ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ತೂಬಗೆರೆ ಸಮೀಪ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ. ಇಂದು ಬೆಳಗ್ಗೆ 9 ಗಂಟೆ 1 ನಿಮಿಷ 59 ಸೆಕೆಂಡ್ಗೆ ಭೂಕಂಪನ ಸಂಭವಿಸಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಅಧಿಕೃತ ಮಾಹಿತಿ ನೀಡಿದೆ.
ತಿಮ್ಮೋಜನಹಳ್ಳಿ ಬಳಿ ಭೂಕಂಪನದ ಕೇಂದ್ರಬಿಂದು
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮೋಜನಹಳ್ಳಿ (Timmojanahalli) ಗ್ರಾಮದಿಂದ ಸುಮಾರು 500 ಮೀಟರ್ ಉತ್ತರಕ್ಕೆ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿಯ ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು KSNDMC ತಿಳಿಸಿದೆ. ಇದನ್ನೂ ಓದಿ: ಟಿಬೆಟ್ನಲ್ಲಿ ಪ್ರಬಲ ಭೂಕಂಪ; 18 ಮಂದಿ ಸಾವು, 300ಕ್ಕೂ ಹೆಚ್ಚು ಮನೆಗಳು ನೆಲಸಮ
ಭೂಕಂಪನದ ಕೇಂದ್ರಬಿಂದು ನರಗಾನಹಳ್ಳಿ ಗ್ರಾಮದಿಂದ ಸುಮಾರು 600 ಮೀಟರ್, ತೂಬಗೆರೆಯಿಂದ 1.1 ಕಿಲೋಮೀಟರ್ ಹಾಗೂ ಕರ್ನಾಲ ಗ್ರಾಮ ಪಂಚಾಯಿತಿಯಿಂದ 1.35 ಕಿಲೋಮೀಟರ್ ದೂರದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 20ರಿಂದ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಪನದ ಅನುಭವ ಸಾಧ್ಯತೆ. ಭೂಕಂಪನದ ಕೇಂದ್ರಬಿಂದುವಿನಿಂದ ಸುಮಾರು 20ರಿಂದ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಲಘು ಕಂಪನದ ಅನುಭವವಾಗಿರುವ ಸಾಧ್ಯತೆಯಿದೆ ಎಂದು KSNDMC ಅಂದಾಜಿಸಿದೆ. ಆದರೆ, ಭೂಕಂಪನದ ತೀವ್ರತೆ ಕಡಿಮೆ ಇರುವುದರಿಂದ ಸ್ಥಳೀಯ ಜನರಿಗೆ ಹಾಗೂ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಸ್ಪಷ್ಟಪಡಿಸಿದೆ.
ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
ಭೂಕಂಪನ ಸಂಭವಿಸಿದ ಪ್ರದೇಶವು ಭೂಕಂಪ ವಲಯ-2ರ (Seismic Zone II) ವ್ಯಾಪ್ತಿಯಲ್ಲಿದೆ. ಭೂವೈಜ್ಞಾನಿಕ ನಕ್ಷೆಯ ಪ್ರಕಾರ ಈ ಪ್ರದೇಶದಲ್ಲಿ ಪ್ರಮುಖ ಭೂಗರ್ಭ ರಚನಾತ್ಮಕ ವ್ಯತ್ಯಾಸಗಳು ಕಂಡುಬಂದಿಲ್ಲ ಎಂದು KSNDMC ತಿಳಿಸಿದೆ.
ಭೂಕಂಪನದ ಪ್ರಮಾಣ ಹಾಗೂ ತೀವ್ರತೆ ಕಡಿಮೆ ಇರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಭಯ ನೀಡಿದೆ.
