– ಆತ್ಮಹತ್ಯೆಗೆ ಅದ್ವೈತ್ ಶರಣು?
– ಎಷ್ಟು ಹೊತ್ತಿಗೆ ಬಿದ್ದರೆ ಸಾಯಬಹುದು ಎಂದು ಹುಡುಕಾಟ
ನೆಲಮಂಗಲ: ಐತಿಹಾಸಿಕ ಶಿವಗಂಗೆ ಬೆಟ್ಟಕ್ಕೆ(Shivagange Hills) ಟ್ರಕ್ಕಿಂಗ್ ಬಂದು ನಾಪತ್ತೆಯಾಗಿರುವ ಬೆಂಗಳೂರಿನ ಕಾಡುಗೋಡಿಯ ಟೆಕ್ಕಿ, ಮಧ್ಯಪ್ರದೇಶದ ಇಂದೋರ್ ಮೂಲದ ಅದ್ವೈತ್ ಉಪಾಧ್ಯಾಯ ಆತ್ಮಹತ್ಯೆ(Suicide) ಮಾಡಿಕೊಂಡಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.
ಅದ್ವೈತ್ ಉಪಾಧ್ಯಾಯ(Advait Upadhyay) ಅವರ ಹುಡುಕಾಟಕ್ಕಾಗಿ ಮೂರನೇ ದಿನವೂ ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತನಿಖೆಯ ವೇಳೆ ಕೆಲ ಸ್ಫೋಟಕ ವಿಚಾರಗಳು ಹೊರಬರುತ್ತಿದ್ದು, ಇದು ಪೂರ್ವನಿಯೋಜಿತ ಆತ್ಮಹತ್ಯೆ ಎಂಬ ಅನುಮಾನ ಬರತೊಡಗಿದೆ.
ಪೋಲಿಸರು ಅದ್ವೈತ್ ಅವರ ಕಾಡುಗೋಡಿಯ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಅವರ ಲ್ಯಾಪ್‌ಟಾಪ್ ಪತ್ತೆಯಾಗಿದೆ. ಲ್ಯಾಪ್‌ಟಾಪ್ ತಪಾಸಣೆ ನಡೆಸಿದ ವೇಳೆ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಅದ್ವೈತ್ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಶಿವಗಂಗೆಯ ಶಾಂತಲಾ ಡ್ರಾಪ್‌ನಿಂದ(Shantala Drop) ಬಿದ್ದರೆ ಎಷ್ಟೊತ್ತಿಗೆ ಸಾಯಬಹುದು ಎಂದು ಹುಡುಕಾಟ ನಡೆಸಿದ್ದರು.
ಇದಕ್ಕೆ ಎಐ ಬೆಳಿಗ್ಗೆ 7:30 ಕ್ಕೆ ಬಿದ್ದರೆ ಸಾವು ಸಂಭವಿಸಬಹುದು ಎಂದು ಉತ್ತರ ನೀಡಿತ್ತು. ಈ ಕಾರಣಕ್ಕೆ ಆ.4 ರಂದೇ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಬಳಿಗೆ ಅದ್ವೈತ್ ಬಂದಿರುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪೂರ್ವನಿಯೋಜಿತ ಪ್ಲಾನ್ ಪ್ರಕಾರವೇ ಆ.7 ಶುಕ್ರವಾರ ಬೆಳಿಗ್ಗೆ ಶಿವಗಂಗೆಗೆ ಟ್ರಕ್ಕಿಂಗ್ ತೆರಳಿದ್ದ ಅದ್ವೈತ್, ಬೆಟ್ಟ ಹತ್ತುತ್ತಿದ್ದಂತೆ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಾಪ್ತಿ ಚೌಹಾಣ್‌ಗೆ ಕೊನೆಯದಾಗಿ ಫೋಟೋ ಒಂದನ್ನು ಕಳುಹಿಸಿದ್ದರು. ಅದಾದ ನಂತರ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ. ಬೆಟ್ಟದ ತುತ್ತ ತುದಿಯಲ್ಲಿ ಇತರ ಚಾರಣಿಗರು ತೆಗೆದ ಫೋಟೋದಲ್ಲಿ ಅದ್ವೈತ್ ಇರುವುದು ಪತ್ತೆಯಾಗಿದೆ.

ಮೂರನೇ ದಿನಕ್ಕೆ ಕಾರ್ಯಾಚರಣೆ
ನೆಲಮಂಗಲ ಟೌನ್ ಸಿಪಿಐ ಭರತ್ ಗೌಡ ಅವರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿ, ಎಸ್‌ಡಿಆರ್‌ಎಫ್ (SDRF) ತಂಡ ಹಾಗೂ ನುರಿತ ಚಾರಣಿಗರು ಜೀವದ ಪ್ರಾಣ ಪಣಕ್ಕಿಟ್ಟು ಮೂರನೇ ದಿನದ ಬೃಹತ್ ಶೋಧ ಕಾರ್ಯ ಆರಂಭಿಸಿದ್ದಾರೆ:
ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಬೆಟ್ಟದ ಪ್ರಪಾತ ಹಾಗೂ ಕಡಿದಾದ ಜಾಗಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಬೆಟ್ಟದ ತುತ್ತ ತುದಿಯ ಶಾಂತಲಾ ಡ್ರಾಪ್ ಆಳವಾದ ಕಂದಕದಿಂದ ಕೂಡಿದ್ದು, ಅಲ್ಲಿ ಶೋಧ ನಡೆಸುವುದು ಸವಾಲಾಗಿ ಪರಿಣಮಿಸಿದೆ.
ಏನಿದು ಶಾಂತಲಾ ಪಾಯಿಂಟ್?
ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4800 ಅಡಿ ಎತ್ತರದಲ್ಲಿರುವ ಬೆಟ್ಟವಾಗಿದ್ದು ಹೊಯ್ಸಳ ರಾಜ ವಿಷ್ಣುವರ್ಧನನ ರಾಣಿ, ನಾಟ್ಯರಾಣಿ ಶಾಂತಲೆ ಇಲ್ಲಿಂದ ಕಾಲುಜಾರಿ ಅಥವಾ ಬಿದ್ದು ಮರಣ ಹೊಂದಿದಳು ಎಂಬ ಐತಿಹಾಸಿಕ ಜನಪದ ನಂಬಿಕೆಯಿಂದ ಈ ಸ್ಥಳಕ್ಕೆ ‘ಶಾಂತಲಾ ಡ್ರಾಪ್’ ಎಂದು ಕರೆಯಲಾಗುತ್ತದೆ. ಮರಗಿಡಗಳು ಕಲ್ಲು ಬಂಡೆಗಳಿಂದ ಕೂಡಿರುವ ಶಾಂತಲಾ ಡ್ರಾಪ್ ಬಳಿ ಹಲವು ಸೂಚನಾ ಫಲಕಗಳು ಇವೆ. ಈ ಜಾಗ ಶಿವಗಂಗೆ ಬೆಟ್ಟದ ತುಟ್ಟತುದಿಯಲ್ಲಿರುವ ಅತ್ಯಂತ ಅಪಾಯಕಾರಿ ಮತ್ತು ಆಳವಾದ ಬಂಡೆಯ ಪ್ರದೇಶವಾಗಿದೆ. ಸ್ಥಳೀಯ ಜನಪದ ಕಥೆಗಳ ಪ್ರಕಾರ, ರಾಣಿ ಶಾಂತಲಾ ಇಲ್ಲಿ ಪ್ರಾಣತ್ಯಾಗ ಮಾಡಿದಳು ಎಂದು ಹೇಳಲಾಗುತ್ತದೆ.
