ಮಂಗಳೂರು: ಸುಮಾರು 18 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು, ಸ್ವಂತ ಅಣ್ಣನೇ ತಂಗಿಯನ್ನು ಕೊಲೆ ಮಾಡಿರುವ ಪ್ರಕರಣವೊಂದು ಮಂಗಳೂರಿನ ಕೊಣಾಜೆ ಬಳಿಯ ಮುಡಿಪುವಿನಲ್ಲಿ ಬೆಳಕಿಗೆ ಬಂದಿದೆ.
ಸ್ಟೀಫಲ್ ಕುಟಿನ್ಹೋ(16) ಮೃತ ವಿದ್ಯಾರ್ಥಿನಿ. ಈಕೆಯ ಸಹೋದರ ಸ್ಯಾಮ್ಸನ್ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಶನಿವಾರ ಮನೆ ಬಳಿಯ ಗುಡ್ಡದಲ್ಲಿ ವಿದ್ಯಾರ್ಥಿನಿಯ ಅಸ್ಥಿಪಂಜರ ಪತ್ತೆಯಾಗಿದೆ.
Advertisement
Advertisement
ಏನಿದು ಪ್ರಕರಣ?
ಸ್ಟೀಫಲ್ ಕುಟಿನ್ಹೋ ಮಂಗಳೂರಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಳು. ಆದರೆ ಅಕ್ಟೋಬರ್ 8ರಂದು ಮನೆಯಲ್ಲಿದ್ದ ಸ್ಟೀಫಲ್ ದಿಢೀರ್ ನಾಪತ್ತೆಯಾಗಿದ್ದಳು. ಪೋಷಕರು ಸುತ್ತಮುತ್ತ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದರು. ತಂದೆ ಫ್ರಾನ್ಸಿಸ್ ಕುಟಿನ್ಹೋ ನೀಡಿದ್ದ ದೂರಿನಂತೆ ಪೊಲೀಸರು ತನಿಖೆ ಕೂಡ ನಡೆಸಿದ್ದರು. ಆದರೆ ವಿದ್ಯಾರ್ಥಿನಿ ಬಗ್ಗೆ ಯಾವ ಸುಳಿವೂ ಸಿಕ್ಕಿರಲಿಲ್ಲ.
Advertisement
ಹೀಗಾಗಿ ಪೊಲೀಸರು ಮತ್ತೊಮ್ಮೆ ಮನೆಯವರನ್ನು ವಿಚಾರಣೆ ಮಾಡಿದ್ದಾರೆ. ತೀವ್ರ ವಿಚಾರಣೆಯ ಬಳಿಕ ಸೋದರ ಸ್ಯಾಮ್ಸನ್ ಕೊಲೆ ವಿಚಾರ ಬಾಯ್ಬಿಟ್ಟಿದ್ದಾನೆ. ಅಕ್ಟೋಬರ್ 8ರಂದು ಮನೆಯಲ್ಲಿ ಸ್ಟೀಫಲ್ ಕುಟಿನ್ಹೋ ಮತ್ತು ಸೋದರ ಸ್ಯಾಮ್ಸನ್ ಇಬ್ಬರೇ ಇದ್ದರು. ಆಗ ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಆ ಕೋಪದಿಂದ ಆರೋಪಿ ಸೋದರ ವಿದ್ಯಾರ್ಥಿನಿ ತಲೆಗೆ ಸುತ್ತಿಗೆಯಿಂದ ಬಡಿದು ಕೊಲೆ ಮಾಡಿದ್ದಾನೆ.
Advertisement
ನಂತರ ಸೋದರಿಯ ಮೃತದೇಹವನ್ನು ಗುಡ್ಡದಲ್ಲಿ ಎಸೆದಿದ್ದಾನೆ. ವಿಚಾರಣೆ ನಂತರ ಆರೋಪಿ ಮೃತದೇಹವನ್ನು ಎಸೆದಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದಾನೆ. ಅಲ್ಲಿ ಯುವತಿ ಮೃತದೇಹ ಅಸ್ಥಿಪಂಜರ ಸಿಕ್ಕಿದೆ.
ಸದ್ಯಕ್ಕೆ ಮಂಗಳೂರಿನ ಹೊರವಲಯದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸ್ಯಾಮ್ಸನ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.