14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (Bangalore International Film Festival) ಇಂದಿನಿಂದ ಆರಂಭವಾಗಲಿದ್ದು ಸಂಜೆ 4.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಚಾಲನೆ ನೀಡಲಿದ್ದಾರೆ. ಆರ್.ಆರ್.ಆರ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ (Vijayendra Prasad) ಮುಖ್ಯ ಅತಿಥಿಯಾಗಿ ಬರುತ್ತಿದ್ದು, ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ಅವರು ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ವಿಧಾನಸೌಧದ ಮೆಟ್ಟಿಲು ಮೇಲೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಿರ್ದೇಶಕ, ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ನಟಿ ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದು, ಹರ್ಷಿಕಾ ಪೂಣಚ್ಚ ದೀಪ ಕಾರ್ಯಕ್ರಮಕ್ಕೆ ನೆರವು ನೀಡಲಿದ್ದಾರೆ. ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದನ್ನೂ ಓದಿ: ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರಕ್ಕೆ ರಾಗಿಣಿ ದ್ವಿವೇದಿ ಸಾಥ್
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಈ ಚಿತ್ರೋತ್ಸವ ಮಾರ್ಚ್ 23 ರಿಂದ ಆರಂಭವಾಗಿ 30ನೇ ತಾರೀಖಿನವರೆಗೂ ನಡೆಯಲಿದೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಈ ಬಾರಿ ಅತೀ ಹೆಚ್ಚು ಕನ್ನಡ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಈ ಚಿತ್ರೋತ್ಸವದಲ್ಲಿ ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತ್ಯೇಕವಾಗಿ ಕನ್ನಡ ವಿಭಾಗ, ಇಂಡಿಯನ್ ವಿಭಾಗ ಹಾಗೂ ಏಷಿಯನ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕ್ರಮವಾಗಿ ಆಯಾ ವಿಭಾಗದಲ್ಲಿ ಮೂರು ಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು. ಮೊದಲ ಪ್ರಶಸ್ತಿ ಬಂದ ಚಿತ್ರಕ್ಕೆ ಹತ್ತು ಲಕ್ಷ ರೂಪಾಯಿ ಬಹುಮಾನ ಕೂಡ ಇದೆ. ಚಿತ್ರೋತ್ಸವದ ಕೊನೆಯ ದಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ
ಮಾರ್ಚ್ 24 ರಿಂದ ಬೆಂಗಳೂರಿನ ಒರಯನ್ ಮಾಲ್, ಕಲಾವಿದರ ಸಂಘ ಹಾಗೂ ಸುಚಿತ್ರಾ ಫಿಲ್ಮ್ಸ್ ನಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ. ಚಿತ್ರ ಪ್ರದರ್ಶನ, ಗೋಷ್ಠಿಗಳು, ಸಂದರ್ಶನ, ಸಿನಿಮಾ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಚಿತ್ರೋತ್ಸವದ ಭಾಗವಾಗಿ ಆಯೋಜನೆ ಮಾಡಿದ್ದಾರೆ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಅಶೋಕ್ ಕಶ್ಯಪ್.