ಬೆಳಗಾವಿ: ಸಿದ್ದರಾಮಯ್ಯ (Siddaramaiah) ಅವರಿಗೆ ಕ್ಷೇತ್ರವೇ ಸಿಗುತ್ತಿಲ್ಲ. ಹೀಗಿದ್ದಾಗ ಅವರು ಮುಖ್ಯಮಂತ್ರಿ (CM) ಆಗೋಕೆ ಹೇಗೆ ಸಾಧ್ಯ? ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ (Congress) ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲ್ಲ ಎಂದು ಶಾಸಕ ಅಭಯ್ ಪಾಟೀಲ್ (Abhay Patil) ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಬಳಿಕ ನಮ್ಮಲ್ಲಿ ಯಾರು ಕೂಡಾ ಮುಖ್ಯಮಂತ್ರಿ ಆಗುತ್ತೇವೆ ಎಂದು ಹೇಳಿಲ್ಲ. ಹೀಗಾಗಿ ನಮ್ಮಲ್ಲಿ ನೂರು ಬಾಗಿಲು ಇರಲು ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಮಾತ್ರ 5 ಬಾಗಿಲುಗಳಿವೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ. ಪರಮೇಶ್ವರ್, ಎಂಬಿ ಪಾಟೀಲ್ ಹಾಗೂ ಖರ್ಗೆ ಸೇರಿ 5 ಬಾಗಿಲು ಆಗಿದೆ. ಯಾವ ಬಾಗಿಲಿನಿಂದ ಕಾಂಗ್ರೆಸ್ ಒಳಗೆ ಹೋಗಬೇಕು ಎಂದು ಅವರ ಕಾರ್ಯಕರ್ತರಿಗೆ ಗೊಂದಲವಾಗುತ್ತಿದೆ ಎಂದು ಟೀಕಿಸಿದರು.
ಈ ನಾಲ್ವರು ಸಿಎಂ ಆಗಬೇಕು ಎಂದು ಕಾದು ಕುಳಿತಿದ್ದಾರೆ. ಆದರೆ ಹೈಕಮಾಂಡ್ ಖರ್ಗೆ ಅವರನ್ನು ಸಿಎಂ ಮಾಡಬೇಕು ಎಂದು ನಿರ್ಣಯ ಮಾಡಿದೆ. ಇದಕ್ಕಾಗಿ ಹೈಕಮಾಂಡ್ ಎಲ್ಲರನ್ನೂ ಬಿಟ್ಟು ಬೇರೆಯೇ ದಾರಿ ಹಿಡಿದಿದೆ. ಅಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ತಾಳವಿಲ್ಲ ಮೇಳವಿಲ್ಲ. ಬೇರೆಯವರ ಬಗ್ಗೆ ಮಾತನಾಡಲು ಅವರಿಗೆ ನೈತಿಕ ಹಕ್ಕಿಲ್ಲ ಎಂದರು. ಇದನ್ನೂ ಓದಿ: ಲೋಕಸಭೆಯಲ್ಲಿ ಅಡಿಕೆ ಬೆಳೆಗಾರರ ಪರ ಧ್ವನಿ ಎತ್ತಿದ ಬಿ.ವೈ ರಾಘವೇಂದ್ರ
ಸಿದ್ದರಾಮಯ್ಯನವರಿಗೆ ಕ್ಷೇತ್ರ ಸಿಗುತ್ತಿಲ್ಲ. ಅವರು ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ? ಕಳೆದ ಬಾರಿ ಸಿಎಂ ಇದ್ದವರು ಅಲೆಮಾರಿ ರೀತಿಯಲ್ಲಿ ಅಲೆದು ಕೊನೆಗೆ ಒಂದು ಗಿಡದ ಟೊಂಗೆಗೆ ಸಿಕ್ಕ ಹಾಗೆ ಬಾದಾಮಿಗೆ ಹೋಗಿ ಸಿಕ್ಕಿಹಾಕಿಕೊಂಡರು. ಈ ಬಾರಿ ಎಲ್ಲಿ ನಿಲ್ಲಬೇಕು ಎನ್ನುವ ಗೊಂದಲ ಅವರಲ್ಲಿದೆ. ಕೋಲಾರದಲ್ಲಿ ಮುನಿಯಪ್ಪ ಸಾಹೇಬರು ಅವರನ್ನು ಎಷ್ಟು ಚೆನ್ನಾಗಿ ಸ್ವಾಗತ ಮಾಡುತ್ತಿದ್ದಾರೆ ನೋಡಿ. ಈ ಬಾರಿ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿಕೆ ನೀಡಿದರು.
ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ಕಡೆಗಣಿಸುವಂತಹ ಪ್ರಶ್ನೆಯೇ ಇಲ್ಲ. ಗುಜರಾತ್‌ಗೆ ವೀಕ್ಷಕರಾಗಿ ಯಡಿಯೂರಪ್ಪ ಅವರನ್ನು ಕಳುಹಿಸಿಕೊಡುವ ಕೆಲಸ ಹೈಕಮಾಂಡ್ ಮಾಡಿದೆ. ಇದರ ಮೇಲೆ ಅರ್ಥ ಮಾಡಿಕೊಳ್ಳಿ ಪಕ್ಷದಲ್ಲಿ ಯಡಿಯೂರಪ್ಪ ಸ್ಥಾನಮಾನ ಉನ್ನತ ಮಟ್ಟದಲ್ಲಿದೆ. ಕಾಂಗ್ರೆಸ್ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೊಮ್ಮಾಯಿ, ಯಡಿಯೂರಪ್ಪ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅಭಯ್ ಪಾಟೀಲ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