ಯಾಟೋ ಕೊಳೆತಿದ್ದಕ್ಕೆ ಹಲ್ಲೆ ಮಾಡಿದ್ದ: ಕರಾಳ ಸತ್ಯ ಬಿಚ್ಚಿಟ್ಟ ಮೃತಳ ಸಹೋದರಿ
ಮಾನಸ್ ಮತ್ತು ದಿವ್ಯಾ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ನಡುವೆ ಹೊಂದಾಣಿಕೆಯಾಗದ ಕಾರಣ ದಂಪತಿ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಅಲ್ಲದೇ 1 ಕೋಟಿ ರೂ. ಜೀವನಾಂಶ ಕೇಳಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಬೇಸತ್ತು ಮಾನಸ್ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ವಿಚ್ಛೇದನ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇನ್ನೂ ಕೊಲೆಗೆ ಕೇವಲ ಎರಡು ದಿನಗಳ ಮೊದಲು ಸ್ಥಳೀಯ ನ್ಯಾಯಾಲಯದಲ್ಲಿ ಇವರ ವಿಚ್ಛೇದನ ಪ್ರಕರಣ ವಿಚಾರಣೆಗೆ ಬಂದಿತ್ತು. ಇದಾದ ಬಳಿಕ ಜೀವನಾಂಶದ ವಿಚಾರವಾಗಿ ಇಬ್ಬರ ನಡುವೆ ವಿವಾದ ಭುಗಿಲೆದ್ದಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಸಹೋದರಿ ಶಿವ ವಾಜಪೇಯಿಯಿಂದಾಗಿ (28) ಮಾನಸ್ ಮತ್ತು ದಿವ್ಯಾ ಅವರ ಸಂಬಂಧ ಹದಗೆಟ್ಟಿತ್ತು ಎಂದು ಹೇಳಲಾಗಿದೆ. ಶಿವ ದಂಪತಿಯೊಂದಿಗೆ ವಾಸಿಸುತ್ತಿದ್ದರು. ಇದು ದಿವ್ಯಾ ಅವರಿಗೆ ಇಷ್ಟವಾಗಿರಲಿಲ್ಲ ಎನ್ನಲಾಗಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದ ದಿವ್ಯಾ ಸಹೋದರಿ ಯೂಟ್ಯೂಬರ್ ಪ್ರಜ್ಞಾ ಮಿಶ್ರಾ, ಮಾನಸ್, ಒಂದು ಬಾರಿ ಆನ್‌ಲೈನ್‌ನಲ್ಲಿ ತರಿಸಿದ ಟೊಮ್ಯಾಟೋ ಕೊಳೆತುಹೋಗಿತ್ತು ಎಂಬ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದ. ಒಮ್ಮೆ ಮಾನಸ್ ಮತ್ತು ಆತನ ತಂಗಿ ಸೇರಿ ದಿವ್ಯಾ ಅವರ ತಾಯಿಯ ಮೇಲೂ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ.
ಮಾನಸ್ ನನ್ನು “ಸೈಕೋ” ಎಂದು ಕರೆದ ಪ್ರಜ್ಞಾ, ಆತ ನನ್ನ ತಂಗಿಯೊಂದಿಗೆ ಹೇಗೆ ಕ್ರೂರವಾಗಿ ವರ್ತಿಸುತ್ತಿದ್ದನೆಂದು ನನಗೆ ತಿಳಿದಿತ್ತು. ಅದಕ್ಕಾಗಿಯೇ ಅವಳು ಅವನಿಂದ ಬೇರೆಯಾಗಲು ಬಯಸುತ್ತಿದ್ದಳು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಆತ ರಿವಾಲ್ವರ್ ಹೇಗೆ ಪಡೆದುಕೊಂಡ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಎದುರೇ ಗುಂಡಿಕ್ಕಿ ಪತ್ನಿ ಕೊಂದ ಲಕ್ನೋ SBI ಉದ್ಯೋಗಿ – ಮನೆಯಲ್ಲಿ ಸಹೋದರಿ ಕೊಂದು ತಾನೂ ಆತ್ಮಹತ್ಯೆ

