ಮಳೆಹನಿಗಳು ನೆಲವನ್ನು ಸೋಕಿದ್ರೆ ಹಸಿರು ಹುಕ್ಕುತ್ತದೆ, ಬೆಟ್ಟಗಳಿಗೆ ಮುತ್ತಿಕ್ಕುವ ಮೋಡಗಳು, ಮೈ ನೆರವೇರಿಸುವ ತಂಪುಗಾಳಿ, ಸುರಿವ ಸೋನೆ ಮಳೆ… ಪ್ರವಾಸಿಗರನ್ನ ಒಂದೆಡೆ ಕೂರಲು ಬಿಡೋದಿಲ್ಲ. ಕಾಂಕ್ರೀಟ್ ಕಾಡುಗಳ ನಡುವೆಯೂ ಮೂಡಿದ ಸುಂದರ ತಾಣ ಎಂಥವರನ್ನೂ ಕೈಬೀಸಿ ಕರೆಯುತ್ತದೆ. ಅಲ್ಲಿ ಜನಜಂಗುಳಿಯಿಲ್ಲ, ವೆಹಿಕಲ್‌ನ ಆರನ್ ಸೌಂಡುಗಳಂತೂ ಇಲ್ಲವೇ ಇಲ್ಲ, ಮೊಬೈಲ್ ರಿಂಗಣ ಕೇಳಿಸುವುದೇ ಇಲ್ಲ. ಹೊಸ ಹೊಸ ಅನುಭವ ಹೊಸ ಸಾಹಸಕ್ಕೆ ಅಣಿಯಾಗುವಂತೆ ಪ್ರೇರೇಪಿಸುತ್ತಲೇ ಇರುತ್ತದೆ. ಆದ್ರೆ ಬೇಸಿಗೆ ಪ್ರವಾಸ (Summer Tour) ಇದಕ್ಕೆ ತದ್ವಿರುದ್ಧ. ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂತೆಂದ್ರೆ ಹಳ್ಳಿಗೆ ಹೋಗಿ, ಅಜ್ಜ-ಅಜ್ಜಿ ಜೊತೆ ಕಾಲ ಕಳೆದು ನದಿ, ತೊರೆ ಸಿಕ್ಕರೆ ಒಂದೆರಡು ಮುಳುಗು ಹಾಕಿ, ತೋಟಗಳಲ್ಲಿ ಸುತ್ತುಹಾಕಿ ಬರುತ್ತಿದ್ದೆವು. ದೊಡ್ಡವರಾದಂತೆ ನಮ್ಮ ಯೋಚನೆ ಭಿನ್ನವಾಗುತ್ತಿತ್ತು.
ಎಂತಹ ದುರ್ಗಮ ಕಾಡುಗಳಾದ್ರೂ ಸರಿ, ನದಿ ತೊರೆ ಜಲಪಾತಗಳಿದ್ದರೂ ಸರಿ ನೋಡಲೇಬೇಕು ಅನ್ನಿಸಿದ್ರೆ ತಕ್ಷಣವೇ ಪ್ರವಾಸ ಕೈಗೊಳ್ಳುತ್ತಿದ್ದ ನಮ್ಮ ಸ್ನೇಹಿತರ ತಂಡ ಈ ಬಾರಿ ಹೊರಟಿದ್ದು ಪರಿಚಯವೇ ಇಲ್ಲದಂತಹ ಥೈಲ್ಯಾಂಡ್‌ಗೆ (Thailand).

