ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿನ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ಆಂತರಿಕ ಕಿತ್ತಾಟಕ್ಕೆ ಬ್ರೇಕ್ ಹಾಕಲು ಸಮನ್ವಯ ಸಮಿತಿ ರಚಿಸುವಂತೆ ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ.
ಹೌದು. ಒಂದು ಕಡೆ ಡಿಕೆಶಿ ಬೆಂಬಲಿಗರು ಇನ್ನೊಂದು ಕಡೆ ಸಿದ್ದರಾಮಯ್ಯ ಬೆಂಬಲಿಗರು ಗುಂಪು ಜಾಸ್ತಿಯಾಗುತ್ತಿದೆ. ಆ ಗುಂಪು ಈ ಗುಂಪಿಗಿಂತ ಬದಲಾಗಿ ಈಗ ಕಾಂಗ್ರೆಸ್ ಗುಂಪು ಬೇಕು. ಅದಕ್ಕಾಗಿ ಸಮನ್ವಯ ಆಗಲೇಬೇಕು ಎಂದು ಹಿರಿಯ ನಾಯಕರು ಹೈಕಮಾಂಡ್ ಮುಂದೆ ಪಟ್ಟುಹಿಡಿದಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬರೀ ಎರಡೇ ಅಲ್ಲ, ಮೂರು ಗುಂಪುಗಳಿವೆ: ಕಾರಜೋಳ
ಸಲೀಂ ಮತ್ತು ಅಶೋಕ್ ಪಟ್ಟಣಶೆಟ್ಟಿ ಆಡಿದ ಮಾತಿನಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು. ಹೀಗೆ ಪರಸ್ಪರ ಎರಡೂ ಬಣದವರು ಲಂಗು ಲಗಾಮಿಲ್ಲದೆ ಮಾತನಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ಜಟಾಪಟಿ ಇನ್ನಷ್ಟು ಹೆಚ್ಚಾಗಬಹುದು. ಆದ್ದರಿಂದ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ನಿಯಂತ್ರಣಕ್ಕೆ ಸಮನ್ವಯ ಸಮಿತಿ ರಚನೆ ಆಗಲೇಬೇಕು ಎಂದು ಹಿರಿಯರು ಹೈಕಮಾಂಡ್ ಮುಂದೆ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಡ್ಯಾಮೇಜ್ ಕಂಟ್ರೋಲ್: ಖಾದರ್‌ಗೆ ಸಿಕ್ತು ದೊಡ್ಡ ಪಟ್ಟ
ಸಮನ್ವಯ ಸಮಿತಿ ಶೀಘ್ರವೇ ರಚಿಸಿ ಪಕ್ಷದ ಒಗ್ಗಟ್ಟು ಒಡೆಯದಂತೆ ಮಾಡಿ. ಇಲ್ಲದಿದ್ದರೆ ಚುನಾವಣೆ ಹೊಸ್ತಿಲಲ್ಲಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜಾಸ್ತಿಯಾಗಿ ಪಕ್ಷ ಹಾಗೂ ಚುನಾವಣೆ ಎರಡರ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಬಣ ರಾಜಕೀಯ ಕಿತ್ತಾಟದ ಲಾಭ ಪಡೆಯಲು ಕಾಂಗ್ರೆಸ್ ಹಿರಿಯ ನಾಯಕರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.