ಬೆಂಗಳೂರು: ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ತಂತ್ರಜ್ಞಾನ, ಉತ್ಪನ್ನಗಳು ಮತ್ತು ನವೀನ ಪರಿಹಾರಗಳನ್ನು ರೂಪಿಸಲು ಸ್ಟಾರ್ಟ್‌ಅಪ್‌ಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವ ಉದ್ದೇಶದಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆ ‘Tourism Startup Promotion Policy’ ರೂಪಿಸಲಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ (K.J.George) ತಿಳಿಸಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರದ ನೈಜ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸ್ಟಾರ್ಟ್‌ಅಪ್‌ಗಳು, ಯುವ ಉದ್ಯಮಿಗಳು ಮತ್ತು ನವೋದ್ಯಮಿಗಳಿಗೆ ಅವಕಾಶ ಕಲ್ಪಿಸುವುದು ಉದ್ದೇಶಿತ ನೀತಿಯ ಪ್ರಮುಖ ಆಶಯವಾಗಿದೆ ಎಂದರು. ಇದನ್ನೂ ಓದಿ: ಅನ್ನಸೇವೆ ಆ್ಯಪ್ ನಾಳೆಯಿಂದ ರಾಜ್ಯಾದ್ಯಂತ ಲಭ್ಯ; ಅ.20ರೊಳಗೆ e-KYC ಕಡ್ಡಾಯ
ಪ್ರವಾಸಿಗರ ಅನುಭವ, ಡಿಜಿಟಲ್ ಸೇವೆಗಳು, ಪ್ರವಾಸಿ ತಾಣಗಳ ನಿರ್ವಹಣೆ, ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛತೆ, ಸಂಚಾರ, ಸುರಕ್ಷತೆ, ಪ್ರವೇಶ ಸೌಲಭ್ಯ, ಪ್ರವಾಸಿ ಮಾಹಿತಿ ಹಾಗೂ ಸ್ಥಳೀಯ ಅನುಭವಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಪರಿಹಾರಗಳನ್ನು ರೂಪಿಸಲು ನೀತಿಯಡಿ ಅವಕಾಶ ಕಲ್ಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕವು ದೇಶದ ಪ್ರಮುಖ ಸ್ಟಾರ್ಟ್‌ಅಪ್ ಕೇಂದ್ರವಾಗಿದೆ. ಈ ನಾವಿನ್ಯತೆಯ ಶಕ್ತಿಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಬೇಕು. ಪ್ರವಾಸೋದ್ಯಮ ಇಲಾಖೆಯ ಅಗತ್ಯಗಳು ಮತ್ತು ಸವಾಲುಗಳನ್ನು ಸ್ಟಾರ್ಟ್‌ಅಪ್‌ಗಳ ಮುಂದೆ ಇಟ್ಟು, ಅವರು ಹೊಸ ಪರಿಹಾರ, ಉತ್ಪನ್ನ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡುವುದು ನಮ್ಮ ಉದ್ದೇಶ. ಉತ್ತಮ ಆಲೋಚನೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿ, ಫಲಿತಾಂಶ ನೀಡುವ ಪರಿಹಾರಗಳನ್ನು ಪ್ರವಾಸೋದ್ಯಮ ವ್ಯವಸ್ಥೆಯಲ್ಲಿ ಬಳಸಿಕೊಳ್ಳುವಂತಹ ವಾತಾವರಣವನ್ನು ರೂಪಿಸಲು ಈ ನೀತಿ ನೆರವಾಗಲಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯಕ್ಕೆ ಪರಿಶಿಷ್ಟರ ಮೀಸಲಾತಿ ಹಕ್ಕಿಗೆ ಹಿನ್ನಡೆ: ಛಲವಾದಿ
ಪ್ರವಾಸೋದ್ಯಮದ ಅಭಿವೃದ್ಧಿ ಎಂದರೆ ಕೇವಲ ಹೊಸ ತಾಣಗಳು ಅಥವಾ ಮೂಲಸೌಕರ್ಯ ನಿರ್ಮಾಣವಲ್ಲ. ಪ್ರವಾಸಿಗರ ಪ್ರಯಾಣವನ್ನು ಸುಲಭ, ಸುರಕ್ಷಿತ ಮತ್ತು ಸ್ಮರಣೀಯವಾಗಿಸುವ ಹೊಸ ಪರಿಹಾರಗಳೂ ಅಗತ್ಯ. ಸ್ಟಾರ್ಟ್‌ಅಪ್‌ಗಳಿಗೆ ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರವೇ ಹೊಸ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸುವ ವೇದಿಕೆಯಾಗಬೇಕು ಎಂದು ತಿಳಿಸಿದರು.

