ಬರಗಾಲದ ಬಿಸಿ ಹಾಗೂ ಎಲ್-ನಿನೋ ರೂಪದಲ್ಲಿ ಎದುರಾಗಿರುವ ಮುಂಗಾರಿನ ತೀವ್ರ ಅಭಾವವು ಕರ್ನಾಟಕ(Karnataka) ಸೇರಿದಂತೆ ದಕ್ಷಿಣ ಭಾರತದ ಭಾಗದ ಕೋಟ್ಯಂತರ ಜನರ ನಿತ್ಯದ ಆಹಾರ ಭದ್ರತೆಗೆ ಆತಂಕ ತಂದೊಡ್ಡಿದೆ. ರಾಜ್ಯದ ಭತ್ತದ ಕಣಜಗಳು ಬರಿದಾಗುತ್ತಿದ್ದು, ಭತ್ತದ ನಾಟಿ ಪ್ರಮಾಣದಲ್ಲಿ ದಾಖಲೆಯ ಕುಸಿತ ಕಂಡಿದೆ. ಇದರ ನೇರ ಪರಿಣಾಮವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿನಲ್ಲಿ ಅಕ್ಕಿ ದರಗಳು(Rice Price) ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ತೀವ್ರ ಕತ್ತರಿ ಬಿದ್ದಿದೆ. ಒಂದೆಡೆ ಕೃಷಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರೆ, ಇನ್ನೊಂದೆಡೆ ಭತ್ತದ ಕೊರತೆಯಿಂದಾಗಿ ರೈಸ್ ಮಿಲ್‌ಗಳು ಒಂದೊಂದಾಗಿ ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿವೆ.
ಬಿತ್ತನೆ ಪ್ರಮಾಣದಲ್ಲಿ ಭಾರಿ ಕುಸಿತ
ಕರ್ನಾಟಕದಲ್ಲಿ 2026-27 ಸಾಲಿನಲ್ಲಿ ಒಟ್ಟು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಜುಲೈ-ಆಗಸ್ಟ್ ವೇಳೆಗೆ ಕೇವಲ 2.02 ಲಕ್ಷ ಹೆಕ್ಟೇರ್ (ಶೇ. 20) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.ರಾಜ್ಯದ ‘ಭತ್ತದ ಕಣಜ’ ಎನಿಸಿಕೊಂಡಿರುವ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸತತ ಎರಡನೇ ವರ್ಷವೂ ನೀರಿಲ್ಲದೆ ಬಿತ್ತನೆ ಕುಸಿದಿದೆ.
ಎಲ್ಲಿ ಎಷ್ಟು?
ರಾಯಚೂರು: 1.90 ಲಕ್ಷ ಹೆಕ್ಟೇರ್ ಗುರಿಯಲ್ಲಿ ಕೇವಲ 4,020 ಹೆಕ್ಟೇರ್ (ಶೇ. 2) ಬಿತ್ತನೆ.
ಬಳ್ಳಾರಿ: 87,741 ಹೆಕ್ಟೇರ್ ಪೈಕಿ ಕೇವಲ 6,397 ಹೆಕ್ಟೇರ್ (ಶೇ. 10) ಬಿತ್ತನೆ.
ದಾವಣಗೆರೆ: ಕೇವಲ ಶೇ. 1 ಬಿತ್ತನೆ.
ಮೈಸೂರು, ಮಂಡ್ಯ: ಕೆಆರ್‌ಎಸ್ ಹಾಗೂ ಕಬಿನಿ ನಾಲೆಗಳಿಗೆ ನೀರು ಹರಿಸದ ಹಿನ್ನೆಲೆಯಲ್ಲಿ ರೈತರು ನಾಟಿ ಕಾರ್ಯಕ್ಕೇ ಕೈಹಾಕಿಲ್ಲ.
ಮಳೆಯಾಶ್ರಿತ ಜಿಲ್ಲೆಗಳಲ್ಲಿ ಸುಧಾರಣೆ: ಬೆಳಗಾವಿ (ಶೇ. 89), ಧಾರವಾಡ (ಶೇ. 85), ದಕ್ಷಿಣ ಕನ್ನಡ (ಶೇ. 82), ಬೀದರ್ (ಶೇ. 79) ಹಾಗೂ ಗದಗ (ಶೇ. 67) ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ನಡೆದಿದೆ.