ಹೌದು. ಥೈಲ್ಯಾಂಡ್ ಅತ್ಯಂತ ಸುಂದರವಾದ ದೇಶ. ಬೇಸಿಯಲ್ಲಿ ರಣಬಿಸಿಲು ಮೈಗೆ ಬೆಂಕಿಯಿಟ್ಟಂತಾಗುತ್ತದೆ ಅನ್ನೋದುಬಿಟ್ರೆ, ಈ ದೇಶದ ಪ್ರವಾಸಿ ಆಕರ್ಷಣೆಗೆ ಮರುಳಾಗದವರೇ ಇಲ್ಲ. ವಿಶ್ವದ ಅನೇಕ ಭಾಗದ ವಿದೇಶಿ ಸಾಹಸಿಗರು ಇಲ್ಲಿಗೆ ಬರುತ್ತಾರೆ. ಥೈಲ್ಯಾಂಡ್ ಎಲ್ಲಾ ವಯೋಮಾನದವರಿಗೂ ಬಹಳ ಪ್ರಿಯವಾದ ದೇಶ ಎಂದೇ ಹೇಳಬಹುದು. ಇಲ್ಲಿ ಮನರಂಜನೆಯಿಂದ ಹಿಡಿದು ಪ್ರಕೃತಿಯ ಅಸಾಧಾರಣ ದೃಶ್ಯಾವಳಿಗಳವರೆಗೆ ನೋಡಲು ಎರಡು ಕಣ್ಣು ಸಾಲದು, ವರ್ಣಿಸಲು ಪದಗಳೇ ಸಿಗದು. ಥೈಲ್ಯಾಂಡ್ ಪ್ರವಾಸ ಮಾಡುವವರು ತನ್ನ ವರ್ಣರಂಜಿತ ನಗರಗಳಾದ ಕ್ರಾಬಿ, ಫುಕೆಟ್, ಬ್ಯಾಂಕಾಕ್‌ಗಳಿಗೆ ಹೆಚ್ಚಾಗಿ ಹೋಗುತ್ತಾರೆಯಾದರೂ, ಇಲ್ಲಿನ ಒಂದೇ ಒಂದು ಆಕರ್ಷಣೆ ಮಾತ್ರ ಈ ದೇಶಕ್ಕೆ ಬರುವ ಪ್ರವಾಸಿಗರು ಭೇಟಿ ನೀಡದೇ ಹಿಂತಿರುಗಲ್ಲ… ಅದುವೇ ʻಪಟ್ಟಾಯʼ..!

ಪಟ್ ಪಟ್ ಪಟ್ಟಾಯ….
ಹೇಳಬೇಕೆಂದ್ರೆ ರಸಿಕರಿಗೆ ಇಲ್ಲಿಯ ರಾತ್ರಿಜೀವನ ಬೇರೆಯದ್ದೇ ಅನುಭವ ನೀಡುತ್ತದೆ. ಪಟ್ಟಾಯ (Pattaya) ಬ್ಯಾಂಕಾಕ್‌ನಿಂದ ಸುಮಾರು 150 ರಿಂದ 165 ಕಿಮೀ ದೂರದಲ್ಲಿದೆ. ಬೀಚ್‌ಗಳು, ರೋಮಾಂಚಕ ರಾತ್ರಿಜೀವನ, ಕೋರಲ್ ಐಲ್ಯಾಂಡ್, ವಿಶ್ವದ ಅತಿದೊಡ್ಡ ಉದ್ಯಾನಗಳಲ್ಲಿ ಒಂದಾದ ನಾಂಗ್‌ನೂಚ್ ಉದ್ಯಾನ ಮತ್ತು ಸ್ಯಾಂಚುರಿ ಆಫ್ ಟ್ರುಥ್ ದಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ನವೆಂಬರ್‌ನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ. ಆದ್ರೆ ನಾವು ಹೋಗಿದ್ದು, ಬಿರುಬಿಸಲು ಅಪ್ಪಳಿಸುತ್ತಿದ್ದ ಏಪ್ರಿಲ್ ಮಾಹೆಯ ಕೊನೆಯಲ್ಲಿ. ಅಲ್ಲಿನ ನೆಲಕ್ಕೆ ಕಾಲಿಡುತ್ತಿದ್ದಂತೆ ಬಿಸಿಗಾಳಿ ಮುಖಕ್ಕೆ ರಪ್ಪನೆ ಬಡಿಯಿತು, ಕೊನೆಗೆ ನಮ್ಮ ಪ್ರವಾಸವೂ ಕೂಡ ಆ ಬಿಸಿನೊಂದಿಗೆ ಅಂತ್ಯವಾಯಿತು. ಬೆಳಗ್ಗಿನಿಂದ ರಣಬಿಸಿಲಿನಲ್ಲೇ ಸುತ್ತಾಡುತ್ತಿದ್ದ ನಮಗೆ ಅಲ್ಲಲ್ಲಿ ಸಿಗುತ್ತಿದ್ದ ಎಸಿ, ನೀರಿನ ಕೊಳಕ್ಕೆ ಅದ್ದಿ ಎತ್ತಿದಂತಾಗ್ತಿತ್ತು. ಒಂದು ಕಡೆ ಮೈಬಿಸಿ ಏರಿಸುವ ರಾತ್ರಿ ಜೀವನ, ಮತ್ತೊಂದು ಕಡೆ ಧಾರ್ಮಿಕ ಭಾವನೆ ಮೂಡಿಸುವ ದೇವಸ್ಥಾನ ಒಂದಕ್ಕೊಂದು ಸಂಬಂಧವಿಲ್ಲದಿದ್ರೂ, ಅದನ್ನೊಂದು ಪ್ರವಾಸಿ ತಾಣವೆಂದಷ್ಟೇ ಪರಿಗಣಿಸಿ 5 ದಿನ ಎಂಜಾಯ್ ಮಾಡಿದ್ದಂತೂ ಜೀವನದ ಸುಂದರ ಅನುಭವವೇ ಸರಿ.
ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನ ನಾವು ನೋಡಿದ್ವಿ? ಅಲ್ಲಿ ನಮಗಾದ ಅನುಭವ ಹೇಗಿತ್ತು? ಅನ್ನೋದನ್ನ ಈ ಹಂಚಿಕೊಳ್ಳುತ್ತಿದ್ದೇನೆ.. ಇದು ನಿಮಗೂ ಪ್ರವಾಸಕ್ಕೆ ಪ್ರಚೋದಿಸಬಹುದು..

ನೋಡಿದಷ್ಟೂ ನೋಡಬೇಕೆನ್ನಿಸುವ ʻನಾಂಗ್ ನೂಚ್ʼ ಉದ್ಯಾನ
ಥೈಲ್ಯಾಂಡ್‌ಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಬೆಳ್ಳಂಬೆಳಗ್ಗೆ ವಿಭಿನ್ನ ಖಾದ್ಯಗಳನ್ನ ತಿಂದು ಯುದ್ಧಕ್ಕೆ ಸಿದ್ಧವಾದಂತೆ ಪ್ರವಾಸಕ್ಕೆ ಅಣಿಯಾಗುತ್ತಿದ್ದವು. ಮೊದಲ ದಿನ ಪಟ್ಟಾಯದಿಂದ ಸುಮಾರು 22 ಕಿಮಿ ದೂರದ ಕಲಾಹಿರಿಮೆ ಸಾರುವ ನಾಂಗ್‌ನೂಚ್ ಉದ್ಯಾನಕ್ಕೆ ಭೇಟಿ ನೀಡಿದೆವು. ವಿಶ್ವದ ಎಲ್ಲೆಡೆಯಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಉದ್ಯಾನವಿದು. ನಾಂಗ್‌ನೂಚ್ ಉದ್ಯಾನವು ಅಂದಾಂಜು 500 ಎಕ್ರೆ ಪಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಆದ್ರೆ ನಮ್ಮ 5 ದಿನ ಪ್ರವಾಸದ ಸಮಯದಲ್ಲಿ ಇಡೀ ಉದ್ಯಾನ ನೋಡುವುದು ತೀರಾ ಅಸಾಧ್ಯ. ಇಲ್ಲಿ ಒಟ್ಟು 9 ಬಗೆಯ ಟ್ರಾಪಿಕಲ್ ಉದ್ಯಾನಗಳಿವೆ. 3,000 ಜನ ನಿತ್ಯ ಕೆಲಸ ಮಾಡುತ್ತಾರೆ. ಉದ್ಯಾನದಲ್ಲಿ 1 ಗಂಟೆ ಸುತ್ತುಹಾಕಲು 200 ಬಾತ್ ಅಂದ್ರೆ ಭಾರತೀಯ ರೂಪಾಯಿಯಲ್ಲಿ 600 ರೂ. ಚಾರ್ಜ್ ಮಾಡುತ್ತಾರೆ. ಹಾಗಿದ್ರೆ, ಇದರ ರಹಸ್ಯವನ್ನೊಮ್ಮೆ ಕೆದಕಲೇಬೇಕಲ್ಲವೇ…?

