ಬರೋಬ್ಬರಿ ಏಳು ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಶುಭ್ರ ಅಯ್ಯಪ್ಪ (Shubhra Ayyappa). ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾದ ನಂತರ ಮತ್ತೆ ಇವರು ಯಾವ ಸಿನಿಮಾಗಳಲ್ಲೂ ನಟಿಸಿರಲಿಲ್ಲ. ಇದೀಗ ಏಳು ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಎರಡೆರಡೂ ಸಿನಿಮಾಗಳ ಮೂಲಕ ಎನ್ನುವುದು ಮತ್ತೊಂದು ವಿಶೇಷ.
ಈ ಹಿಂದೆ ಶುಭ್ರ ಅಯ್ಯಪ್ಪ ಅವರು ರಾಮನ ಅವತಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ನಂತರ ಅದು ನಿಜವೂ ಆಯಿತು. ಇದೀಗ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ (Thimmaiah and Thimmaiah) ಸಿನಿಮಾದಲ್ಲಿ ನಟಿಸಲಿದ್ದಾರೆ. ಸಂಜಯ್ ಶರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದ ವಿಶೇಷ ಅಂದರೆ, ಅನಂತ್ ನಾಗ್ (Ananth Nag) ಮತ್ತು ದಿಗಂತ್ (Digant) ಕಾಂಬಿನೇಷನ್ ನ ಸಿನಿಮಾ ಇದಾಗಿದೆ. ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್
ತಾತ ಮತ್ತು ಮೊಮ್ಮಗನ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿ ಬರುತ್ತಿದ್ದು, ಅನಂತ್ ನಾಗ್ ತಾತನಾಗಿ, ದಿಗಂತ್ ಮೊಮ್ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರವನ್ನು ಐಂದ್ರಿತಾ ರೇ (Aindritha Ray) ಮಾಡಿದರೆ, ಮತ್ತೊಂದು ಪಾತ್ರವನ್ನು ಶುಭ್ರಾ ಅಯ್ಯಪ್ಪ ನಿರ್ವಹಿಸುತ್ತಿದ್ದಾರೆ.
ಇದೊಂದು ತಾತ ಮತ್ತು ಮೊಮ್ಮಗನ ನಡುವಿನ ಕಥೆಯಾಗಿದ್ದು, ಮೂವತ್ತು ವರ್ಷಗಳ ಕಾಲ ಇಬ್ಬರೂ ಒಬ್ಬರನ್ನೊಬ್ಬರು ಭೇಟಿ ಮಾಡುವುದಿಲ್ಲ. ಯಾವುದೇ ಒಂದು ಸನ್ನಿವೇಶದಲ್ಲಿ ಇಬ್ಬರೂ ಮೂರು ತಿಂಗಳ ಕಾಲ ಒಟ್ಟಿಗೆ ಇರುವಂತಹ ಸನ್ನಿವೇಶ ಎದುರಾಗುತ್ತದೆ. ಆ ಮೂರು ತಿಂಗಳು ಹೇಗೆ ಕಳೆಯುತ್ತಾರೆ ಎನ್ನುವುದೇ ಸಿನಿಮಾ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಮಿಮಿಕ್ರಿ ಗೋಪಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.