ಅಕ್ಕಿ ದರ ಏರಿಕೆಗೆ ಪ್ರಮುಖ ಕಾರಣಗಳು
ತುಂಗಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ವಾರ್ಷಿಕ 30 ಲಕ್ಷ ಮೆಟ್ರಿಕ್ ಟನ್ ಭತ್ತ ಬೆಳೆಯಲಾಗುತ್ತದೆ. ಆದರೆ ಕ್ರಸ್ಟ್ ಗೇಟ್ ದುರಸ್ತಿ ಹಾಗೂ ನೀರಿನ ಅಭಾವದಿಂದಾಗಿ ಕೊಪ್ಪಳ, ರಾಯಚೂರು, ಬಳ್ಳಾರಿ ಭಾಗದ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಳೆದ ಬೇಸಿಗೆ ಹಂಗಾಮಿನಲ್ಲಿ ಭತ್ತ ನಾಟಿ ಮಾಡಿರಲಿಲ್ಲ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಮಳೆ ಕೊರತೆಯಿಂದ ಭತ್ತದ ಉತ್ಪಾದನೆ ತಗ್ಗಿದೆ. ಹೀಗಾಗಿ ನೆರೆರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಅಕ್ಕಿ ಸಂಪೂರ್ಣ ಬಂದ್ ಆಗಿದೆ.
ಸ್ಥಳೀಯವಾಗಿ ಹಸಿ ಭತ್ತ ಒಣಗಿಸಲು ಬಿಸಿಲಿಲ್ಲದ ಕಾರಣ ಹಾಗೂ ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಉತ್ತಮ ಬೆಲೆ ಸಿಕ್ಕಿದ್ದರಿಂದ ವ್ಯಾಪಾರಿಗಳು ಭತ್ತವನ್ನು ಹೊರರಾಜ್ಯಗಳಿಗೆ ಮಾರಾಟ ಮಾಡಿದ್ದಾರೆ. ಜುಲೈನಲ್ಲಿ ನಿರಂತರ ಮೋಡ ಕವಿದ ವಾತಾವರಣವಿದ್ದುದರಿಂದ ಭತ್ತ ಒಣಗಿಸಲು ಸಾಧ್ಯವಾಗಿಲ್ಲ. ದಾಸ್ತಾನು ಮಾಡಿದ್ದ ಭತ್ತದ ತೇವಾಂಶದಿಂದಾಗಿ ಕ್ವಿಂಟಾಲ್‌ಗೆ 10 ಕೆಜಿಯಷ್ಟು ತೂಕ ಕಡಿಮೆಯಾಗಿ ಅಕ್ಕಿ ಇಳುವರಿ ತಗ್ಗಿದೆ.
ಎಲ್ಲಿ ಎಷ್ಟು ಏರಿಕೆ?
ದಕ್ಷಿಣ ಪರ್ಯಾಯ ದ್ವೀಪ ಪ್ರದೇಶದಲ್ಲಿ ಸರಾಸರಿ ಮಳೆ ಪ್ರಮಾಣ ಶೇ. 26 ರಷ್ಟು ಕಡಿಮೆಯಾಗಿದೆ. ಆಂಧ್ರಪ್ರದೇಶದಲ್ಲಿ ಗರಿಷ್ಠ ಶೇ. 40 ಹಾಗೂ ಕೇರಳದಲ್ಲಿ ಶೇ. 20 ಕ್ಕಿಂತ ಹೆಚ್ಚು ಮಳೆ ಕೊರತೆ ವರದಿಯಾಗಿದೆ. ಪ್ರಮುಖ ನಗರಗಳಲ್ಲಿ 50 ರೂ. ನಷ್ಟಿದ್ದ ಅಕ್ಕಿ ದರ ಈಗ 70 ರಿಂದ 80 ರೂ.ಗಡಿ ದಾಟಿದ್ದು, ಮಳೆ ಸುರಿಯದಿದ್ದರೆ ಮುಂಬರುವ ದಿನಗಳಲ್ಲಿ ದರ 100 ರೂ. ತಲುಪುವ ಸಾಧ್ಯತೆಯಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶ (ವಿಜಯವಾಡ): ವಿಜಯವಾಡದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಅಕ್ಕಿ ಬೆಲೆ ಕ್ವಿಂಟಾಲ್‌ಗೆ 1,000 ರೂ. ನಿಂದ 1,500 ರೂ. ರವರೆಗೆ ಏರಿಕೆಯಾಗಿದೆ. 26 ಕೆಜಿಯ ಅಕ್ಕಿ ಚೀಲ ಒಂದಕ್ಕೆ ಸುಮಾರು 200 ರೂ. ಹೆಚ್ಚಳವಾಗಿದೆ. ರಾಜ್ಯದಲ್ಲಿ ಶೇ. 51 ರಿಂದ 54 ರಷ್ಟು ಮಳೆ ಕೊರತೆಯಾಗಿದ್ದು, ಜುಲೈ ತಿಂಗಳೊಂದರಲ್ಲೇ ಶೇ. 69 ರಷ್ಟು ಮಳೆಯ ಅಭಾವ ದಾಖಲಾಗಿದೆ. ಇದರಿಂದ ಸುಮಾರು 1.07 ಲಕ್ಷ ಹೆಕ್ಟೇರ್ ಭತ್ತದ ಬೆಳೆ ನೇರ ಹಾನಿಗೊಳಗಾಗುವ ಭೀತಿಯಿದೆ. ಕೃಷ್ಣಾ ಡೆಲ್ಟಾ ಭಾಗದ ರೈತರಿಗೆ ಈ ಬಾರಿ ಭತ್ತದ ಬೆಳೆಯನ್ನೇ ಕೈಬಿಡುವಂತೆ ಜಲಸಂಪನ್ಮೂಲ ಇಲಾಖೆ ಸೂಚಿಸಿದೆ.
