ಅಪ್ರಾಪ್ತ ವಯಸ್ಕರ ರಕ್ಷಣೆಗೆ ಇರುವ ಕಠಿಣ ಕಾನೂನುಗಳು ಕೆಲವೊಮ್ಮೆ ಹದಿಹರೆಯದವರ ಸಹಜ ಪ್ರೇಮ ಸಂಬಂಧಗಳನ್ನೇ ಅಪರಾಧವನ್ನಾಗಿಸಿ, ಅವರ ಭವಿಷ್ಯವನ್ನು ಸಂಕಷ್ಟಕ್ಕೆ ದೂಡುತ್ತಿವೆ. ಈ ಸಂಗತಿಗಳು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಏಷ್ಯಾದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇದೇ ವಿಚಾರವನ್ನು ಇಟ್ಟುಕೊಂಡು ನೇಪಾಳ ಸರ್ಕಾರವು ಒಂದು ಮಹತ್ವದ ಕಾನೂನು ತಿದ್ದುಪಡಿಗೆ ಮುಂದಾಗಿದೆ. ಪರಸ್ಪರ ಒಪ್ಪಿಗೆಯಿಂದ ಸಂಬಂಧ ಹೊಂದುವ 16 ರಿಂದ 18 ವರ್ಷದೊಳಗಿನ ಹದಿಹರೆಯದವರನ್ನು ಅತ್ಯಾಚಾರದಂತಹ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿಂದ ರಕ್ಷಿಸಲು ನೇಪಾಳವು ತನ್ನ ಕಾನೂನಿನಲ್ಲಿ ‘ರೋಮಿಯೋ ಮತ್ತು ಜೂಲಿಯೆಟ್’ ನಿಯಮವನ್ನು (Romeo and Juliet Clause) ಸೇರಿಸಲು ಯೋಜಿಸುತ್ತಿದೆ. ಈ ಹೊಸ ಪ್ರಸ್ತಾವನೆಯು ಹದಿಹರೆಯದ ಪ್ರೇಮಿಗಳ ಮೇಲಿನ ಕಠಿಣ ಶಿಕ್ಷೆಯನ್ನು ಸಡಿಲಗೊಳಿಸುತ್ತದೆಯೇ? ಅಥವಾ ಮಕ್ಕಳ ಹಕ್ಕುಗಳ ರಕ್ಷಣೆಗೆ ಹಿನ್ನಡೆ ತರುತ್ತದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇಪಾಳದ ಪ್ರಸ್ತುತ ಕಾನೂನಿನ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳೊಂದಿಗೆ ನಡೆಸುವ ಯಾವುದೇ ಲೈಂಗಿಕ ಸಂಪರ್ಕವನ್ನು (ಅದು ಇಬ್ಬರ ಒಪ್ಪಿಗೆಯಿಂದ ನಡೆದಿದ್ದರೂ ಸಹ) ಕಾನೂನುಬಾಹಿರ ಅಥವಾ “ಶಾಸನಬದ್ಧ ಅತ್ಯಾಚಾರ” (Statutory Rape) ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ, ಹದಿಹರೆಯದ (Teenagers) ಪ್ರೇಮಿಗಳು ತಮ್ಮ ಒಪ್ಪಿಗೆಯಿಂದ ಸಂಬಂಧ ಹೊಂದಿದ್ದರೂ, ಹುಡುಗನ ವಿರುದ್ಧ ಅತ್ಯಾಚಾರದಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿ ಅವರು ಜೈಲು ಪಾಲಾಗುತ್ತಿದ್ದ ಘಟನೆಗಳು ನಡೆದಿರುವುದು ಕಂಡುಬಂದಿದೆ.
ಏನಿದು ರೋಮಿಯೋ-ಜೂಲಿಯೆಟ್’ ನಿಯಮ?
16 ರಿಂದ 18 ವರ್ಷದೊಳಗಿನ ಹದಿಹರೆಯದವರು ಪರಸ್ಪರ ಒಪ್ಪಿಗೆಯಿಂದ ಸಂಬಂಧ ಹೊಂದಿದ್ದರೆ ಮತ್ತು ಅವರ ನಡುವಿನ ವಯಸ್ಸಿನ ವ್ಯತ್ಯಾಸವು ತುಂಬಾ ಕಡಿಮೆ ಇದ್ದರೆ (ಉದಾಹರಣೆಗೆ 3 ವರ್ಷಗಳಿಗಿಂತ ಕಡಿಮೆ), ಅದನ್ನು ಅತ್ಯಾಚಾರ ಎಂದು ಪರಿಗಣಿಸಬಾರದು ಎಂಬುದು ಈ ನಿಯಮದ ಆಶಯ.
