ಪಾಕಿಸ್ತಾನದ ಖ್ಯಾತ ಟಿಕ್‌ಟಾಕರ್ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಶಮ್ಸೋ ಬಿಬಿ, ಆನ್‌ಲೈನ್‌ನಲ್ಲಿ ಆಯೇಷಾ ಗಿಲಮಾನಾ ಎಂದೂ ಪರಿಚಿತರಾಗಿದ್ದ 28 ವರ್ಷದ ಯುವತಿ, ಇತ್ತೀಚೆಗೆ (ಆ.14) ಇಸ್ಲಾಮಾಬಾದ್ ಸಮೀಪದ ಟ್ಯಾಕ್ಸಿಲಾ ನಗರದಲ್ಲಿ ಗುಂಡಿಕ್ಕಿ ಹತ್ಯೆಗೀಡಾಗಿದ್ದಾರೆ. ಈ ಘಟನೆ ಪಾಕಿಸ್ತಾನದಲ್ಲಿ ಮಹಿಳಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಡಿಜಿಟಲ್ ಕ್ರಿಯೇಟರ್‌ಗಳ ಸುರಕ್ಷತೆ ಕುರಿತು ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣವಾಗಿದೆ.
13 ಲಕ್ಷಕ್ಕೂ ಅಧಿಕ ಟಿಕ್‌ಟಾಕ್ ಫಾಲೋವರ್ಸ್ ಹೊಂದಿದ್ದ ಶಮ್ಸೋ ಬಿಬಿ ಅವರ ಹತ್ಯೆಯ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಅಪಾಯಕ್ಕೆ ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಇನ್ನಷ್ಟು ಕುತೂಹಲಕಾರಿ ಸಂಗತಿಗಳನ್ನು ತಿಳಿಯುವ ಆಸಕ್ತಿ ಇದ್ದರೆ ಮುಂದೆ ಓದಿ…
ಶಮ್ಸೋ ಬಿಬಿಗೆ ಏನಾಯಿತು?
ವರದಿಗಳ ಪ್ರಕಾರ, ಕಶೀಫ್ ಕಾಶಿ ಎಂಬ ವ್ಯಕ್ತಿಯೊಬ್ಬರು ಶಮ್ಸೋ ಬಿಬಿಗೆ ಫೋನ್ ಮಾಡಿ ಮನೆಯ ಹೊರಗೆ ಬರುವಂತೆ ಸೂಚಿಸಿದ್ದರು. ಬಳಿಕ ಅವರು ತಮ್ಮ ಸಹೋದರ ನೈಮತುಲ್ಲಾ ಹಾಗೂ 15 ವರ್ಷದ ಸಹೋದರಿ ಅಸ್ಮಿಯಾ ಅವರೊಂದಿಗೆ ಕಾರಿನಲ್ಲಿ ಮನೆಯಿಂದ ಹೊರಟಿದ್ದರು.
ಟ್ಯಾಕ್ಸಿಲಾ ಬೈಪಾಸ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ವಾಹನವನ್ನು ಅಡ್ಡಗಟ್ಟಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಶಮ್ಸೋ ಬಿಬಿಗೆ ಕುತ್ತಿಗೆ ಭಾಗಕ್ಕೆ ಎರಡು ಗುಂಡುಗಳು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಂಡಿನ ದಾಳಿಯ ಬಳಿಕ ನಿಯಂತ್ರಣ ತಪ್ಪಿದ ಕಾರು ಡಂಪ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಅವರ 15 ವರ್ಷದ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಹೋದರ ನೈಮತುಲ್ಲಾ ಕೂಡ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಘಟನೆ ಕುರಿತು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಹಣಕಾಸಿನ ವಿವಾದವೂ ಒಂದು ಸಾಧ್ಯ ಕಾರಣ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಶಮ್ಸೋ ಬಿಬಿಯ ಸಾವಿನ ನಂತರ ಅವರ ಟಿಕ್‌ಟಾಕ್ ಖಾತೆಯನ್ನು ಪ್ರೈವೇಟ್ ಮಾಡಲಾಗಿದೆ.
ಮಹಿಳಾ ಕ್ರಿಯೇಟರ್‌ಗಳ ವಿರುದ್ಧ ಹೆಚ್ಚುತ್ತಿರುವ ಹಿಂಸೆ?
ಶಮ್ಸೋ ಬಿಬಿ ಹತ್ಯೆ ಏಕಾಂಗಿಯಾಗಿ ನಡೆದ ಘಟನೆ ಅಲ್ಲ. ಪಾಕಿಸ್ತಾನದಲ್ಲಿ ಮಹಿಳಾ ಡಿಜಿಟಲ್ ಕ್ರಿಯೇಟರ್‌ಗಳ ಮೇಲೆ ನಡೆದ ಹಲವು ದಾಳಿಗಳು ಈಗ ಮತ್ತೊಂದು ಆತಂಕಕಾರಿ ಮಾದರಿಯತ್ತ ಬೆರಳು ತೋರಿಸುತ್ತಿವೆ.
