ನೆರೆರಾಷ್ಟ್ರ ಶ್ರೀಲಂಕಾದಲ್ಲಿ (Srilanka) ಡೆಂಗ್ಯೂ ಜ್ವರದ ಅಬ್ಬರ ಮಿತಿಮೀರಿದ್ದು, ಸಾಂಕ್ರಾಮಿಕ ರೋಗವಾಗಿ ಮಾರ್ಪಡುತ್ತಿರುವುದು ಇಡೀ ದಕ್ಷಿಣ ಏಷ್ಯಾದಲ್ಲೇ ಆತಂಕ ಮೂಡಿಸಿದೆ. ಅಲ್ಲಿನ ಆಸ್ಪತ್ರೆಗಳು ಡೆಂಗ್ಯೂ (Dengue) ರೋಗಿಗಳಿಂದ ಭರ್ತಿಯಾಗುತ್ತಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಶ್ರೀಲಂಕಾದ ಈ ಪ್ರಸ್ತುತ ಬಿಕ್ಕಟ್ಟು ಭಾರತಕ್ಕೂ (India) ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಭೌಗೋಳಿಕ ಸಾಮೀಪ್ಯ ಮತ್ತು ನಿರಂತರ ಪ್ರಯಾಣದ ಹಿನ್ನೆಲೆಯಲ್ಲಿ, ಈ ಮಾರಕ ಸಾಂಕ್ರಾಮಿಕ ರೋಗ ದೇಶದ ಗಡಿ ದಾಟದಂತೆ ತಡೆಯಲು ಭಾರತ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದೆ.
ಮಳೆಗಾಲದ ಆರಂಭದ ಬೆನ್ನಲ್ಲೇ ಸೊಳ್ಳೆಗಳಿಂದ ಹರಡುವ ಈ ರೋಗವನ್ನು ನಿಯಂತ್ರಿಸಲು ಮತ್ತು ದೇಶದ ನಾಗರಿಕರನ್ನು ಸುರಕ್ಷಿತವಾಗಿಡಲು ಭಾರತ ಈಗಾಗಲೇ ಸಿದ್ಧತೆಗಳನ್ನು ಕೈಗೊಂಡಿದೆ.

ಶ್ರೀಲಂಕಾದಲ್ಲಿ ಪರಿಸ್ಥಿತಿ ಹೇಗಿದೆ:
2026ರ ಜೂನ್ ಕೊನೆಯ ವಾರದ ವರದಿಯ ಪ್ರಕಾರ, ಈ ವರ್ಷ ದಾಖಲಾದ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 50,000 ಗಡಿ ದಾಟಿದೆ. ಪ್ರಸ್ತುತ ಶ್ರೀಲಂಕಾದಲ್ಲಿ ಪ್ರತಿದಿನ ಸರಾಸರಿ 600 ರಿಂದ 700 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ.ಇನ್ನೂ ಈ ವರ್ಷ ಇದುವರೆಗೆ 29 ಜನರು ಡೆಂಗ್ಯೂನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ಸುಮಾರು 50%ಕ್ಕೂ ಹೆಚ್ಚು ಪ್ರಕರಣಗಳು ಕೇವಲ ಶ್ರೀಲಂಕಾದ ಪ್ರಶ್ಚಿಮ ರಾಜ್ಯಗಳಲ್ಲೇ ದಾಖಲಾಗಿವೆ. ಅದರಲ್ಲೂ ರಾಜಧಾನಿ ಕೊಲೊಂಬೊ (Colombo), ಗಂಪಹಾ (Gampaha) ಮತ್ತು ಕಲುತಾರಾ (Kalutara) ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಂಡಿವೆ.
ಶುರುವಾಗಿದ್ದು ಹೇಗೆ ಮತ್ತು ಯಾವಾಗ?
‘ದಿತ್ವಾ’ ಚಂಡಮಾರುತದಿಂದಾಗಿ ಡೆಂಗ್ಯೂ ಸಮಸ್ಯೆಯ ಬೇರುಗಳು ಹರಡಿದ್ದು ಕಳೆದ ವರ್ಷದ ಕೊನೆಯಲ್ಲಿ. 2025ರ ನವೆಂಬರ್‌ನಲ್ಲಿ ಶ್ರೀಲಂಕಾಕ್ಕೆ ಅಪ್ಪಳಿಸಿದ ʻದಿತ್ವಾ’ ಚಂಡಮಾರುತ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟುಮಾಡಿತು. ಇದರಿಂದಾಗಿ ಅಲ್ಲಿನ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು, ನೂರಾರು ಕಡೆಗಳಲ್ಲಿ ಕೃತಕ ಸರೋವರಗಳು ಹಾಗೂ ನೀರು ನಿಲ್ಲುವ ತಾಣಗಳು ಸೃಷ್ಟಿಯಾದವು. ಇದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಆರಂಭಿಕ ವೇದಿಕೆಯಾಯಿತು.
