ನವದೆಹಲಿ: ವೈದ್ಯಕೀಯ ವಿದ್ಯಾರ್ಥಿಗಳ ಕಡ್ಡಾಯ ಗ್ರಾಮೀಣ ಸೇವೆಗೆ ಸಂಬಂಧಿಸಿದಂತೆ ದೇಶಾದ್ಯಂತ ಏಕರೂಪ ನೀತಿ ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಒಲವು ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಪೀಠ ಸೂಚಿಸಿದೆ.
ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸಿದ ಬಳಿಕವಷ್ಟೇ ಶಾಶ್ವತ ವೈದ್ಯಕೀಯ ನೋಂದಣಿಗೆ ಅರ್ಹರಾಗುವ ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು. ಕರ್ನಾಟಕ ಕಡ್ಡಾಯ ಸೇವಾ ತರಬೇತಿ ಕಾಯ್ದೆ–2012 ಮತ್ತು 2015ರ ನಿಯಮಗಳ ಅಡಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷದ ಗ್ರಾಮೀಣ ಸೇವೆ ಕಡ್ಡಾಯಗೊಳಿಸಲಾಗಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಖಾಸಗಿ ಸೀಟುಗಳ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೂ ಈ ನಿಯಮ ಅನ್ವಯಿಸುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಹೆಚ್ಚಿನ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಖಾಸಗಿ ಸೀಟುಗಳ ವಿದ್ಯಾರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯ ನಿಯಮ ಅನ್ವಯಿಸಬಾರದು ಎಂಬುದು ಅವರ ವಾದವಾಗಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೆಲವು ಕಡೆ ಸರದಿ ಆಧಾರಿತ ಕಡ್ಡಾಯ ಸೇವೆಯ ವ್ಯವಸ್ಥೆಯಿದೆ ಎಂದು ತಿಳಿಸಿದರು. ಆದರೆ ಪದವಿ ಹಂತದ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಅನ್ವಯಿಸುವ ಏಕರೂಪ ವ್ಯವಸ್ಥೆ ಇಲ್ಲ ಎಂದು ಹೇಳಿದರು.
ಆರೋಗ್ಯವು ರಾಜ್ಯದ ವ್ಯಾಪ್ತಿಗೆ ಬರುವ ವಿಷಯವಾಗಿರುವುದರಿಂದ ವಿವಿಧ ರಾಜ್ಯಗಳು ಕಡ್ಡಾಯ ಸೇವೆಗೆ ಸಂಬಂಧಿಸಿದ ಬಾಂಡ್ಗಳನ್ನು ಜಾರಿಗೊಳಿಸಿವೆ. ಇಂತಹ ಬಾಂಡ್ಗಳನ್ನು ಎಲ್ಲ ರಾಜ್ಯಗಳಲ್ಲೂ ಏಕರೂಪವಾಗಿ ಅಳವಡಿಸಿಕೊಳ್ಳುವಂತೆ ಸಮಿತಿಯೊಂದು ಶಿಫಾರಸು ಮಾಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.ಇದನ್ನೂ ಓದಿ: ಪಾಕ್ನಲ್ಲಿ ಭಾರತೀಯ ಸರಕುಗಳಿಗೆ ಭರ್ಜರಿ ಬೇಡಿಕೆ: 5,876 ಕೋಟಿ ರೂ. ಮೌಲ್ಯದ ವಸ್ತು ಆಮದು
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗುತ್ತಿರುವ ಹಿರಿಯ ವಕೀಲ ರಾಜು ರಾಮಚಂದ್ರನ್, ಸಂವಿಧಾನದ 21ನೇ ವಿಧಿ ಮತ್ತು ರಾಜ್ಯನೀತಿಯ ನಿರ್ದೇಶಕ ತತ್ವಗಳ ಆಧಾರದಲ್ಲಿ ಮಾರ್ಗಸೂಚಿಗಳನ್ನು ರೂಪಿಸುವ ಪ್ರಸ್ತಾಪ ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರದ ಪ್ರತಿನಿಧಿ, ದೇಶವ್ಯಾಪಿ ನೀತಿ ರೂಪಿಸುವ ಕುರಿತು ಸಮಾಲೋಚನೆ ನಡೆಸಬಹುದು. ಆದರೆ ಈ ಸಂಬಂಧ ನ್ಯಾಯಾಲಯದಿಂದ ಕಡ್ಡಾಯ ನಿರ್ದೇಶನ ನೀಡುವ ಅಗತ್ಯವನ್ನು ಪರಿಶೀಲಿಸಬೇಕಿದೆ ಎಂದು ತಿಳಿಸಿದರು.
ವಿಚಾರಣೆ ವೇಳೆ ನ್ಯಾಯಮೂರ್ತಿ ಪಿ.ಎಸ್. ನರಸಿಂಹ, ಈ ಪ್ರಕರಣದ ನಿರ್ಧಾರವು ದೇಶದ ಭವಿಷ್ಯದ ಆರೋಗ್ಯ ಸೇವೆಯ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು. ಆರೋಗ್ಯದ ಹಕ್ಕು ಮತ್ತು ಜನರಿಗೆ ವೈದ್ಯಕೀಯ ಸೇವೆ ಒದಗಿಸುವ ರಾಜ್ಯದ ಹೊಣೆಗಾರಿಕೆಯನ್ನು ಉಲ್ಲೇಖಿಸಿದ ಅವರು, ಗ್ರಾಮೀಣ ಪ್ರದೇಶಗಳ ಜನರಿಗೂ ಸೂಕ್ತ ಆರೋಗ್ಯ ಸೇವೆ ಲಭ್ಯವಾಗುವುದು ಮುಖ್ಯ ಎಂದು ಹೇಳಿದರು.ಇದನ್ನೂ ಓದಿ: ದೊಡ್ಮನೆಯಲ್ಲಿ `ಶೆಟ್ಟಿ ಡಾನ್’ ಸ್ವಯಂವರ – ವಧು ಸೌಂದರ್ಯಗೆ ವರನಾಗಲು ಹುಡುಗರ ಕಸರತ್ತು
ಕಡ್ಡಾಯ ಗ್ರಾಮೀಣ ಸೇವೆ ಅಗತ್ಯವೇ ಎಂಬ ಮೂಲಭೂತ ತತ್ವದ ಬಗ್ಗೆ ಮೊದಲು ಸ್ಪಷ್ಟತೆ ಇರಬೇಕು. ಬಳಿಕ ಅದನ್ನು ಬಾಂಡ್ ಅಥವಾ ನಿಯಂತ್ರಣದ ಮೂಲಕ ಹೇಗೆ ಜಾರಿಗೊಳಿಸಬೇಕು ಎಂಬುದನ್ನು ನಿರ್ಧರಿಸಬಹುದು ಎಂದು ನ್ಯಾಯಮೂರ್ತಿ ನರಸಿಂಹ ಅಭಿಪ್ರಾಯಪಟ್ಟರು.
ದೇಶಾದ್ಯಂತ ಏಕರೂಪ ನೀತಿ ರೂಪಿಸುವ ಉದ್ದೇಶವಿದೆಯೇ ಮತ್ತು ಈ ಸಂಬಂಧ ಯಾರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