ಈ ಹೊಸ ತಿದ್ದುಪಡಿಯ ಉದ್ದೇಶ, ಅಪ್ರಾಪ್ತ ವಯಸ್ಕರ ನಡುವಿನ ಒಪ್ಪಿಗೆಯ ಸಂಬಂಧಗಳನ್ನು ಕ್ರಿಮಿನಲ್ ಅಪರಾಧಗಳಿಂದ ಮುಕ್ತಗೊಳಿಸುವುದಾಗಿದೆ. ಈ ನಿಯಮವು ಲೈಂಗಿಕ ಶೋಷಣೆ ಅಥವಾ ಬಲವಂತದ ಅತ್ಯಾಚಾರವನ್ನು ಬೆಂಬಲಿಸುವುದಿಲ್ಲ. ಬದಲಿಗೆ, ಸಹಜ ಪ್ರೇಮ ಸಂಬಂಧಗಳನ್ನು ಕ್ರಿಮಿನಲ್ ಪ್ರಕರಣಗಳಿಂದ ರಕ್ಷಿಸುತ್ತದೆ.
ಏನಿದರ ಹಿನ್ನೆಲೆ?
ವಿಲಿಯಂ ಶೇಕ್ಸ್‌ಪಿಯರ್ ಬರೆದ ಪ್ರಸಿದ್ಧ ಪ್ರೇಮಕಾವ್ಯ ‘ರೋಮಿಯೋ ಮತ್ತು ಜೂಲಿಯೆಟ್’ ಪಾತ್ರಗಳಿಂದ ಈ ಹೆಸರನ್ನು ತೆಗೆದುಕೊಳ್ಳಲಾಗಿದೆ. ಆ ಕಥೆಯಲ್ಲಿ ರೋಮಿಯೋ ಮತ್ತು ಜೂಲಿಯೆಟ್ ಇಬ್ಬರೂ ಹದಿಹರೆಯದವರಾಗಿದ್ದು (Teenagers), ಅತಿಯಾದ ಪ್ರೀತಿಯಲ್ಲಿರುತ್ತಾರೆ. ಅಪ್ರಾಪ್ತ ವಯಸ್ಕರ ನಡುವಿನ ಇಂತಹ ಸಹಜ ಪ್ರೇಮ ಸಂಬಂಧಗಳನ್ನು ಅಪರಾಧದ ದೃಷ್ಟಿಯಿಂದ ನೋಡಬಾರದು ಎಂಬ ಕಾರಣಕ್ಕೆ ಕಾನೂನು ಜಗತ್ತಿನಲ್ಲಿ ಈ ಹೆಸರನ್ನು ಬಳಸಲಾಗುತ್ತದೆ.
ಜಗತ್ತಿನ ಬಹುತೇಕ ದೇಶಗಳಲ್ಲಿ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಲು ‘ಸಮ್ಮತಿಯ ವಯಸ್ಸು’ (Age of Consent) ನಿಗದಿಪಡಿಸಲಾಗಿದೆ (ಉದಾಹರಣೆಗೆ 16 ಅಥವಾ 18 ವರ್ಷ). ಈ ವಯಸ್ಸಿಗಿಂತ ಕೆಳಗಿನವರೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಕಾನೂನಿನ ಪ್ರಕಾರ ಅತ್ಯಾಚಾರ. ಆದರೆ, 16 ವರ್ಷದ ಹುಡುಗಿ ಮತ್ತು 17 ವರ್ಷದ ಹುಡುಗ ಪರಸ್ಪರ ಪ್ರೀತಿಸಿ, ಒಪ್ಪಿಗೆಯಿಂದ ಸಂಬಂಧ ಹೊಂದಿದಾಗಲೂ ಕಠಿಣ ಕಾನೂನಿನಿಂದಾಗಿ ಹುಡುಗನನ್ನು ಅತ್ಯಾಚಾರಿ ಎಂದು ಜೈಲಿಗೆ ಕಳುಹಿಸಲಾಗುತ್ತಿತ್ತು. ಇಂತಹ ಪ್ರಕರಣಗಳನ್ನು ತಪ್ಪಿಸಲು ರೋಮಿಯೋ-ಜೂಲಿಯೆಟ್ ನಿಯಮವನ್ನು ತರಲಾಯಿತು. ಇದು ವಯಸ್ಕನಿಂದ ನಡೆಯುವ ಅತ್ಯಾಚಾರ ಮತ್ತು ಹದಿಹರೆಯದ ಪ್ರೇಮದ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತದೆ
ರೋಮಿಯೋ-ಜೂಲಿಯೆಟ್ ನಿಯಮದ ವಿನಾಯಿತಿ ಸಿಗಬೇಕಾದರೆ ಕೇವಲ ಒಪ್ಪಿಗೆ ಇದ್ದರೆ ಸಾಲದು, ಪ್ರಮುಖವಾಗಿ 3 ನಿಯಮಗಳು ಅನ್ವಯಿಸುತ್ತವೆ:
ಕಡಿಮೆ ವಯಸ್ಸಿನ ವ್ಯತ್ಯಾಸ: ಪ್ರೇಮಿಗಳ ನಡುವಿನ ವಯಸ್ಸಿನ ವ್ಯತ್ಯಾಸ ತುಂಬಾ ಕಡಿಮೆ ಇರಬೇಕು. ಬೇರೆ ಬೇರೆ ದೇಶಗಳಲ್ಲಿ ಇದು 2 ರಿಂದ 4 ವರ್ಷಗಳವರೆಗೆ ಇರುತ್ತದೆ. ಉದಾಹರಣೆಗೆ, ವ್ಯತ್ಯಾಸ 3 ವರ್ಷ ಇರಬೇಕೆಂದಿದ್ದರೆ, 16 ವರ್ಷದ ಅಪ್ರಾಪ್ತನ ಜೊತೆ 19 ವರ್ಷದ ವ್ಯಕ್ತಿ ಸಂಬಂಧ ಹೊಂದಿದ್ದರೆ ವಿನಾಯಿತಿ ಸಿಗಬಹುದು, ಆದರೆ 25 ವರ್ಷದ ವ್ಯಕ್ತಿ ಹೊಂದಿದ್ದರೆ ಅದು ಗಂಭೀರ ಅಪರಾಧವಾಗುತ್ತದೆ.
ಯಾವುದೇ ಬಲವಂತ ಇರಬಾರದು: ಸಂಬಂಧದಲ್ಲಿ ಯಾವುದೇ ರೀತಿಯ ಬ್ಲ್ಯಾಕ್‌ಮೇಲ್, ಬೆದರಿಕೆ, ಅಧಿಕಾರದ ದುರುಪಯೋಗ ಅಥವಾ ಆಮಿಷ ಇರಬಾರದು. ಅದು ಸಂಪೂರ್ಣ ಸ್ವಯಂಪ್ರೇರಿತವಾಗಿರಬೇಕು.
ಕನಿಷ್ಠ ವಯಸ್ಸಿನ ಮಿತಿ: ವಿನಾಯಿತಿ ನೀಡಲು ಒಂದು ಕನಿಷ್ಠ ವಯಸ್ಸನ್ನು ನಿಗದಿಪಡಿಸಲಾಗುತ್ತದೆ (ಉದಾಹರಣೆಗೆ ಕನಿಷ್ಠ 14 ಅಥವಾ 16 ವರ್ಷ ತುಂಬಿರಬೇಕು). ಅದಕ್ಕಿಂತ ಚಿಕ್ಕ ಮಕ್ಕಳಾಗಿದ್ದರೆ ಈ ನಿಯಮ ಅನ್ವಯಿಸುವುದಿಲ್ಲ.
ಜಾಗತಿಕವಾಗಿ ಎಲ್ಲೆಲ್ಲಿ ಈ ಕಾನೂನಿದೆ?
ಈ ಪರಿಕಲ್ಪನೆ ಹೊಸದೇನಲ್ಲ. ಜಗತ್ತಿನ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ:
ಅಮೆರಿಕದ ಟೆಕ್ಸಾಸ್, ಫ್ಲೋರಿಡಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ನಿಯಮವಿದೆ. ಅಲ್ಲಿ ವಯಸ್ಸಿನ ವ್ಯತ್ಯಾಸ 3 ರಿಂದ 4 ವರ್ಷಗಳ ಒಳಗಿದ್ದರೆ ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ ಅಥವಾ ಕಡಿಮೆ ಮಾಡಲಾಗುತ್ತದೆ.
ಕೆನಡಾದಲ್ಲಿ 14 ಮತ್ತು 15 ವರ್ಷದ ಹದಿಹರೆಯದವರು ತಮಗಿಂತ 5 ವರ್ಷದವರೆಗೆ ದೊಡ್ಡವರಿರುವ (ಅಂದರೆ 19 ವರ್ಷದೊಳಗಿನ) ಜೊತೆ ಒಪ್ಪಿಗೆಯ ಸಂಬಂಧ ಹೊಂದಿದ್ದರೆ ಕಾನೂನು ರಕ್ಷಣೆ ಸಿಗುತ್ತದೆ.
