ಇತ್ತೀಚೆಗೆ ಸ್ಟ್ಯಾಂಡ್‌ಅಪ್ ಕಾಮಿಡಿ ಶೋವೊಂದರಲ್ಲಿ ಡೇಟಿಂಗ್ ಅನುಭವ ಹಂಚಿಕೊಂಡಿದ್ದ ಯುವಕನೊಬ್ಬ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆತ ಟ್ರೋಲ್‌ಗೆ ಗುರಿಯಾಗಿದ್ದಲ್ಲದೆ, ಈಗ ಕೆಲಸವನ್ನೂ ಕಳೆದುಕೊಂಡಿದ್ದಾನೆ.
ಗುರುಗ್ರಾಮದ ಹಿಮಾಂಶು ಜಂಗ್ರಾ ಎಂಬ ಯುವಕ ಕಾಮಿಡಿ ಶೋ ವೇಳೆ ತನ್ನ ಅನುಭವವನ್ನು ಹಂಚಿಕೊಂಡಿದ್ದ. “ಒಂದು ಹುಡುಗಿಯೊಂದಿಗೆ ಡೇಟ್‌ಗೆ ಹೋಗಿದ್ದೆ. ಆಕೆಗೆ 370 ರೂಪಾಯಿ ಚಿಕನ್ ಬಿರಿಯಾನಿ ಕೊಡಿಸಿದ್ದೆ. ಬಳಿಕ ಆಕೆ ನನ್ನನ್ನು ಮನೆಗೆ ಡ್ರಾಪ್ ಮಾಡಲು ಕೇಳಿಕೊಂಡಳು. ಅದು ನನಗೆ ಆಶ್ಚರ್ಯ ತಂದಿತು” ಎಂದು ಹೇಳಿದ್ದ.
ಇದೇ ವೇಳೆ, “370 ರೂಪಾಯಿ ಖರ್ಚು ಮಾಡಿದ್ದೇನೆ. ಅದನ್ನು ವಸೂಲಿ ಮಾಡಲೇಬೇಕು” ಎಂಬ ಅರ್ಥ ಬರುವಂತೆ ಆತ ಮಾತನಾಡಿದ್ದ. ಅಂದರೆ, ಹುಡುಗಿಗೆ ಬಿರಿಯಾನಿ ಕೊಡಿಸಿದ್ದಕ್ಕೆ ಪ್ರತಿಯಾಗಿ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದುವ ನಿರೀಕ್ಷೆ ಇತ್ತು ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದ. ಈ ಹೇಳಿಕೆ ಮಹಿಳೆಯರ ಬಗ್ಗೆ ಅವಮಾನಕಾರಿ ಮತ್ತು ಅಸಮಂಜಸ ಮನೋಭಾವವನ್ನು ತೋರಿಸುತ್ತದೆ ಎಂದು ಹಲವರು ಟೀಕಿಸಿದ್ದಾರೆ.ಇದನ್ನೂ ಓದಿ: 7 ಪ್ರಕರಣಗಳಲ್ಲಿ ವಾಂಟೆಡ್ – ತಲೆಮರೆಸಿಕೊಂಡಿದ್ದ ಟಿಎಂಸಿ ನಾಯಕ ನೇಪಾಳ ಗಡಿಯಲ್ಲಿ ಅರೆಸ್ಟ್
ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಹಿಮಾಂಶು ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಮಹಿಳೆಯರು ಮಾತ್ರವಲ್ಲದೆ ಪುರುಷರೂ ಈ ಹೇಳಿಕೆಯನ್ನು ಖಂಡಿಸಿದರು. ಟೀಕೆ ಹೆಚ್ಚಾಗುತ್ತಿದ್ದಂತೆ ಹಿಮಾಂಶು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದ. ಜೊತೆಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನೂ ಡೀಆ್ಯಕ್ಟಿವೇಟ್ ಮಾಡಿದ್ದ.
ಆದರೆ ವಿವಾದ ಅಲ್ಲಿಗೆ ನಿಲ್ಲಲಿಲ್ಲ. ಹಿಮಾಂಶು ಕೆಲಸ ಮಾಡುತ್ತಿದ್ದ ಗುರುಗ್ರಾಮದ ಸಾತ್ವಿಕ್ ಡಿಸೈನ್ ಸಂಸ್ಥೆ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಈ ಕುರಿತು ಸಂಸ್ಥೆಯ ಸಂಸ್ಥಾಪಕ ವಿವೇಕ್ ವಿಶ್ವಕರ್ಮಾ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
View this post on Instagram
ಈ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವರು ಕಂಪನಿಯ ಕ್ರಮವನ್ನು ಸಮರ್ಥಿಸಿದ್ದರೆ, ಇನ್ನೂ ಕೆಲವರು ತಪ್ಪು ಮಾಡಿದವರಿಗೆ ತಿದ್ದಿಕೊಳ್ಳುವ ಅವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: Undercover Operation | ಸಾಮಾನ್ಯಳಂತೆ ಪಬ್‌ಗೆ ತೆರಳಿ ಬೃಹತ್ ಸೆಕ್ಸ್ ದಂಧೆ ಜಾಲ ಬಯಲಿಗೆಳೆದ ಐಪಿಎಸ್ ಅಧಿಕಾರಿ
ಆದರೆ ಬಹುತೇಕ ನೆಟ್ಟಿಗರು ಮಹಿಳೆಯರ ಬಗ್ಗೆ ಅವಹೇಳನಕಾರಿ ಮನೋಭಾವ ಹೊಂದಿರುವವರನ್ನು ಸಮರ್ಥಿಸಬಾರದು ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ‘370 ರೂ. ಬಿರಿಯಾನಿ’ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