2026ರ ಆರಂಭದಿಂದಲೇ ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿದ್ದವು. ಆದರೆ, ಮೇ 2026ರ ಮಧ್ಯಭಾಗದಲ್ಲಿ ಆರಂಭವಾದ ನೈಋತ್ಯ ಮುಂಗಾರು ಮಳೆ ಮತ್ತು ಅದರ ಬೆನ್ನಲ್ಲೇ ಬಂದ ಭಾರಿ ಪ್ರವಾಹ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿತು. ಕೇವಲ ಮೇ ತಿಂಗಳೊಂದರಲ್ಲೇ 8,600ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾದವು. ಜೂನ್ ತಿಂಗಳು ಬರುತ್ತಿದ್ದಂತೆ ಮಳೆಯ ಪ್ರಮಾಣ ಹೆಚ್ಚಾಗಿ, ಕೇವಲ ಮೂರೇ ವಾರಗಳಲ್ಲಿ 13,000ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ತಗುಲಿ ಪರಿಸ್ಥಿತಿ ಕೈಮೀರಿತು.

ಪ್ರಮುಖ ಕಾರಣಗಳು:
ಚಂಡಮಾರುತ ಮತ್ತು ಮುಂಗಾರು ಮಳೆಯಿಂದಾಗಿ ನಗರ ಪ್ರದೇಶಗಳಲ್ಲಿ ನಿಂತ ಸ್ವಚ್ಛ ನೀರು ಸೊಳ್ಳೆಗಳ ತೀವ್ರ ಸಂತಾನೋತ್ಪತ್ತಿಗೆ ಕಾರಣವಾಯಿತು. ಮನೆ ಹಾಗೂ ಕಟ್ಟಡಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಕಡಿಮೆಯಾಗಿದ್ದು, ವೈರಸ್ ವೇಗವಾಗಿ ಹರಡಲು ದಾರಿಯಾಯಿತು. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರ ಕಚೇರಿಯ ಆದೇಶದ ಮೇರೆಗೆ ಸೊಳ್ಳೆಗಳ ತಾಣಗಳನ್ನು ಪತ್ತೆಹಚ್ಚಿ ನಾಶಪಡಿಸಲು ಶ್ರೀಲಂಕಾದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ ಕಣಕ್ಕಿಳಿದಿದೆ. ಜೊತೆಗೆ ಸೊಳ್ಳೆಗಳು ಉತ್ಪತ್ತಿಯಾಗುವ ಜಾಗಗಳನ್ನು ಸರಿಯಾಗಿ ನಿರ್ವಹಿಸದ ಮಾಲೀಕರಿಗೆ ಕಠಿಣ ಕಾನೂನು ಕ್ರಮ ಮತ್ತು “ರೆಡ್ ನೋಟಿಸ್” ನೀಡಲಾಗುತ್ತಿದೆ.
ಡೆಂಗ್ಯೂ ಹೇಗೆ ಹರಡುತ್ತೆ?
ಡೆಂಗ್ಯೂ ಜ್ವರವು ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡುವುದಿಲ್ಲ. ಇದು ಮುಖ್ಯವಾಗಿ ಸೊಳ್ಳೆಗಳ ಕಡಿತದಿಂದ ಹರಡುವ ಒಂದು ವೈರಲ್ ಕಾಯಿಲೆಯಾಗಿದೆ.
ಡೆಂಗ್ಯೂ ಹರಡಲು ಮುಖ್ಯ ಕಾರಣ ‘ಈಡಿಸ್ ಈಜಿಪ್ಟಿ’ ಎಂಬ ಹೆಣ್ಣು ಸೊಳ್ಳೆಗಳು. ಈ ಸೊಳ್ಳೆಗಳ ಮೈಮೇಲೆ ಬಿಳಿ ಚುಕ್ಕೆಗಳಿರುವುದರಿಂದ ಇವುಗಳನ್ನು ಸಾಮಾನ್ಯವಾಗಿ ‘ಟೈಗರ್ ಸೊಳ್ಳೆ’ ಎಂದೂ ಕರೆಯುತ್ತಾರೆ. ಈ ಸೊಳ್ಳೆಗಳು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ.
