– ಎಲ್ ನಿನೋ ಪರಿಣಾಮ ಎದುರಿಸಲು ರಾಜ್ಯ ಸಜ್ಜಾಗಿದೆ
– ಜನರು ಹಿತಮಿತವಾಗಿ ನೀರು ಬಳಸಬೇಕು, ಸೋರಿಕೆ ತಡೆಯಬೇಕು
ಬೆಂಗಳೂರು: ಎಲ್ ನಿನೋ (El Nino) ಪ್ರಭಾವದಿಂದ ರಾಜ್ಯದಲ್ಲಿ ಮಳೆಯ ಕೊರತೆ ಆಗಿದ್ದು, ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಮುಂಗಡವಾಗಿ 117 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನೀರು ಪೂರೈಕೆಗೆ ಹಣದ ಕೊರತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸುಮಾರು 85 ಕೋಟಿ ರೂಪಾಯಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. 30 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕುಡಿಯುವ ನೀರು (Drinking Water) ಪೂರೈಕೆಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು. ಇದನ್ನೂ ಓದಿ: ಕಾರ್ಕಳ | ಕಾರಿಗೆ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗ್ಳೂರಲ್ಲಿ ಅರೆಸ್ಟ್

ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ 24 ಗಂಟೆಗಳ ಒಳಗಾಗಿ ಪರಿಹರಿಸುವಂತೆ ಸೂಚಿಸಲಾಗಿದೆ. ಖಾಸಗಿ ತೆರೆದ ಬಾವಿ, ಬೋರ್ ವೆಲ್‌ಗಳಿಂದ ನೀರುಪಡೆದು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ತೀರಾ ಅಗತ್ಯಬಿದ್ದ ಸಂದರ್ಭದಲ್ಲಿ ಮಾತ್ರ ಕೊಳವೆ ಬಾವಿ ಕೊರೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೂ ಕಲ್ಲು ಕ್ವಾರಿಯಲ್ಲಿ ದುರಂತ – 30 ಅಡಿ ಆಳಕ್ಕೆ ಬಿದ್ದು ಕಾರ್ಮಿಕ ಸಾವು
ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಕಳೆದ 2-3 ದಿನದಿಂದ ಮಳೆ ಆಗುತ್ತಿದ್ದು, ಕೆಲವು ಜಲಾಶಯಗಳಿಗೆ ನೀರು ಬರುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಜೀವಜಲವನ್ನು ಹಿತಮಿತವಾಗಿ ಜನರು ಬಳಸಬೇಕು, ಪೋಲು ಮಾಡಬಾರದು ಎಂದು ಮನವಿ ಮಾಡಿದ ಅವರು, ಪಂಚಾಯ್ತಿಗಳು ನೀರು ಸೋರಿಕೆ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕೊಡಗಿನ ರಿಯಾಜ್ ನಜೀರ್ ಈಗ ಅಬುಧಾಬಿಯಲ್ಲಿ ಲೋಕೋ ಪೈಲಟ್!