2025 ಜೂನ್ – ಸನಾ ಯೂಸುಫ್ ಪ್ರಕರಣದಲ್ಲಿ ಏನಾಯ್ತು?
17 ವರ್ಷದ ಜನಪ್ರಿಯ ಟಿಕ್‌ಟಾಕರ್ ಸನಾ ಯೂಸುಫ್, 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು. ಇಸ್ಲಾಮಾಬಾದ್‌ನ ತಮ್ಮ ಮನೆಯಲ್ಲಿ ಅವರನ್ನ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ವರದಿಗಳ ಪ್ರಕಾರ, ಸನಾಗೆ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದ ಅನೇಕಬಾರಿ ಸನಾಳನ್ನ ಪ್ರೀತಿಸುತ್ತಿರುವುದಾಗಿ ಹೇಳಿದ್ದ. ಆದ್ರೆ ಸನಾ ಆತನ ಪ್ರೀತಿಯನ್ನ ನಿರಾಕರಿಸಿದ್ದರಿಂದ ಆಕೆಯನ್ನ ಹತ್ಯೆ ಮಾಡಲಾಗಿತ್ತು.
15ರ ಬಾಲಕಿ ಹಿರಾ ಅನ್ವರ್ ಭೀಕರ ಹತ್ಯೆ (2025)
ಕ್ವೆಟ್ಟಾದ 15 ವರ್ಷದ ಕಂಟೆಂಟ್ ಕ್ರಿಯೇಟರ್ ಹಿರಾ ಅನ್ವರ್ ಅವರನ್ನು ಅವರ ತಂದೆ ಮತ್ತು ಚಿಕ್ಕಪ್ಪ ಹತ್ಯೆ ಮಾಡಿದ್ದರು. ಟಿಕ್‌ಟಾಕ್ ವಿಡಿಯೋಗಳು ಹಾಗೂ ಅವರ ಜೀವನಶೈಲಿ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಇದೇ ಹತ್ಯೆಗೆ ಕಾರಣ ಎನ್ನುವ ಆರೋಪ ಕೇಳಿಬಂದಿತ್ತು.
ಈ ಪ್ರಕರಣಗಳು ಮಹಿಳೆಯರ ಡಿಜಿಟಲ್ ಸ್ವಾತಂತ್ರ್ಯ, ಸ್ವಯಂ ಅಭಿವ್ಯಕ್ತಿ ಮತ್ತು ವೈಯಕ್ತಿಕ ಆಯ್ಕೆಗಳು ಎಷ್ಟು ಅಪಾಯಕಾರಿ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.
ಏಕೆ ಮಹಿಳಾ ಇನ್‌ಫ್ಲುಯೆನ್ಸರ್‌ಗಳೇ ಟಾರ್ಗೆಟ್?
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲೇ, ಪಾಕಿಸ್ತಾನದ ಕೆಲವು ಆಳವಾಗಿ ಬೇರೂರಿರುವ ಪಿತೃಪ್ರಧಾನ ಸಾಮಾಜಿಕ ಮನೋಭಾವಗಳು ಮಹಿಳಾ ಕ್ರಿಯೇಟರ್‌ಗಳ ವಿರುದ್ಧದ ಹಿಂಸೆಗೆ ಕಾರಣವಾಗುತ್ತಿವೆ ಎನ್ನುತ್ತಿದ್ದಾರೆ ಮೂಲಭೂತವಾದಿಗಳು.
1. ‘ಟಿಕ್‌ಟಾಕರ್’ ಎಂಬ ಪದವೇ ಅಸ್ತ್ರ?
ಪಾಕಿಸ್ತಾನದಲ್ಲಿ ಕೆಲವು ಸಂಪ್ರದಾಯವಾದಿ ವಲಯಗಳಲ್ಲಿ ‘ಟಿಕ್‌ಟಾಕರ್’ ಎಂಬ ಗುರುತನ್ನೇ ಮಹಿಳೆಯರ ನೈತಿಕತೆಯನ್ನು ಪ್ರಶ್ನಿಸಲು ಬಳಸಲಾಗುತ್ತಿದೆ ಎಂಬ ಆರೋಪಗಳಿವೆ.
ಸಾಮಾಜಿಕ ಜಾಲತಾಣಗಳು ಮಹಿಳೆಯರಿಗೆ ಸ್ವತಂತ್ರ ಆದಾಯ, ಖ್ಯಾತಿ ಮತ್ತು ಪಬ್ಲಿಕ್ ವಾಯ್ಸ್ ನೀಡಿವೆ. ಆದರೆ ಇದೇ ಸ್ವಾತಂತ್ರ್ಯವು ಮಹಿಳೆಯರು ಮನೆಯೊಳಗೆ ಮಾತ್ರ ಇರಬೇಕು ಎನ್ನುವ ಸಾಂಪ್ರದಾಯಿಕ ಮನೋಭಾವಕ್ಕೆ ಸವಾಲಾಗಿ ಪರಿಣಮಿಸುತ್ತಿದೆ.
2. ಆನ್‌ಲೈನ್ ಕಿರುಕುಳ… ನೇರ ಹಿಂಸೆಗೆ?