ʻನಾಂಗ್‌ನೂಚ್ʼ ಬಗ್ಗೆ ನಿಮಗೆಷ್ಟು ಗೊತ್ತು?
1954 ರಲ್ಲಿ ಪಿಸಿಟ್ ಹಾಗೂ ನಾಂಗ್‌ನೂಚ್ ತನ್‌ಸಚ್ಚ ಎಂಬ ದಂಪತಿ ಹಣ್ಣಿನ ತೋಟ ಮಾಡುವ ಸಲುವಾಗಿ ಈ ಜಾಗ ಕೊಂಡುಕೊಂಡರಂತೆ. ಈ ಜಾಗ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಹಣ್ಣಿನ ಗಿಡಗಳನ್ನು ಬೆಳೆಯಲು ಸಾಧ್ಯವಿಲ್ಲವೆಂದು ತಿಳಿದ ಅವರು ಹಣ್ಣಿನ ತೋಟ ಮಾಡುವ ಬದಲು ಸುಂದರವಾದ ಉದ್ಯಾನಗಳನ್ನು ನಿರ್ಮಿಸಲು ತೀರ್ಮಾನಿಸಿದ್ರಂತೆ. ಅವರ ಪ್ರಯತ್ನದಿಂದಾಗಿ 1980 ರಲ್ಲಿ ವಿಶ್ವಪ್ರವಾಸಿಗರಿಗೆ ಒಂದು ಹೊಸ ಉದ್ಯಾನ ವೀಕ್ಷಿಸಲು ಲಭ್ಯವಾಯಿತು. ಇಂದು ಈ ಉದ್ಯಾನವನ ಪಟ್ಟಾಯದಲ್ಲಿಯೇ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ವಿಶ್ವದ ಅಗ್ರ 10 ಉದ್ಯಾನಗಳಲ್ಲಿ ಇದೂ ಒಂದಾಗಿದೆ.

ನಾವು ಮೊದಲು ಅಲ್ಲಿ ಟೆರಾಕೋಟಾದಿಂದ ಸಿದ್ಧಪಡಿಸಿರುವ ಕಲಾಕೃತಿಗಳ ಉದ್ಯಾನವನಕ್ಕೆ ಭೇಟಿ ನೀಡಿದೆವು. ಉದ್ಯಾನವನದೊಳಗೆ ಹೊಕ್ಕರೆ ಒಂದನ್ನೊಂದು ಮೀರಿಸುವ ಕಲೆ ಅಲ್ಲಿ ನಿರ್ಮಾಣವಾಗಿತ್ತು, ಮರಗಳಿಂದ ಕೆತ್ತನೆ ಮಾಡಿದ್ದ ಆಕೃತ್ತಿಗಳು ಜೀವಂತವಾಗಿದ್ದಂತೆ ಭಾಸವಾಗ್ತಿತ್ತು. ಆಳೆತ್ತರದ ಹೂದಾನಿಗಳು, ಅಲಂಕಾರಿಕ ಕಂಬಗಳು ಒಂದಕ್ಕೊಂದು ತಳುಕುಹಾಕಿಕೊಂಡಿರುವ ಹೂ-ಬಳ್ಳಿಗಳು ಪ್ರವಾಸಿಗರಿಗೆ ದೊಡ್ಡ ಆಕರ್ಷಣೆ. ಅಲ್ಲಿಂದ ಮುಂದೆ ಸಾಗಿದರೆ ನಾನಾ ಅಳತೆಗಳ ಕುಂಡಗಳಿಂದ ಸುಂದರವಾಗಿ ಜೋಡಿಸಿರುವ ದೊಡ್ಡ ದೊಡ್ಡ ಕಮಾನುಗಳು, ಮುಗಿಲಿಗೆ ಮುತ್ತಿಡುತ್ತಿದ್ದಂತೆ ಕಾಣುತ್ತಿದ್ದ ಡೈನೋಸಾರ್ ಆಕೃತಿಗಳು ಇವೆಲ್ಲವನ್ನ ನೋಡಲು ಎರಡು ಕಣ್ಣು ಸಾಲದು. 