– ನೇರ ವ್ಯಾಪಾರ ಸಂಪೂರ್ಣ ಸ್ಥಗಿತ
– ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.69ರಷ್ಟು ಏರಿಕೆ
ಇಸ್ಲಾಮಾಬಾದ್: ಭಾರತ(India) ಮತ್ತು ಪಾಕಿಸ್ತಾನ(Pakistan) ನಡುವಿನ ನೇರ ವ್ಯಾಪಾರ(Trade) ಸಂಬಂಧಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೂ, ಪಾಕಿಸ್ತಾನದಲ್ಲಿ ಭಾರತೀಯ ಸರಕುಗಳಿಗೆ ಇರುವ ಬೇಡಿಕೆ ಮಾತ್ರ ತಗ್ಗಿಲ್ಲ.
ಪ್ರಸಕ್ತ 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಾಕಿಸ್ತಾನವು ಭಾರತದಿಂದ ಬರೋಬ್ಬರಿ 61.74 ಮಿಲಿಯನ್ ಡಾಲರ್ (ಸುಮಾರು 5,876 ಕೋಟಿ ರೂ.) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಇದು ಕಳೆದ ವರ್ಷದ ಇದೇ ಅವಧಿಗೆ (36.55 ಮಿಲಿಯನ್ ಡಾಲರ್) ಹೋಲಿಸಿದರೆ ಶೇ.69ರಷ್ಟು ಭಾರಿ ಏರಿಕೆಯಾಗಿದೆ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ‘ಡಾನ್’ ವರದಿ ಮಾಡಿದೆ. ಆದರೆ ಇದೇ ಅವಧಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ರಫ್ತು ದಾಖಲಾಗಿಲ್ಲ.
ಪಾಕ್ ತಲುಪುತ್ತಿರುವುದು ಹೇಗೆ?
ನೇರ ಗಡಿ ವ್ಯಾಪಾರ ಸಂಪೂರ್ಣ ಬಂದ್ ಆಗಿದ್ದರೂ ಈ ಸರಕುಗಳು ಪಾಕಿಸ್ತಾನಕ್ಕೆ ಹೇಗೆ ತಲುಪುತ್ತಿವೆ ಎಂಬ ಪ್ರಶ್ನೆಗೆ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಅಂಕಿ-ಅಂಶಗಳಲ್ಲಿ ಸ್ಪಷ್ಟ ಉತ್ತರವಿಲ್ಲ. ಆದರೆ ತಜ್ಞರ ಪ್ರಕಾರ ನಿರ್ಬಂಧಗಳನ್ನು ತಪ್ಪಿಸಲು ಮೂರನೇ ದೇಶಗಳ ಮೂಲಕ ಇವುಗಳನ್ನು ಪಾಕಿಸ್ತಾನಕ್ಕೆ ಸಾಗಿಸಲಾಗುತ್ತಿದೆ. ಯುಎಇ (ದುಬೈ), ಸಿಂಗಾಪುರ ಹಾಗೂ ಕೊಲಂಬೊ ಮೂಲಕ ಭಾರತೀಯ ಸರಕುಗಳನ್ನು ಪಾಕಿಸ್ತಾನಕ್ಕೆ ರವಾನಿಸಲಾಗುತ್ತಿದೆ.
ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅವರ ಪ್ರಕಾರ, ಭಾರತದಿಂದ ಹೊರಡುವ ಸರಕುಗಳನ್ನು ದುಬೈ ಅಥವಾ ಸಿಂಗಾಪುರದಲ್ಲಿರುವ ವೇರ್ಹೌಸ್ಗಳಲ್ಲಿ ಇರಿಸಲಾಗುತ್ತದೆ. ಅಲ್ಲಿ ಅವುಗಳ ಮೂಲ ದಾಖಲೆಗಳು ಹಾಗೂ ಲೇಬಲ್ಗಳನ್ನು ಬದಲಾಯಿಸಿ, ‘ಮೇಡ್ ಇನ್ ಯುಎಇ’ ಎಂಬ ಹೊಸ ಲೇಬಲ್ ಅಡಿಯಲ್ಲಿ ಪಾಕಿಸ್ತಾನಕ್ಕೆ ಮರು-ರಫ್ತು ಮಾಡಲಾಗುತ್ತದೆ. ಇದನ್ನೂ ಓದಿ: ಮೈಕ್ರೋಸಾಫ್ಟ್ನಲ್ಲಿ ಬೃಹತ್ ಉದ್ಯೋಗ ಕಡಿತ – ಭಾರತ ಸೇರಿ 4 ದೇಶಗಳ 60 ಸಾವಿರ ಸಿಬ್ಬಂದಿಗೆ ಬೈಔಟ್ ಆಫರ್
ಜಿಟಿಆರ್ಐ (GTRI) ಅಂದಾಜಿನ ಪ್ರಕಾರ, ಮೂರನೇ ದೇಶಗಳ ಮಾರ್ಗವಾಗಿ ಭಾರತದಿಂದ ಪಾಕಿಸ್ತಾನಕ್ಕೆ ವಾರ್ಷಿಕವಾಗಿ ಸುಮಾರು 10 ಬಿಲಿಯನ್ ಡಾಲರ್ ಮೌಲ್ಯದ ಅನಧಿಕೃತ ವ್ಯಾಪಾರ ನಡೆಯುತ್ತಿದೆ.
ಯಾವೆಲ್ಲ ವಸ್ತುಗಳು ರಫ್ತು?
ಪಾಕಿಸ್ತಾನ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳಲ್ಲಿ ಬಹುಪಾಲು ಔಷಧಿ ಕಚ್ಚಾವಸ್ತುಗಳುಸೇರಿವೆ. ಇದರೊಂದಿಗೆ ಪ್ಲಾಸ್ಟಿಕ್, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಸಾವಯವ ರಾಸಾಯನಿಕಗಳು, ರಬ್ಬರ್, ಬಣ್ಣಗಳು, ಕಾಫಿ, ಚಹಾ, ತರಕಾರಿಗಳು, ಸಂಬಾರ ಪದಾರ್ಥಗಳು, ಡೈರಿ ಉತ್ಪನ್ನಗಳು ಮತ್ತು ಧಾನ್ಯಗಳು.
ಕಳೆದ ವರ್ಷ ಪಹಲ್ಗಾಮ್ನಲ್ಲಿ 25 ಪ್ರವಾಸಿಗರ ಹತ್ಯೆಯಾದ ಬಳಿಕ ಭಾರತವು ವಾಘಾ-ಅಟ್ಟಾರಿ ಗಡಿ ಮಾರ್ಗವನ್ನು ಮುಚ್ಚಿ, ದ್ವಿಪಕ್ಷೀಯ ವ್ಯಾಪಾರವನ್ನು ಶೂನ್ಯಕ್ಕೆ ಇಳಿಸಿತು. ಭಯೋತ್ಪಾದನೆ ನಿಲ್ಲುವವರೆಗೂ ವ್ಯಾಪಾರ ಅಸಾಧ್ಯ ಎಂಬ ಕಠಿಣ ನಿಲುವನ್ನು ಭಾರತ ತಳೆದಿದೆ.ಪಾಕಿಸ್ತಾನವೂ ಸಹ ಭಾರತದೊಂದಿಗಿನ ನೇರ ಮತ್ತು ಪರೋಕ್ಷ ವ್ಯಾಪಾರವನ್ನು ನಿರ್ಬಂಧಿಸಿತ್ತು.
2019ರ ಪುಲ್ವಾಮಾ ದಾಳಿಯ ಬಳಿಕ ಭಾರತವು ಪಾಕಿಸ್ತಾನಕ್ಕೆ ನೀಡಿದ್ದ ಮೋಸ್ಟ್ ಫೇವರ್ಡ್ ನೇಷನ್ (MFN) ಸ್ಥಾನಮಾನವನ್ನು ಹಿಂಪಡೆದ ದಿನದಿಂದಲೇ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ತೀವ್ರ ಕುಸಿತ ಕಂಡಿದ್ದವು.

