ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ರಿಲೀಸ್ ಆಗಿ ವಾರದ ನಂತರ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದ್ದರೂ, ಅದರ ಕುರಿತಾಗಿ ನಡೆಯುತ್ತಿರುವ ಚರ್ಚೆ ಮಾತ್ರ ನಿಂತಿಲ್ಲ. ಹಲವು ಕಡೆ ಸಿನಿಮಾದ ಬಗ್ಗೆ ದೂರು ನೀಡಲಾಗಿದೆ. ದೇಶದ ಹೈಕೋರ್ಟ್ ಗಳು ಚಿತ್ರದ ಚಿಂತನೆಯನ್ನು ಗಂಭೀರವಾಗಿ ತಗೆದುಕೊಂಡಿವೆ. ಹೀಗಾಗಿ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗುತ್ತಲೇ ಇದೆ.
ಆದಿಪುರುಷ (Adipurush) ಸಿನಿಮಾವನ್ನು ನೇಪಾಳ ಸರಕಾರ ಬ್ಯಾನ್ ಮಾಡಿತ್ತು. ಚಿತ್ರದಲ್ಲಿ ಸೀತೆ ಬಗ್ಗೆ ಹೇಳಲಾದ ಡೈಲಾಗ್ ಸರಿಯಾಗಿಲ್ಲ ಎಂದು ಕಠ್ಮಂಡು ಮೇಯರ್ ಕೋರ್ಟ್ ಮೆಟ್ಟಿಲು ಏರಿದ್ದರು. ಸಿನಿಮಾವನ್ನು ಬ್ಯಾನ್ ಮಾಡುವುದು ಸರಿಯಲ್ಲ ಎಂದು ಅಲ್ಲಿನ ಹೈಕೋರ್ಟ್ ಹೇಳಿದ್ದರೂ, ಇತಿಹಾಸಕ್ಕೆ ಅಪಚಾರ ಮಾಡಬಾರದು ಎನ್ನುವುದನ್ನು ಎತ್ತಿ ಹಿಡಿದಿತ್ತು. ಇದೀಗ ಅಲಹಾಬಾದ್ (Allahabad) ಹೈಕೋರ್ಟ್ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದೆ.
ಆದಿಪುರುಷ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಕುರಿತಂತೆ ಸಲ್ಲಿಸಲಾದ ಅರ್ಜಿಯನ್ನು ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟಿನ (High Court) ಲಕ್ನೋ ಪೀಠವು ಚಿತ್ರತಂಡದ ಜೊತೆ ಸೆನ್ಸಾರ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದೆ. ‘ಭಾರತೀಯರು ಸಹಿಷ್ಟುಗಳು ಎನ್ನುವ ಕಾರಣಕ್ಕೆ ಸಹನೆ ಪರೀಕ್ಷೆ ಮಾಡಲಾಗುತ್ತಿದೆಯೇ?’ ಎಂದು ಪ್ರಶ್ನೆ ಮಾಡಿದೆ. ಇದನ್ನೂ ಓದಿ: ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಹಾಟ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ
ರಾಮಾಯಣವನ್ನು ಜನರು ಪವಿತ್ರ ಎಂದು ದಿನವೂ ಪಠಿಸುತ್ತಾರೆ. ರಾಮಚರಿತಮಾನಸವನ್ನು ಓದುತ್ತಾರೆ. ಇಂತಹ ರಾಮಾಯಣವನ್ನೇ ಸಿನಿಮಾ ಮಾಡಿ, ಆ ನಂತರ ಸಿನಿಮಾಗೂ ರಾಮಾಯಣಕ್ಕೂ ಸಂಬಂಧವಿಲ್ಲ ಎಂದರೆ ಮಾಡಿದ ತಪ್ಪು ಮುಚ್ಚಿದಂತೆ ಆಗುತ್ತದೆ? ಚಿತ್ರದಲ್ಲಿನ ಸಂಭಾಷಣೆಗಳು ಕೂಡ ಅಪಮಾನ ಮಾಡುವಂತಿವೆ. ಈ ಸಿನಿಮಾ ನೋಡಿದ ಮೇಲೂ ಜನರು ತಾಳ್ಮೆ ಕಳೆದುಕೊಂಡಿಲ್ಲ ಎನ್ನುವುದು ಅವರ ಸಹಿಷ್ಣುತೆಯನ್ನು ತೋರಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ.
ದೇವರು ಎಂದು ಪೂಜಿಸುವ ಭಗವಾನ್ ಹನುಮಾನ್ ಮತ್ತು ಸೀತೆಯನ್ನು ಸಿನಿಮಾದಲ್ಲಿ ಏನೂ ಅಲ್ಲ ಎನ್ನುವಂತೆ ತೋರಿಸಿದ್ದೀರಿ. ಕೆಲವು ದೃಶ್ಯಗಳು ವಯಸ್ಕ ವರ್ಗಕ್ಕೆ ಸೇರುವಂತಹವು ಆಗಿವೆ. ನೀವು ಏನನ್ನು ತೋರಿಸಲು ಹೊರಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಲ್ಲದೇ, ಸಂಭಾಷಣೆ ಬರೆದಿರುವ ಮನೋಜ್ (Manoj) ಅವರಿಗೂ ನೋಟಿಸ್ ನೀಡಿ, ಕಕ್ಷಿದಾರನನ್ನಾಗಿ ಮಾಡಿ ಎಂದು ನಿರ್ದೇಶನ ನೀಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಒಂದು ವಾರದಲ್ಲಿ ಉತ್ತರಿಸುವಂತೆ ಕೋಟ್ ನಿರ್ದೇಶಿಸಿದೆ.