ಮುಂಬೈ: ಶಿರೋಮಣಿ ಅಕಾಲಿದಳದ (SAD) ಅಧ್ಯಕ್ಷ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್(Sukhbir Singh Badal)ಅವರ ಮೇಲೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಕಿರ್ಪಾನ್‌ನಿಂದ ದಾಳಿ ನಡೆದಿದೆ.
ಪ್ರಸಿದ್ಧ ತಖ್ತ್ ಶ್ರೀ ಹಜೂರ್ ಸಾಹಿಬ್ ಗುರುದ್ವಾರದ ಬಳಿಯ ಮಾತಾ ಸಾಹಿಬ್ ಜಿ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಕುಟುಂಬದೊಂದಿಗೆ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ನಿಹಾಂಗ್ ಸಿಖ್ ಉಡುಪಿನಲ್ಲಿದ್ದ ಜಸ್ಪಾಲ್ ಸಿಂಗ್ ಎಂಬಾತ ಕಿರ್ಪಾನ್‌ನಿಂದ(ಸಿಖ್ ಧರ್ಮದವರು ಧರಿಸುವ ಒಂದು ಪವಿತ್ರವಾದ ಸಣ್ಣ ಕತ್ತಿ ಅಥವಾ ಚಾಕು.ಇದು ಸಿಖ್ಖರ ಧಾರ್ಮಿಕ ಸಮಸ್ತ್ರದ ಭಾಗವಾಗಿದ್ದು, ಧರ್ಮನಿಷ್ಠ ಸಿಖ್ಖರು (ಖಾಲ್ಸಾ) ಇದನ್ನು ಯಾವಾಗಲೂ ತಮ್ಮ ದೇಹದ ಭಾಗವಾಗಿ ಧರಿಸಬೇಕಾದ ನಿಯಮವಿದೆ) ಸುಖ್‌ಬೀರ್ ಬಾದಲ್ ಅವರ ಹೊಟ್ಟೆಯ ಭಾಗಕ್ಕೆ ಇರಿಯಲು ಯತ್ನಿಸಿದ್ದಾನೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ದಾಳಿಕೋರನನ್ನು ತಡೆದಿದ್ದಾರೆ. ಈ ವೇಳೆ ತಡೆದ ಭದ್ರತಾ ಸಿಬ್ಬಂದಿಗೂ ಗಾಯಗಳಾಗಿವೆ.
#WATCH | Nanded, Maharashtra | Former Deputy CM of Punjab, Sukhbir Singh Badal rushed to a hospital after being attacked by a Nihang inside Nanded Gurudwara. He has sustained injuries to his hand. pic.twitter.com/PnO2n4wGe9
— ANI (@ANI) August 13, 2026
ದಾಳಿಯ ಪರಿಣಾಮವಾಗಿ ಬಾದಲ್ ಅವರ ಕೈಗೆ ತೀವ್ರ ಗಾಯಗಳಾಗಿದ್ದು, ನಾಂದೇಡ್‌ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಹೊಲಿಗೆಗಳನ್ನು ಹಾಕಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.
ದಾಳಿಯ ಸಮಯದಲ್ಲಿ ಸುಖ್‌ಬೀರ್ ಬಾದಲ್ ಅವರ ಪತ್ನಿ ಹಾಗೂ ಅಕಾಲಿದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಸಹ ಸ್ಥಳದಲ್ಲಿದ್ದರು.
ದಾಳಿ ನಡೆಸಿದ ವ್ಯಕ್ತಿಯನ್ನು ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಕಳೆದ ಎರಡು ವರ್ಷಗಳಿಂದ ಈ ಗುರುದ್ವಾರದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ದಾಳಿ ನಡೆದ ತಕ್ಷಣವೇ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಂದೇಡ್ ಪೊಲೀಸ್ ವರಿಷ್ಠಾಧಿಕಾರಿ (SP) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡಿದ್ದಾರೆ. ದಾಳಿಯ ಹಿಂದಿನ ನೈಜ ಉದ್ದೇಶ ಹಾಗೂ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಿಎಂ ಫಡ್ನವೀಸ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