ಯುರೋಪಿನ ಹಲವು ದೇಶಗಳಲ್ಲಿ ಹದಿಹರೆಯದವರ ಲೈಂಗಿಕ ಸ್ವತಂತ್ರವನ್ನು ಗೌರವಿಸಿ, ಇಂತಹ ವಿನಾಯಿತಿಗಳನ್ನು ನೀಡಲಾಗಿದೆ.
ಭಾರತದಲ್ಲಿ ಈ ನಿಯಮ ಜಾರಿಯಿದ್ಯಾ:
ಭಾರತದಲ್ಲಿ ಪೋಕ್ಸೊ (POCSO) ಕಾಯ್ದೆ-2012ರ ಪ್ರಕಾರ 18 ವರ್ಷದೊಳಗಿನವರೊಂದಿಗೆ ನಡೆಸುವ ಎಲ್ಲಾ ಲೈಂಗಿಕ ಕ್ರಿಯೆಗಳನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ. ಒಪ್ಪಿಗೆಯಿದ್ದರೂ ಕನಿಷ್ಠ 10 ವರ್ಷ ಜೈಲು ಶಿಕ್ಷೆ ಕಡ್ಡಾಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಲಯಗಳಿಗೆ ಬರುತ್ತಿರುವ ಪೋಕ್ಸೊ ಪ್ರಕರಣಗಳಲ್ಲಿ ಬಹುಪಾಲು ಪ್ರಕರಣಗಳು ಹದಿಹರೆಯದ ಪ್ರೇಮಿಗಳು ಮನೆಯಿಂದ ಓಡಿಹೋಗಿ ಮದುವೆಯಾದ ಅಥವಾ ಸಂಬಂಧ ಹೊಂದಿದ ಪ್ರಕರಣಗಳೇ ಆಗಿವೆ.
ಇಂತಹ ಪ್ರಕರಣಗಳು ಇದು ಹುಡುಗರ ಇಡೀ ಜೀವನವನ್ನು ಹಾಳುಮಾಡುತ್ತಿದೆ ಎಂದು ಭಾರತದ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ಕಳವಳ ವ್ಯಕ್ತಪಡಿಸಿವೆ. ಜೊತೆಗೆ ಭಾರತದ ಕಾನೂನಿನಲ್ಲೂ ಇಂತಹ ‘ರೋಮಿಯೋ-ಜೂಲಿಯೆಟ್’ ನಿಯಮ ತರುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಸಂಸತ್ತಿಗೆ ಮತ್ತು ಕಾನೂನು ಆಯೋಗಕ್ಕೆ ಹಲವು ಬಾರಿ ಸೂಚಿಸಿವೆ.
ಪರ-ವಿರೋಧ ಚರ್ಚೆಗಳು:
ನೇಪಾಳದಲ್ಲಿ ಈ ಪ್ರಸ್ತಾವನೆಯು ತೀವ್ರ ಚರ್ಚೆಗೆ ಕಾರಣವಾಗಿದೆ. ಕಾನೂನು ತಜ್ಞರ ಪ್ರಕಾರ, ಈ ತಿದ್ದುಪಡಿಯು ಅತ್ಯಂತ ಅಗತ್ಯವಾಗಿದೆ. ಹದಿಹರೆಯದವರು ಜೈಲು ಪಾಲಾಗುವುದನ್ನು ತಪ್ಪಿಸಿ, ಅವರ ಭವಿಷ್ಯ ಹಾಳಾಗದಂತೆ ಇದು ರಕ್ಷಿಸುತ್ತದೆ. ಪರಸ್ಪರ ಪ್ರೀತಿಯಿಂದ ಒಂದಾದವರನ್ನು ಅಪರಾಧಿಗಳಂತೆ ನೋಡುವುದು ಸರಿಯಲ್ಲ ಎಂಬುದು ಇವರ ವಾದ.
ಇನ್ನೂ ಮಕ್ಕಳ ಹಕ್ಕುಗಳ ರಕ್ಷಕರು ಮತ್ತು ಕೆಲವು ಸಂಘಟನೆಗಳು ಈ ನಿಯಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿನಾಯಿತಿಯನ್ನು ದುರುಪಯೋಗಪಡಿಸಿಕೊಂಡು ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ನಡೆಸುವ ಸಾಧ್ಯತೆ ಇರುತ್ತದೆ ಮತ್ತು ಇದು ಮಕ್ಕಳ ರಕ್ಷಣಾ ಕಾನೂನುಗಳನ್ನು ದುರ್ಬಲಗೊಳಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.
