ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯಲ್ಲಿ, ಚುನಾವಣಾ ಆಯೋಗದ ಅಫಿಡವಿಟ್ಗೆ ಪ್ರತಿಕ್ರಿಯೆ ಸಲ್ಲಿಸಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ (Supreme Court) 10 ದಿನಗಳ ಕಾಲಾವಕಾಶ ನೀಡಿದೆ. ಇದೇ ವೇಳೆ, ಕೇಂದ್ರ ಚುನಾವಣಾ ಆಯೋಗಕ್ಕೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿಗಳ ವಿಚಾರಣೆ ನಡೆಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ನಿಗದಿಪಡಿಸಲಾಗಿದೆ. ಇದನ್ನೂ ಓದಿ: 10 ಸಾವಿರ ಕೋಟಿ ನಷ್ಟ, 20 ಲಕ್ಷ ವ್ಯಾಪಾರಿಗಳಿಗೆ ಸಂಕಷ್ಟ – ದೆಹಲಿ ಪ್ರತಿಭಟನೆ ಮುಂದೂಡುವಂತೆ ರಾಗಾಗೆ ಮತ್ತೊಂದು ಮನವಿ
ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಎತ್ತಲಾಗಿದ್ದು, ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸುವಂತೆ ಮಧ್ಯಂತರ ಪರಿಹಾರ ಕೋರಲಾಗಿದೆ.
ಎಸ್ಐಆರ್ ನಿರ್ಧಾರಗಳು ಸರ್ವಾನುಮತದಿಂದ ಆಗಿವೆ: ಆಯೋಗ
ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತನ್ನ ವಿರುದ್ಧದ ಅರ್ಜಿಯು ಒಂದೇ ಪತ್ರಿಕಾ ವರದಿಯನ್ನು ಆಧರಿಸಿದೆ ಎಂದು ಹೇಳಿದೆ. 2025ರ ಜೂನ್, ಅಕ್ಟೋಬರ್ ಹಾಗೂ 2026ರ ಮೇ ತಿಂಗಳಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊರಡಿಸಲಾದ ಮೂರು ಆದೇಶಗಳೂ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರ ಸರ್ವಾನುಮತದ ನಿರ್ಧಾರಗಳಾಗಿವೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: SIRನ ಎಲ್ಲಾ ಆದೇಶಗಳು ಸರ್ವಾನುಮತದಿಂದ ಕೂಡಿದ್ದವು, ಫಾರ್ಮ್-6 ತಿದ್ದುಪಡಿ ಮಾಡಿಲ್ಲ – ಸುಪ್ರೀಂಗೆ ಚುನಾವಣಾ ಆಯೋಗ ಮಾಹಿತಿ
ಚುನಾವಣಾ ಆಯೋಗದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ ಎಂಬ ಆರೋಪಗಳನ್ನು ಅರ್ಜಿದಾರರು ಮುಂದಿಟ್ಟಿದ್ದಾರೆ. ಆದರೆ, ಆರೋಪಗಳ ಕುರಿತು ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಈ ಹಂತದಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಈ ಹಿಂದೆ ಕೋರಲಾಗಿದ್ದ ಮಧ್ಯಂತರ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿರಲಿಲ್ಲ. ಇದೀಗ ಅಫಿಡವಿಟ್ಗೆ ಉತ್ತರ ಸಲ್ಲಿಸಲು ಕಾಲಾವಕಾಶ ನೀಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯಲ್ಲಿ ಪ್ರಕರಣವನ್ನು ಮತ್ತಷ್ಟು ಪರಿಶೀಲಿಸಲಿದೆ.
