ದುಬೈ: ಏಕದಿನ ಕ್ರಿಕೆಟ್ ರನ್ ಗಳಿಕೆಯಲ್ಲಿ ಅಮೋಘ ಸಾಧನೆ ಮಾಡಿದ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ 751 ಅಂಕಗಳೊಂದಿಗೆ ನಂ.1 ಸ್ಥಾನ ಪಡೆದಿದ್ದಾರೆ.
ಐಸಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೂರು ಸ್ಥಾನಗಳಲ್ಲಿ ಉನ್ನತಿ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ತಂಡದ ವಿರುದ್ದ ಶತಕ ಹಾಗೂ ಅಜೇಯ 90 ರನ್ ಸಿಡಿಸಿ ಮಂದಾನ ಮಿಂಚಿದ್ದರು. ಉಳಿದಂತೆ ಟೀಂ ಇಂಡಿಯಾದ ಆಟಗಾರ್ತಿ ಮಿಥಾಲಿ ರಾಜ್ 669 ಅಂಕಗಳೊಂದಿಗೆ 5 ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಟಾಪ್ 5 ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ.
2018 ಬಳಿಕ 15 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಮಂದಾನ 2 ಶತಕ ಹಾಗೂ 8 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಐಸಿಸಿ ಘೋಷಣೆ ಮಾಡಿದ್ದ 2018ರ ರ ವಾರ್ಷಿಕ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು. 22 ವರ್ಷದ ಮಂದಾನ 47 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 1,798 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 14 ಅರ್ಧ ಶತಕಗಳು ಸೇರಿದೆ. ಉಳಿದಂತೆ 52, ಟಿ20 ಪಂದ್ಯಗಳನ್ನು ಆಡಿದ್ದು, 6 ಅರ್ಧ ಶತಕಗಳೊಂದಿಗೆ 1,046 ರನ್ ಸಿಡಿಸಿದ್ದಾರೆ. 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv