ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ (Cauvery Water Dispute) ಸಂಬಂಧಿಸಿದಂತೆ ತಮಿಳುನಾಡು (Tamil Nadu) ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಡೆಯಲಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರಿನ ಸಂಗ್ರಹವಿಲ್ಲದಿದ್ದರೂ, ತನ್ನ ಪಾಲಿನ ನೀರು ಹರಿಸುವಂತೆ ತಮಿಳುನಾಡು ಕ್ಯಾತೆ ಮುಂದುವರಿಸಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇಂದು ಯಾವ ರೀತಿಯ ಆದೇಶ ನೀಡಲಿದೆ ಎಂಬ ತೀವ್ರ ಆತಂಕ ಕಾವೇರಿ ಕೊಳ್ಳದ ರೈತರಲ್ಲಿ ಮನೆಮಾಡಿದೆ. ಇತ್ತ ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಯುತ್ತಲೇ ಇದೆ. ಕಬಿನಿ ಬೆನ್ನಲ್ಲೇ ಇದೀಗ ಕೆಆರ್‌ಎಸ್ ಡ್ಯಾಂನಿಂದ ಹೊರಹರಿವಿನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡು ಹಾಗೂ ಸ್ಥಳೀಯ ನಾಲೆಗಳಿಗೆ ಸೇರಿ ನಿತ್ಯ ಸುಮಾರು 7 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದನ್ನೂ ಓದಿ: ಇರಾನ್‌ನ ಲಾರಕ್ ದ್ವೀಪದ ಮೇಲೆ ಅಮೆರಿಕ ದಾಳಿ
ಮಂಡ್ಯದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಕಾವೇರಿ ಜಲಾನಯನ ಪ್ರದೇಶದ ರೈತರ ಹಿತ ಕಾಯದೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಇಂದು ವಿವಿಧ ರೈತ ಹಾಗೂ ಕನ್ನಡಪರ ಸಂಘಟನೆಗಳು ಬೀದಿಗಿಳಿದು ರೊಟ್ಟಿ ಚಳವಳಿ ನಡೆಸುವ ಮೂಲಕ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲು ಸಜ್ಜಾಗಿವೆ. ಇದನ್ನೂ ಓದಿ: ಬಾಗಲಕೋಟೆ: ಶೆಡ್‌ಗಳಿಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ; 20ಕ್ಕೂ ತಾತ್ಕಾಲಿಕ ನಿವಾಸಗಳು ಸುಟ್ಟು ಭಸ್ಮ
