ಬೆಳಗಾವಿ: “ನಮಗೆ ಶಾಲೆ ಕಲಿಯಲು ಆಸೆ ಇದೆ, ದಯವಿಟ್ಟು ನಮಗೆ ಒಂದು ರಸ್ತೆ ಮಾಡಿಕೊಡಿ” – ಇದು ಅಥಣಿ (Athani) ತಾಲೂಕಿನ ಹಣಮಾಪುರ ಗ್ರಾಮದ ಒಡೆಯರ ತೋಟದ ವಸತಿ ಪ್ರದೇಶದ ಶಾಲಾ ಮಕ್ಕಳು (School Children) ಕಣ್ಣೀರಿಡುತ್ತಾ ಜನಪ್ರತಿನಿಧಿಗಳಿಗೆ ಹಾಕುತ್ತಿರುವ ಮೊರೆ.
ಹಣಮಾಪುರ ಗ್ರಾಮದಿಂದ ಕೇವಲ 500 ಮೀಟರ್ ದೂರದಲ್ಲಿರುವ ಒಡೆಯರ ತೋಟದ ವಸತಿ ಪ್ರದೇಶದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿಂದ ಪ್ರತಿದಿನ 40ಕ್ಕೂ ಹೆಚ್ಚು ಮಕ್ಕಳು ಹಣಮಾಪುರದ ಶಾಲೆಗೆ(School) ವಿದ್ಯಾಭ್ಯಾಸಕ್ಕಾಗಿ ಹೋಗಬೇಕಾಗಿದೆ. ಆದರೆ ಗ್ರಾಮ ಮತ್ತು ವಸತಿ ಪ್ರದೇಶದ ನಡುವೆ ಇರುವ ಹಳ್ಳ ಇವರ ನಿತ್ಯದ ಸಂಕಷ್ಟಕ್ಕೆ ಕಾರಣವಾಗಿದೆ.
ಮಧಬಾವಿ ಗ್ರಾಮದ ನೀರಾವರಿ ಯೋಜನೆಯ ಕೆರೆಯಿಂದ ಈ ಹಳ್ಳದ ಮೂಲಕ ನೀರು ನಿರಂತರವಾಗಿ ಹರಿಯುತ್ತದೆ. ಪರಿಣಾಮವಾಗಿ, ವರ್ಷದ 4 ತಿಂಗಳು ಈ ಹಳ್ಳ ತುಂಬಿ ಹರಿಯುತ್ತಿದ್ದು, ಮಕ್ಕಳು ಶಾಲೆಗೆ ಹೋಗಲು 3 ರಿಂದ 4 ಅಡಿ ನೀರಿನಲ್ಲಿಯೇ ನಡೆದುಕೊಂಡು ಹೋಗಬೇಕಾಗಿದೆ. ಪುಟ್ಟ ಪುಟ್ಟ ಮಕ್ಕಳನ್ನು ಪೋಷಕರು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹಳ್ಳ ದಾಟಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ದಾರಿ ಇದೊಂದೇ ಆಗಿದ್ದು ಈ ಹಳ್ಳ ದಾಟದಿದ್ದರೆ ಸುಮಾರು 5 ಕಿಲೋಮೀಟರ್ ಸುತ್ತುವರಿದು ಹೋಗಬೇಕಿದೆ. ದೊಡ್ಡ ಸೇತುವೆ ನಿರ್ಮಾಣ ಮಾಡದಿದ್ದರೂ ಪರವಾಗಿಲ್ಲ, ಕನಿಷ್ಠ ಹಳ್ಳಕ್ಕೆ ದೊಡ್ಡ ಪೈಪ್‌ಗಳನ್ನು ಅಳವಡಿಸಿ ತಾತ್ಕಾಲಿಕ ರಸ್ತೆಯನ್ನಾದರೂ ಮಾಡಿಕೊಡಿ ಎಂದು ಮಕ್ಕಳು ಹಾಗೂ ಪೋಷಕರು ಅಂಗಲಾಚುತ್ತಿದ್ದಾರೆ. ಇದನ್ನೂ ಓದಿ: KKRTC ಬಸ್‌ನಲ್ಲಿ ವಿದ್ಯಾರ್ಥಿಯಿಂದ ಟಿಕೆಟ್ ವಿತರಣೆ – ಚಾಲಕ-ಕಂ-ಕಂಡಕ್ಟರ್ ಅಮಾನತು
ಮಳೆಗಾಲದ ಸಮಯದಲ್ಲಿ ಮಕ್ಕಳು ಹಳ್ಳದ ನೀರಿನಲ್ಲಿ ಕೊಚ್ಚಿಹೋಗುವ ಭೀತಿ ಎದುರಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