500 ಎಕ್ರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಉದ್ಯಾನ ಪೂರ್ಣವಾಗಿ ನೋಡಬೇಕೆಂದ್ರೆ, 2-3 ದಿನಗಳೂ ಸಾಲದು. ಆದ್ರೆ ನಮಗೆ ಸಿಕ್ಕಿದ್ದು ಮಾತ್ರ ಒಂದುಗಂಟೆ ಅವಕಾಶ. ಸಿಕ್ಕಿದ್ದೇ ಸೀರುಂಡೆ ಅಂತ ಅಷ್ಟಕ್ಕೆ ತೃಪ್ತಿಪಟ್ಟುಕೊಂಡೆವು.

ಕಾಸಿದ್ದೋನೇ ಬಾಸು ಅನ್ನೋದು ಆನೆಗೂ ಗೊತ್ತು
ಕಾಸಿದ್ದೋನೇ ಬಾಸು ಅನ್ನೋ ಗಾದೆ ಮಾತು ನೀವು ಕೇಳಿಯೇ ಇರುತ್ತೀರಿ, ಪ್ರವಾಸಿ ತಾಣಗಳಿಗೆ ಹೋದಾಗ ಸಿಕ್ಕಸಿಕ್ಕಿದ್ದಕ್ಕೆ ಹಣ ಪೀಕುವುದು ಕೆಲವರ ಛಾಳಿ. ಆದ್ರೆ ಇಲ್ಲಿ ಮನುಷ್ಯರು ಮಾತ್ರವಲ್ಲ ಆನೆಗಳು ಕೂಡ ತುಂಟಾಟ ಮಾಡುತ್ತಲೇ ಪ್ರವಾಸಿಗರಿಂದ ಕಮಾಯ್ ಮಾಡಿಕೊಳ್ಳುತ್ತವೆ.
ಹೌದು. ಥಾಯ್ಲೆಂಡ್‌ನ ಎಲಿಫೆಂಟ್ ಶೋ ಪ್ರವಾಸಿಗರಿಗೆ ಅತ್ಯಂತ ಜನಪ್ರಿಯ ಮತ್ತು ರೋಮಾಂಚನಕಾರಿ ಅನುಭವ ನೀಡುತ್ತವೆ. ಮುಖ್ಯವಾಗಿ ನಾಂಗ್‌ನೂಚ್ ಟ್ರಾಪಿಕಲ್ ಗಾರ್ಡನ್ (ಪಟ್ಟಾಯ) ನಲ್ಲಿ ನಡೆಯುವ ಎಲಿಫೆಂಟ್ ಶೋ ಅತ್ಯದ್ಭುತ. ಪ್ರತಿದಿನ ಇಲ್ಲಿ ಆನೆಗಳ ಪ್ರದರ್ಶನ ನಡೆಯುತ್ತದೆ, ಮುಖ್ಯ ಪ್ರದರ್ಶನವು ಬೆಳಗ್ಗೆ 10:30 ಕ್ಕೆ ಇರುತ್ತದೆ. ಇಲ್ಲಿ ಆನೆಗಳು ನೃತ್ಯ ಮಾಡುವುದಷ್ಟೇ ಅಲ್ಲ, ಫುಟ್‌ಬಾಲ್, ಚಿತ್ರಕಲೆಗಳನ್ನು ಪ್ರರ್ಶಿಸುತ್ತವೆ. ಅಷ್ಟೇ ಅಲ್ಲ ಥಾಯ್ ಸಂಸ್ಕೃತಿ ಬಿಂಬಿಸುವ ʻಯುತ ಹಥಿʼ ಎಂಬ ಐತಿಹಾಸಿಕ ಯುದ್ಧದ ದೃಶ್ಯಗಳನ್ನೂ ಪ್ರದರ್ಶಿಸುತ್ತವೆ. ಕಾಸು ಕೊಟ್ರೆ ನಿಮ್ಮನ್ನೂ ಎತ್ತಿ ಕುಣಿಸುತ್ತವೆ. ನೀವು ಕಾಸು ಕೊಡದಿದ್ದರೆ ಮೂಸಿಯೂ ನೋಡುವುದಿಲ್ಲ… ಇದೊಂದು ನಮಗಾದ ವಿಚಿತ್ರ ಅನುಭವ.

