ಲಕ್ನೋ: ಪ್ರಿಯಕರನನ್ನು (Lover) ಕೊಲೆ ಮಾಡಿದ ಆರೋಪದ ಮೇಲೆ ಇನ್ಫ್ಲುಯೆನ್ಸರ್ ಶ್ರದ್ಧಾ ದುಬೆಯನ್ನು (Shraddha Dubey) ಉತ್ತರ ಪ್ರದೇಶದ (Uttar Pradesh) ಪೊಲೀಸರು ನಾಗಪುರದಲ್ಲಿ ಬಂಧಿಸಿದ್ದಾರೆ.
ಶ್ರದ್ಧಾ ಪೊಲೀಸರ ಕಣ್ಣು ತಪ್ಪಿಸಲು ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದಳು. ಆಕೆಯ ಸುಳಿವು ನೀಡಿದವರಿಗೆ 50,000 ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಈಕೆಯ ವಿರುದ್ಧ ಪ್ರಿಯಕರ ಶಿವ ಶರ್ಮಾನನ್ನು ಕೊಲೆಗೈದ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: 16 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆ
ಶರ್ಮಾ ಲಕ್ನೋದಲ್ಲಿರುವ ದುಬೆಯ ಫ್ಲಾಟ್ನಿಂದ ಬಿದ್ದು ಮೃತಪಟ್ಟಿದ್ದ. ಆತನನ್ನು ಕೊಲೆಗೈಯ್ಯಲಾಗಿದೆ ಎಂದು ಆತನ ಕುಟುಂಬಸ್ಥರು ಶ್ರದ್ಧಾ ದುಬೆ ವಿರುದ್ಧ ಕೊಲೆ ಆರೋಪ ಮಾಡಿದ್ದರು.
ಆರೋಪಿಗಳಾದ ಶ್ರದ್ಧಾ ದುಬೆ, ಆಕೆಯ ಸಹೋದರಿ ರಶ್ಮಿ ದುಬೆ ಹಾಗೂ ಚಾಲಕ ಡ್ಯಾನಿಶ್, ಶರ್ಮಾ ಸಾವಿನ ಬಳಿಕ ಲಕ್ನೋದಿಂದ ನೇಪಾಳಕ್ಕೆ ಪರಾರಿಯಾಗಿದ್ದರು. ಅಲ್ಲಿಂದ ರಾಯ್ ಬರೇಲಿ ಮೂಲಕ ಆಗ್ರಾಕ್ಕೆ ಬಂದು ನಾಗಪುರ ತಲುಪಿದ್ದರು. ಬಂಧನಕ್ಕೊಳಗಾಗುವ ಮೊದಲು ಮತ್ತೆ ಅಲ್ಲಿಂದ ಪರಾರಿಯಾಗಲು ಯೋಜನೆ ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (STF) ಮತ್ತು ನಾಗಪುರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಆರೋಪಿಗಳನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರ್ಮಾ ಅವರು ಲಕ್ನೋದಲ್ಲಿ ಹಲವು ರೆಸ್ಟೋರೆಂಟ್ಗಳನ್ನು ಹೊಂದಿದ್ದರು. ಶರ್ಮಾ ಸಾವಿನ ನಂತರ, ಅವರ ತಾಯಿ ಆರೋಪಿಗಳ ವಿರುದ್ಧ ಬ್ಲ್ಯಾಕ್ಮೇಲ್ ಮತ್ತು ಕೊಲೆ ಆರೋಪಗಳನ್ನು ಹೊರಿಸಿದ್ದರು.
ನಾನು ನಿರ್ದೋಷಿ – ವಿಡಿಯೋದಲ್ಲಿ ಹಂಚಿಕೊಂಡಿದ್ದ ಶ್ರದ್ಧಾ
ಶರ್ಮಾ ಸಾವಿನ ಬಳಿಕ ಪರಾರಿಯಾಗಿದ್ದ ಶ್ರದ್ಧಾ ದುಬೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳನ್ನು ಹಂಚಿಕೊಂಡು, ತಾನು ನಿರ್ದೋಷಿ ಎಂದು ಹೇಳಿಕೊಂಡಿದ್ದಳು. ಅಂತಹ ಒಂದು ವಿಡಿಯೋದಲ್ಲಿ, ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಾದಿಸಿದ್ದಳು.
ನನಗೆ ಶಿವ ಶರ್ಮಾ ಪರಿಚಯವಾಗಿ ಕೇವಲ ನಾಲ್ಕು ತಿಂಗಳಷ್ಟೇ ಆಗಿತ್ತು. ಸುಮಾರು ಎರಡರಿಂದ ಎರಡೂವರೆ ತಿಂಗಳು ನಾವು ಸ್ನೇಹಿತರಾಗಿದ್ದೆವು. ಕಳೆದ ಎರಡು ತಿಂಗಳುಗಳಿಂದಷ್ಟೇ ಇಲ್ಲಿಗೆ ಬರಲು ಪ್ರಾರಂಭಿಸಿದ್ದನು. ಇಷ್ಟು ಕಡಿಮೆ ಅವಧಿಯಲ್ಲಿ ದ್ವೇಷ ಬೆಳೆಯಲು ಸಾಧ್ಯವೇ ಇಲ್ಲ. ಅವನ ತಾಯಿಗೆ ನಾನು ಮೊದಲಿನಿಂದಲೂ ಇಷ್ಟವಿರಲಿಲ್ಲ. ಹಾಗಾಗಿ ಅವರು ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದಳು.
ಶರ್ಮಾ 20 ಲಕ್ಷ ರೂಪಾಯಿ ಸಾಲದಲ್ಲಿದ್ದ ಮತ್ತು ಸಾಲವನ್ನು ತೀರಿಸಲು ಸಾಧ್ಯವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಎಂದೂ ಆಕೆ ಹೇಳಿಕೊಂಡಿದ್ದಳು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮಹಿಳಾ ಇನ್ಫ್ಲುಯೆನ್ಸರ್ಗಳಿಗೆ ಸುರಕ್ಷತೆ ಎಷ್ಟಿದೆ? ಡಿಜಿಟಲ್ ಖ್ಯಾತಿಯೇ ಜೀವಕ್ಕೆ ಅಪಾಯವಾಗ್ತಿದೆಯೇ?

