ಗದಗ: ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲೇ ಅಧಿಕಾರಿಗಳ ಬೇಜವಾಬ್ದಾರಿತನ ಕಂಡು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಗರಂ ಆದ ಘಟನೆ (Basvaraj Rayareddi) ಶಿರಹಟ್ಟಿಯಲ್ಲಿ (Gadag) ನಡೆದಿದೆ.
ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ಕುರಿತು ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆದರೆ ಸಭೆ ನಡೆಯುತ್ತಿದ್ದ ವೇಳೆ ಗದಗ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಉಮೇಶ್ ನಾಯಕ್ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಕುಳಿತಿದ್ದರು ಎನ್ನಲಾಗಿದೆ. ಇನ್ನು ಕೆಲ ಅಧಿಕಾರಿಗಳು ಮೊಬೈಲ್‌ನಲ್ಲಿ ಮಗ್ನರಾಗಿದ್ದರೆ, ಮತ್ತಷ್ಟು ಮಂದಿ ಪರಸ್ಪರ ಹರಟೆಯಲ್ಲಿ ತೊಡಗಿದ್ದರು.
ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಭಾಗವಹಿಸಿದ್ದ ಸಭೆಯಲ್ಲೇ ಅಧಿಕಾರಿಗಳ ಈ ವರ್ತನೆ ಕಂಡು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ತಪ್ಪು ಮಾಹಿತಿ ನೀಡಿದ ಅಧಿಕಾರಿಗಳಿಗೂ ವಾರ್ನಿಂಗ್ ನೀಡಿದ ಅವರು, “ದಪ್ಪ ಚರ್ಮದ ಅಧಿಕಾರಿಗಳಾಗಬೇಡಿ. ಸರಿಯಾಗಿ ಕೆಲಸ ಮಾಡಿ. ಕೆಲಸದಲ್ಲಿ ಬೇಜವಾಬ್ದಾರಿ ವರ್ತಿಸುತ್ತಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಆರು ತಿಂಗಳ ಬಳಿಕ ಪತಿ ಕೊಲೆ ರಹಸ್ಯ ಬಾಯ್ಬಿಟ್ಟ ಪತ್ನಿ – ಖತರ್‌ನಾಕ್ ಲೇಡಿ, ಪ್ರಿಯಕರ ಅರೆಸ್ಟ್
ಅಷ್ಟೇ ಅಲ್ಲ, ಬೇಜವಾಬ್ದಾರಿ ವರ್ತನೆ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.
ಇದಕ್ಕೂ ಮುನ್ನ ಸಚಿವ ಬಸವರಾಜ ರಾಯರೆಡ್ಡಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದರು. ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ ಬಳಿ ಮೆಕ್ಕೆಜೋಳ ಬೆಳೆದ ಜಮೀನಿಗೆ ಭೇಟಿ ನೀಡಿದ ಸಚಿವರು, ಬೆಳೆಗಳ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು.
ರೈತರು ಬಿತ್ತನೆ ಮಾಡಿ ತಿಂಗಳು ಕಳೆದರೂ ಬೆಳೆ ಚೇತರಿಕೆ ಕಂಡಿಲ್ಲ. ಕೆಲವು ಕಡೆ ಬೆಳೆ ಹುಟ್ಟಿಲ್ಲ. ಇನ್ನೂ ಕೆಲವು ಕಡೆ ಬೆಳೆ ಹಸಿರಾಗಿ ಕಂಡರೂ ಫಸಲು ಬರುವ ಸ್ಥಿತಿ ಇಲ್ಲ ಎಂದು ರೈತರು ಸಚಿವರ ಗಮನಕ್ಕೆ ತಂದರು.
ಈ ಕುರಿತು ಅಧಿಕಾರಿಗಳಿಂದ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸುವುದಾಗಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು. ಈ ವೇಳೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಎಡಿಸಿ ದುರಗೇಶ್, ಎಸಿ ಗಂಗಪ್ಪ, ತಹಶೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಕಲಬುರಗಿ | ಲಕ್ಷಾಂತರ ಮೌಲ್ಯದ ಪಂಪ್ ಸೆಟ್ ಕೇಬಲ್ ಕಳ್ಳತನ