ಅಲ್ಲಿದ್ದದ್ದು ಹೆಣ್ಣು… ಹೆಣ್ಣಲ್ಲ ಗಂಡು…
ಇದೇನಿದು ತಲೆಗೆ ಉಳಬಿಟ್ಟೆ ಅಂದುಕೊಳ್ಳಬೇಡಿ.. ಪಟ್ಟಾಯದಲ್ಲಿ ನಡೆಯುವ ಅಲ್ಕಾಝರ್ ಶೋ ವಿಶ್ವಪ್ರಸಿದ್ಧ ಕ್ಯಾಬರೆ ನೃತ್ಯ ಪ್ರದರ್ಶನ. ಅದ್ಭುತ ನೃತ್ಯ, ಸಂಗೀತ, ವೇಷಭೂಷಣ ಮತ್ತು ತಂತ್ರಜ್ಞಾನ ಮಿಳಿತಗೊಂಡಿರುವ ಕಲೆಗಳ ಮಹಾಸಂಗಮ ಎಂದೇ ಹೇಳಬಹುದು. ಇದು ಟ್ರಾನ್ಸ್ಜೆಂಡರ್ ಕಲಾವಿದರಿಂದ ಪ್ರದರ್ಶಿಸಲ್ಪಡುವ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಪಟ್ಟಾಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿತ್ತು. ಏಕಕಾಲಕ್ಕೆ ನೂರಾರು ಕಲಾವಿದರು ಒಂದು ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸುದುವುದು, ಹುಡುಗಿಯರನ್ನು ನಾಚಿಸುವಂತೆ ಸೊಂಟ ಬಳುಕಿಸುವ ಕಲೆ ಹೊಗಳಲು ಪದಗಳೇ ಸಾಲುವುದಿಲ್ಲ. ಆದ್ರೆ ಮೊಟ್ಟಮೊದಲ ಬಾರಿಗೆ ಶೋ ನೋಡುತ್ತಿದ್ದ ನಮಗೆ ಕೊನೆಯಲ್ಲೊಂದು ಟ್ವಿಸ್ಟ್ ಕಾದಿತ್ತು. ಅಲ್ಲಿರುವವರು ಹೆಣ್ಣು… ಹೆಣ್ಣಲ್ಲ ಗಂಡು (ಲೇಡಿಬಾಯ್) ತಿಳಿಯುತ್ತಿದ್ದಂತೆ ಬೆವರಿನಿಂದ ಮೈ ತೊಯ್ದುಹೋಗಿತ್ತು….
ಥಾಯ್ಲೆಂಡ್‌ನಂತರ ಅದ್ಭುತ ಲೋಕದ ಬಗ್ಗೆ ಒಂದೆರಡು ಸಾಲುಗಳಲ್ಲಿ ಮುಗಿಸಲು ಎಂದಿಗೂ ಆಗದು… ಮುಂದಿನ ಲೇಖನದಲ್ಲಿ ಮತ್ತೆ ಸಿಗೋಣ….
– ಮೋಹನ ಬನ್ನಿಕುಪ್ಪೆ

