ಚಿಕ್ಕಮಗಳೂರು: ಸೌದಿ ಅರೇಬಿಯಾದ (Saudi Arabia) ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳು ದಾಳಿ ನಡೆಸಿದ ಬಳಿಕ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸುಮಾರು 4,000 ಕನ್ನಡಿಗರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ (Mecca) ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಶೇಷ ವಿಮಾನದ ವ್ಯವಸ್ಥೆ ಮಾಡಬೇಕು ಎಂದು ಚಿಕ್ಕಮಗಳೂರು (Chikkamagaluru) ಮೂಲದ ಅಪ್ಸರ್ ಹಿಂದೂಸ್ಥಾನಿ ಮನವಿ ಮಾಡಿದ್ದಾರೆ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮಧ್ಯಮ ವರ್ಗ ಹಾಗೂ ಕೆಳ ವರ್ಗದ ಜನರಿಗೆ ಸರ್ಕಾರ ಸ್ಪಂದಿಸಬೇಕು. ಕನ್ನಡಿಗರನ್ನ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕ್ರಮಕೈಗೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ – ವಿಮಾನ ಹಾರಾಟ ಸ್ಥಗಿತ
ವಿದೇಶಾಂಗ ಸಚಿವಾಲಯ ಕೂಡಲೇ ಕ್ರಮ ಕೈಗೊಳ್ಳಬೇಕು. ಸಿಎಂ ಡಿ.ಕೆ. ಶಿವಕುಮಾರ್ ತಕ್ಷಣ ಮಧ್ಯ ಪ್ರವೇಶಿಸಬೇಕು. ವಿಶೇಷ ವಿಮಾನದ ಮೂಲಕ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಬೇಕು ಎಂದು ಅಪ್ಸರ್ ಮನವಿ ಮಾಡಿದ್ದಾರೆ.
ಅ.8 ರಂದು ರಿಯಾದ್ ಏರ್ಪೋರ್ಟ್ ಮೇಲೆ ಇರಾನ್ ಬೆಂಬಲಿತ ಯೆಮೆನ್ನ ಹೌತಿ ಬಂಡುಕೋರರ ಗುಂಪು ಕ್ಷಿಪಣಿ ದಾಳಿ ನಡೆಸಿದ್ದಾಗಿ ಹೇಳಿಕೊಂಡಿತ್ತು. ಈ ಬೆಳವಣಿಗೆಯಿಂದ ಪ್ರದೇಶದಲ್ಲಿ ಈಗಾಗಲೇ ಇರುವ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿತ್ತು. ಇದಾದ ಬಳಿಕ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು. ನವೆಂಬರ್ 4ರವರೆಗೆ ಸೌದಿ ಏರ್ಲೈನ್ಸ್, ಇಂಡಿಗೋ ವಿಮಾನಗಳ ಹಾರಾಟ ಮುಂದೂಡಿಕೆ ಮಾಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಭೂಕಂಪನ – ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲು
