Districts
ಗಣಪತಿಯೇ ನಮಗೆ ಮೊದಲ ಗುರು, ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ: ಉಡುಪಿಯಲ್ಲಿ ಉಸ್ತಾದ್ ಮೋಡಿ

ಉಡುಪಿ: ದೇಶಾದ್ಯಂತ ಅಯೋಧ್ಯೆಯ ರಾಮ ಮಂದಿರ ಕುರಿತಾದ ಚರ್ಚೆಗಳು ನಡೆಯುತ್ತಿದೆ. ರಾಮ ಮಂದಿರ, ಬಾಬ್ರಿ ಮಸೀದಿ ಅಂತ ರಾಜಕೀಯ ಪಕ್ಷಗಳು ಕಚ್ಚಾಡುತ್ತಿದೆ. ಹಿಂದೂಗಳು ಬಾಬ್ರಿ ಮಸೀದಿ ಧ್ವಂಸವಾದ ದಿನವನ್ನು ಶೌರ್ಯ ದಿನ ಅಂತ ಆಚರಿಸುತ್ತಿದ್ದಾರೆ. ಮುಸಲ್ಮಾನರು ಡಿಸೆಂಬರ್ ಆರನ್ನು ಕರಾಳ ದಿನ ಅಂತ ಆಚರಿಸುತ್ತಿದ್ದಾರೆ. ಈ ನಡುವೆ ಉಡುಪಿಯಲ್ಲಿ ಕಲೆಗೆ – ಕಲಾವಿದನಿಗೆ ಜಾತಿ, ಧರ್ಮವಿಲ್ಲ ಎಂಬುದು ಸಾಬೀತಾಗಿದೆ.
ತಬಲ ಮಾಂತ್ರಿಕ ಝಾಕಿರ್ ಹುಸೇನ್ ಉಡುಪಿ ಶ್ರೀಕೃಷ್ಣಮಠದಲ್ಲಿ ಸಾವಿರಾರು ಪ್ರೇಕ್ಷಕರನ್ನು ತನ್ನ ಕೈಚಳಕದ ಮೂಲಕ ಮಂತ್ರಮುಗ್ಧಗೊಳಿಸಿದ್ದಾರೆ. ಮಠದೊಳಗೆ ಆಗಮಿಸಿ ಶ್ರೀಕೃಷ್ಣನ ದರ್ಶನ ಮಾಡಿ ಕನಕ ನವಗ್ರಹ ಕಿಂಡಿಯ ಮುಂದೆ ನಿಂತು ಭಕ್ತಿಪರವಶರಾಗಿದ್ದಾರೆ. ಶ್ರೀಕೃಷ್ಣನ ಮುಂದೆ ನಿಂತು ಕೈಮುಗಿದು ಕೆಲ ನಿಮಿಷಗಳ ಕಾಲ ಧ್ಯಾನ ಮಾಡಿದ್ದಾರೆ. ಶಿರಭಾಗಿ ಭಗವಂತನಿಗೆ ವಂದಿಸಿ ತಮ್ಮ ನಿವೇದನೆ ಅರ್ಪಿಸಿದ್ದಾರೆ.
ಕೃಷ್ಣಮಠದ ರಾಜಾಂಗಣದಲ್ಲಿ ಎರಡೂವರೆ ಗಂಟೆಗಳ ಕಾಲ ಉಸ್ತಾದ್ ಝಾಕಿರ್ ಹುಸೇನ್ ತಬಲ ನುಡಿಸಿ ರಸದೌತಣ ಬಡಿಸಿದರು. ಬೆರಳಿನ ವೇಗಕ್ಕೆ ಸಾವಿರಾರು ಮಂದಿ ಅಭಿಮಾನಿಗಳು ತಮ್ಮನ್ನೇ ತಾವು ಮರೆತರು. ವಿದ್ವಾನ್ ಕುಮಾರೇಶ್ ವಯೋಲಿನ್, ವಿದೂಷಿ ಜಯಂತಿ ಕುಮಾರೇಶ್ ವೀಣೆ ನಾದ ತಬಲ ಮಾಂತ್ರಿಕ ಝಾಕಿರ್ ಹುಸೇನ್ ಗೆ ಸಾಥ್ ನೀಡಿದರು.
ಝಾಕಿರ್ ಹುಸೇನ್ ರಿಂದ ಗಣಪತಿ ಸ್ತುತಿ- ಶಿವನಾಮ ಜಪ: ಕಾರ್ಯಕ್ರಮದ ನಡುವೆ ಝಾಕಿರ್ ಹುಸೇನ್ ಗಣಪತಿ, ಶ್ರೀಕೃಷ್ಣ ಮತ್ತು ಶಿವನನ್ನು ನೆನಪಿಸಿಕೊಂಡರು. ಗಣಪತಿಯ ಅನುಗ್ರಹ, ಕೃಷ್ಣನ ಶಂಖನಾದ, ಶಿವನ ಅನುಗ್ರಹ ನನ್ನ ಮೇಲೆ ಇರುವುದರಿಂದ ಈ ಹಂತಕ್ಕೆ ಬಂದು ನಿಂತಿದ್ದೇನೆ ಎಂದರು. ತಬಲದಲ್ಲಿ ಢಮರುಗ ನುಡಿಸಿ ಝಾಕಿರ್ ಚಪ್ಪಾಳೆ ಶಿಳ್ಳೆ ಗಿಟ್ಟಿಸಿದರು.
ಕಾರ್ಯಕ್ರಮದ ಕೊನೆಗೆ ಪೇಜಾವರ ಹಿರಿಯ, ಕಿರಿಯ ಶ್ರೀ, ಸೋದೆ ವಿಶ್ವವಲ್ಲಭ ಸ್ವಾಮೀಜಿಯ ಪಾದ ಮುಟ್ಟಿ ಝಾಕಿರ್ ನಮಸ್ಕರಿಸಿದರು. ಸ್ವಾಮೀಜಿಗಳು ಆತ್ಮೀಯವಾಗಿ ಕಲಾವಿದ ಝಾಕಿರ್ ಹುಸೇನ್ ರನ್ನು ಸ್ಪರ್ಶಿಸಿ, ಅನುಗ್ರಹ ಮಂತ್ರಾಕ್ಷತೆ ನೀಡಿದರು. ಶಾಲು ಹೊದಿಸಿ – ಹಾರಹಾಕಿ, ಕೃಷ್ಣನ ವಿಗ್ರಹ ನೀಡಿ ಪೇಜಾವರ ಮಠ ಗೌರವಿಸಿತು.
ಉಸ್ತಾದ್ ಝಾಕಿರ್ ಹುಸೇನ್ ಮಾತನಾಡಿ, ಮಠದಲ್ಲಿ ಕಾರ್ಯಕ್ರಮ ನೀಡಿದ್ದು ಬಹಳ ಸಂತೋಷವಾಗಿದೆ. ಕೃಷ್ಣ ಕರೆಸಿಕೊಂಡರೆ, ಸ್ವಾಮೀಜಿಯವರ ಆಶೀರ್ವಾದ ಇದ್ದರೆ ಮತ್ತೆ ಉಡುಪಿಯಲ್ಲಿ ಕಾರ್ಯಕ್ರಮ ಕೊಡುವುದಾಗಿ ಘೋಷಣೆ ಮಾಡಿದರು. ಗಣಪತಿಯೇ ಕಲಾವಿದರಿಗೆ ಮೊದಲ ಗುರು. ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ, ಶಿವನ ಢಮರುಗ ನಾದವೇ ನಮಗೆ ವೈಬ್ರೇಶನ್ ಅಂತ ತಮ್ಮ ಕಾರ್ಯಕ್ರಮದ ನಡುವೆ ಹೇಳಿದರು.
ಪೇಜಾವರ ಕಿರಿಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ದೇವತೆಗಳಿಗೆ ಲಭ್ಯವಾದದ್ದು ಒಂದು ಬಿಂದು ಅಮೃತ. ಆದ್ರೆ ಝಾಕಿರ್ ಹುಸೇನರ ಕಾರ್ಯಕ್ರಮದ ಮೂಲಕ ನಮಗೆ ಅಮೃತದ ಸುಧೆಯೇ ಲಭ್ಯವಾಯ್ತು ಅಂತ ಹೇಳಿದರು.
