ಬೆಂಗಳೂರು: ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳಿಗೆ ಸಿಹಿಸುದ್ದಿ. ಫಲಾನುಭವಿಗಳು ಮನೆಯಲ್ಲೇ ಕುಳಿತು e-KYC ಮಾಡಿಕೊಳ್ಳಲು ಅನುಕೂಲವಾಗುವ ‘ಅನ್ನಸೇವೆ’ ಮೊಬೈಲ್ ಆ್ಯಪ್ ಅಕ್ಟೋಬರ್ 14ರಿಂದ ರಾಜ್ಯಾದ್ಯಂತ ಲಭ್ಯವಾಗಲಿದೆ. e-KYC ಪೂರ್ಣಗೊಳಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮತ್ತು ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಈ ಆ್ಯಪ್ ಅನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅಕ್ಟೋಬರ್ 1ರಂದು ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಅವಕಾಶ ನೀಡಲಾಗಿತ್ತು. ಇದೀಗ ರಾಜ್ಯದ ಎಲ್ಲ ಜಿಲ್ಲೆಗಳ ಫಲಾನುಭವಿಗಳೂ ಗೂಗಲ್ ಪ್ಲೇ ಸ್ಟೋರ್ನಿಂದ ಆ್ಯಪ್ ಡೌನ್ಲೋಡ್ ಮಾಡಿಕೊಂಡು UIDAI Face Authentication ಮೂಲಕ e-KYC ಮಾಡಿಕೊಳ್ಳಬಹುದು.
ಅಕ್ಟೋಬರ್ 1ರಿಂದ 12ರವರೆಗೆ ಎಂಟು ಜಿಲ್ಲೆಗಳ 1,60,267 ಫಲಾನುಭವಿಗಳು ಆ್ಯಪ್ ಮೂಲಕ e-KYC ಪೂರ್ಣಗೊಳಿಸಿದ್ದಾರೆ. ರಾಜ್ಯದಲ್ಲಿ e-KYC ಮಾಡಿಸಬೇಕಿರುವ 2.67 ಕೋಟಿಗೂ ಅಧಿಕ ಫಲಾನುಭವಿಗಳ ಪೈಕಿ 2,06,76,278 ಮಂದಿ ಈಗಾಗಲೇ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯಕ್ಕೆ ಪರಿಶಿಷ್ಟರ ಮೀಸಲಾತಿ ಹಕ್ಕಿಗೆ ಹಿನ್ನಡೆ: ಛಲವಾದಿ
ಕೆಲಸಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗುವ ಕಾರ್ಮಿಕರು e-KYCಗಾಗಿ ಸ್ವಗ್ರಾಮಕ್ಕೆ ಬಂದು ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ತೊಂದರೆಯನ್ನು ಈ ಆ್ಯಪ್ ಕಡಿಮೆ ಮಾಡಲಿದೆ. ಒಂದು ವರ್ಷದ ಹಿಂದೆ e-KYC ಮಾಡಿಸಿದ್ದವರೂ ಮತ್ತೊಮ್ಮೆ ಕಡ್ಡಾಯವಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಇಲಾಖೆ ತಿಳಿಸಿದೆ. ಉಳಿದ ಫಲಾನುಭವಿಗಳು ಅಕ್ಟೋಬರ್ 20ರೊಳಗೆ e-KYC ಮಾಡಿಸಿಕೊಳ್ಳುವಂತೆ ಸಚಿವ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.ಇದನ್ನೂ ಓದಿ: 14 ವರ್ಷಗಳ ಕಾನೂನು ಹೋರಾಟ – ಪಂಕ್ಚರ್ ಆದ BMW ಕಾರಿಗೆ 70 ಲಕ್ಷ ಇನ್ಶೂರೆನ್ಸ್ ಪಡೆದ ಮಾಲೀಕ