ಮೊದಲು ಸೊಳ್ಳೆಗೆ ಡೆಂಗ್ಯೂ ಇರುವುದಿಲ್ಲ. ಅದು ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ರೋಗಿಯೊಬ್ಬರನ್ನು ಕಚ್ಚಿದಾಗ, ರೋಗಿಯ ರಕ್ತದೊಂದಿಗೆ ಡೆಂಗ್ಯೂ ವೈರಸ್ ಸೊಳ್ಳೆಯ ದೇಹವನ್ನು ಸೇರುತ್ತದೆ. ಸೊಳ್ಳೆಯ ದೇಹ ಸೇರಿದ ವೈರಸ್, ಸುಮಾರು 8 ರಿಂದ 12 ದಿನಗಳ ಕಾಲ ವೃದ್ಧಿಯಾಗುತ್ತದೆ. ಈಗ ಆ ಸೊಳ್ಳೆ ‘ಸೋಂಕಿತ ಸೊಳ್ಳೆ’ಯಾಗಿ ಬದಲಾಗುತ್ತದೆ.ಈ ಸೋಂಕಿತ ಸೊಳ್ಳೆಯು ಯಾವುದೇ ಒಬ್ಬ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ, ತನ್ನ ಜೊಲ್ಲಿನ ಮೂಲಕ ಡೆಂಗ್ಯೂ ವೈರಸ್ ಅನ್ನು ಆ ವ್ಯಕ್ತಿಯ ರಕ್ತಕ್ಕೆ ರವಾನಿಸುತ್ತದೆ. ಸೊಳ್ಳೆ ಕಚ್ಚಿದ 4 ರಿಂದ 10 ದಿನಗಳ ಒಳಗೆ ಆ ವ್ಯಕ್ತಿಯಲ್ಲಿ ತೀವ್ರ ಜ್ವರ, ಮೈಕೈ ನೋವಿನಂತಹ ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇನ್ನೂ ಕೆಲವು ಸಂದರ್ಭಗಳಲ್ಲಿ, ಡೆಂಗ್ಯೂ ಪೀಡಿತ ಗರ್ಭಿಣಿ ಮಹಿಳೆಯಿಂದ ಮಗುವಿಗೆ ಅಥವಾ ಸೋಂಕಿತ ರಕ್ತವನ್ನು ಇನ್ನೊಬ್ಬರಿಗೆ ಹಾಕಿದಾಗ ಡೆಂಗ್ಯೂ ಹರಡುತ್ತದೆ.

ಈ ಸೊಳ್ಳೆಗಳು ಎಲ್ಲಿ ಹುಟ್ಟುತ್ತವೆ?
ಈಡಿಸ್ ಸೊಳ್ಳೆಗಳು ಕೊಳಕು ನೀರಿನಲ್ಲಿ ಬೆಳೆಯುವುದಿಲ್ಲ; ಬದಲಾಗಿ ನಿಂತಿರುವ ಸ್ವಚ್ಛ ನೀರಿನಲ್ಲಿ ಮೊಟ್ಟೆಯಿಡುತ್ತವೆ. ಮನೆ ಸುತ್ತಮುತ್ತ ಬಿದ್ದಿರುವ ಖಾಲಿ ಟೈರ್‌ಗಳು, ಪ್ಲಾಸ್ಟಿಕ್ ಕಪ್‌ಗಳು. ಒಡೆದ ಬಕೆಟ್‌ಗಳು. ಫ್ರಿಡ್ಜ್‌ನ ಹಿಂಭಾಗದ ಟ್ರೇ, ಮಳೆ ನೀರು ನಿಲ್ಲುವ ಟೆರೇಸ್ ಅಥವಾ ಹೂವಿನ ಕುಂಡಗಳು ಈ ತರಹದ ಜಾಗದಲ್ಲಿ ಹುಟ್ಟಿಕೊಳ್ಳುತ್ತವೆ.
ಸದ್ಯ ಭಾರತದಲ್ಲಿ ಪರಿಸ್ಥಿತಿ ಹೇಗಿದೆ?