ಡಿಜಿಟಲ್ ಹಿಂಸೆ ಕೇವಲ ಮೊಬೈಲ್ ಪರದೆಯಲ್ಲೇ ನಿಲ್ಲುವುದಿಲ್ಲ ಎಂಬ ಆತಂಕ ಹೆಚ್ಚುತ್ತಿದೆ. ಸ್ಟಾಕಿಂಗ್, ಬೆದರಿಕೆ, ಸೈಬರ್ ಬುಲ್ಲಿಂಗ್ ಹಾಗೂ ವೈಯಕ್ತಿಕ ಮಾಹಿತಿಯ ದುರುಪಯೋಗದ ಮೂಲಕ ಅಪರಿಚಿತರು ಮಹಿಳಾ ಕ್ರಿಯೇಟರ್‌ಗಳ ಸ್ಥಳವನ್ನು ಪತ್ತೆಹಚ್ಚುವ ಸಾಧ್ಯತೆ ಇದೆ. ಹೀಗೆ ಆನ್‌ಲೈನ್ ಕಿರುಕುಳವೇ ನೈಜ ಜೀವನದ ಹಿಂಸೆಗೆ ತಿರುಗಬಹುದು.
3. ‘ಗೌರವ’ ಹೆಸರಿನಲ್ಲೇ ಹಿಂಸೆಗೆ ಸಮರ್ಥನೆ?
ಮಹಿಳಾ ಕ್ರಿಯೇಟರ್‌ಗಳು ಹತ್ಯೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನೇ ದೂಷಿಸುವ ಪ್ರವೃತ್ತಿಯೂ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಕೆಲವು ಬಳಕೆದಾರರು ಮಹಿಳೆಯರ ಉಡುಗೆ, ಜೀವನಶೈಲಿ, ವಿಡಿಯೋಗಳು ಅಥವಾ ಸಾರ್ವಜನಿಕ ಉಪಸ್ಥಿತಿಯನ್ನು ಮುಂದಿಟ್ಟುಕೊಂಡು “ಅವರೇ ಕಾರಣ” ಎಂಬ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.
ಇಂತಹ victim-blaming ಮನೋಭಾವವೇ ಮಹಿಳೆಯರ ವಿರುದ್ಧದ ಹಿಂಸೆಗೆ ಪರೋಕ್ಷವಾಗಿ ಸಾಮಾಜಿಕ ಒಪ್ಪಿಗೆ ನೀಡುತ್ತದೆ.
4. ಕಾನೂನು ಇದೆ… ನ್ಯಾಯ ಸಿಗುತ್ತಿದೆಯೇ?
ಪಾಕಿಸ್ತಾನದಲ್ಲಿ ಸೈಬರ್ ಅಪರಾಧ ಹಾಗೂ ‘ಹಾನರ್ ಕಿಲ್ಲಿಂಗ್’ (ಮರ್ಯಾದೆಗೇಡು ಹತ್ಯೆ) ವಿರುದ್ಧ ಕಠಿಣ ಕಾನೂನುಗಳಿದ್ದರೂ, ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಿರುವುದು ದೊಡ್ಡ ಸವಾಲಾಗಿದೆ.
2016ರಲ್ಲಿ ಹತ್ಯೆಯಾದ ಖ್ಯಾತ ಸಾಮಾಜಿಕ ಜಾಲತಾಣ ತಾರೆ ಕಂದೀಲ್ ಬಲೋಚ್ ಪ್ರಕರಣವೂ ಪಾಕಿಸ್ತಾನದಲ್ಲಿ ಮಹಿಳಾ ಕ್ರಿಯೇಟರ್‌ಗಳ ಸುರಕ್ಷತೆ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಕಾರಣವಾಗಿತ್ತು. ಇತ್ತೀಚಿನ ಅಪರೂಪದ ಬೆಳವಣಿಗೆಯಾಗಿ, ಸನಾ ಯೂಸುಫ್ ಹತ್ಯೆ ಪ್ರಕರಣದ ಆರೋಪಿಗೆ ಮೇ 2026ರಲ್ಲಿ ಮರಣದಂಡನೆ ವಿಧಿಸಲಾಗಿತ್ತು.
ಭಯದಿಂದ ಬದಲಾಗುತ್ತಿರುವ ಡಿಜಿಟಲ್ ಜಗತ್ತು..!
ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಸ್ವತಂತ್ರವಾಗಿ ಆದಾಯ ಗಳಿಸುತ್ತಿರುವ ಸಮಯದಲ್ಲೇ, ಅವರ ಸಾರ್ವಜನಿಕ ಉಪಸ್ಥಿತಿಯೇ ಅವರಿಗೆ ಅಪಾಯವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ. ಮಾನವ ಹಕ್ಕುಗಳ ಸಂಘಟನೆಗಳು ಮಹಿಳೆಯರು ತಮ್ಮ ಸ್ವಾತಂತ್ರ್ಯ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಬಳಸಿಕೊಳ್ಳುವಾಗ ಎದುರಿಸುತ್ತಿರುವ ಅಪಾಯಗಳ ಬಗ್ಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿವೆ.