ಶ್ರೀಲಂಕಾಕ್ಕೆ ಹೋಲಿಸಿದರೆ ಭಾರತದಲ್ಲಿ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಭಾರತದಲ್ಲೂ ಮುಂಗಾರು ಮಳೆ ಜೂನ್ ತಿಂಗಳಲ್ಲಿ ಚುರುಕಾಗಿರುವುದರಿಂದ, ದೇಶದ ಹಲವು ರಾಜ್ಯಗಳಲ್ಲಿ ಡೆಂಗ್ಯೂ ಪ್ರಕರಣಗಳು ನಿಧಾನವಾಗಿ ಹೆಚ್ಚಾಗತೊಡಗಿವೆ.

ಆರೋಗ್ಯ ಇಲಾಖೆಯ ಇತ್ತೀಚಿನ ವರದಿಗಳ ಪ್ರಕಾರ, ಈ ವರ್ಷ ಭಾರತದಲ್ಲಿ ಇದುವರೆಗೆ ಸುಮಾರು 16,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.ಈ ಹಿಂದೆ ಭಾರತದಲ್ಲಿ ಡೆಂಗ್ಯೂ ಕೇವಲ ಮುಂಗಾರು ಮಳೆಯ ನಂತರ (ಆಗಸ್ಟ್-ಅಕ್ಟೋಬರ್) ಹೆಚ್ಚಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ನಗರೀಕರಣದಿಂದಾಗಿ ವರ್ಷದ ಎಲ್ಲಾ ತಿಂಗಳಲ್ಲೂ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ.
ಮುಂಗಾರು ಮಳೆ ತೀವ್ರವಾಗಿರುವ ದಕ್ಷಿಣ ಭಾರತದ ಮತ್ತು ಕರಾವಳಿ ರಾಜ್ಯಗಳಲ್ಲಿ ಸದ್ಯಕ್ಕೆ ಹೆಚ್ಚಿನ ನಿಗಾ ವಹಿಸಲಾಗಿದೆ. ದಕ್ಷಿಣ ಕರಾವಳಿ ರಾಜ್ಯಗಳಲ್ಲಿ ಮುಂಗಾರು ಆರಂಭವಾಗುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಉದಾಹರಣೆಗೆ, ಕೇರಳದ ಎರ್ನಾಕುಲಂ ಮುಂತಾದ ಜಿಲ್ಲೆಗಳಲ್ಲಿ ಜೂನ್ ಕೊನೆಯ ವಾರದಲ್ಲಿ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ.
ಶ್ರೀಲಂಕಾಕ್ಕೆ ಭೌಗೋಳಿಕವಾಗಿ ಹತ್ತಿರವಿರುವ ಕಾರಣ ಮತ್ತು ನಿರಂತರ ವಿಮಾನಯಾನ ಇರುವುದರಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ.

ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳು:
ಭಾರತ ಸರ್ಕಾರ ಮತ್ತು ಕೇಂದ್ರ ಆರೋಗ್ಯ ಇಲಾಖೆಯು ನೆರೆರಾಷ್ಟ್ರದ ಸ್ಥಿತಿಯನ್ನು ನೋಡಿ ಈಗಾಗಲೇ ರಾಜ್ಯಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿದೆ:
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಅಲರ್ಟ್: ಶ್ರೀಲಂಕಾದಿಂದ ತಮಿಳುನಾಡು (ಚೆನ್ನೈ, ತಿರುಚಿ), ಕೇರಳಕ್ಕೆ ಬರುವ ಪ್ರಯಾಣಿಕರಲ್ಲಿ ಯಾರಿಗಾದರೂ ತೀವ್ರ ಜ್ವರದ ಲಕ್ಷಣಗಳಿದ್ದರೆ ಅವರನ್ನು ತಕ್ಷಣವೇ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮುಂಗಾರು ಮಳೆಯ ನೀರು ಎಲ್ಲೂ ನಿಲ್ಲದಂತೆ ನೋಡಿಕೊಳ್ಳಲು ಸ್ಥಳೀಯ ಮುನ್ಸಿಪಾಲಿಟಿ ಮತ್ತು ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷಾ ಕಿಟ್‌ಗಳು ಹಾಗೂ ರಕ್ತದ ಪ್ಲೇಟ್‌ಲೆಟ್‌ಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸದ್ಯಕ್ಕೆ ಭಾರತದಲ್ಲಿ ಪರಿಸ್ಥಿತಿ ಶ್ರೀಲಂಕಾದಷ್ಟು ಭೀಕರವಾಗಿಲ್ಲದಿದ್ದರೂ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸುವುದು ಅತ್ಯಗತ್ಯವಾಗಿದೆ.