ತೆಲಂಗಾಣ: ಶೇ. 25 ರಿಂದ 30 ರಷ್ಟು ಮಳೆ ಕೊರತೆ ಎದುರಾಗಿದೆ. ಭತ್ತ ಬೆಳೆಯುವ ವಿಸ್ತೀರ್ಣವು ಕಳೆದ ಬಾರಿಯ 69.89 ಲಕ್ಷ ಎಕರೆಗಳಿಂದ ಈ ಬಾರಿ 38.51 ಲಕ್ಷ ಎಕರೆಗೆ (ಶೇ. 44.9 ಕುಸಿತ) ಇಳಿಕೆಯಾಗಲಿದೆ ಎಂದು ತಜ್ಞರ ಸಮಿತಿ ಎಚ್ಚರಿಸಿದೆ.
ಕೇರಳ: ಓಣಂ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ, ಯಾವುದೇ ಮುನ್ಸೂಚನೆಯಿಲ್ಲದೆ ಪ್ರಮುಖ ಬ್ರಾಂಡೆಡ್ ಅಕ್ಕಿ ದರ ಕೆಜಿಗೆ 7 ರೂ. ರಷ್ಟು ಏರಿಕೆಯಾಗಿದೆ. ಹಬ್ಬದ ದಿನಗಳಲ್ಲಿ ಬೆಲೆ ಇನ್ನಷ್ಟು ಏರುವ ಮತ್ತು ಕಾಳಸಂತೆ ಸೃಷ್ಟಿಯಾಗುವ ಆತಂಕ ವರ್ತಕರಲ್ಲಿದೆ. ಕೇರಳ ವಾರ್ಷಿಕ ಕೇವಲ 5 ಲಕ್ಷ ಟನ್ ಭತ್ತ ಬೆಳೆಯುತ್ತಿದ್ದು, ಶೇ. 75 ರಷ್ಟು ಅಕ್ಕಿಗಾಗಿ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡನ್ನೇ ನೆಚ್ಚಿಕೊಂಡಿದೆ. ರಫ್ತು ಹೆಚ್ಚಳ ಮತ್ತು ಸಾಗಣೆ ವೆಚ್ಚ ಏರಿಕೆಯೂ ಬೆಲೆ ಏರಿಕೆಗೆ ಕಾರಣವಾಗಿದೆ.
ತಮಿಳುನಾಡು: ರಾಜ್ಯದಲ್ಲಿ ಕನಿಷ್ಠ 5 ಲಕ್ಷ ಟನ್ ಹೆಚ್ಚುವರಿ ಅಕ್ಕಿ ದಾಸ್ತಾನಿದ್ದರೂ, ಹೊರರಾಜ್ಯಗಳಿಂದ ಬರುವ ತಳಿಗಳ ಬೆಲೆ ಕೆಜಿಗೆ 5 ರಿಂದ 15 ರೂ. ರವರೆಗೆ ಹೆಚ್ಚಾಗಿದೆ. ರಾಜ್ಯದ ಶೇ. 70 ರಷ್ಟು ಅಕ್ಕಿ ಅಗತ್ಯವನ್ನು ಸ್ಥಳೀಯವಾಗಿಯೇ ಪೂರೈಸಿಕೊಳ್ಳಲಾಗುತ್ತಿದೆ. ಆದರೆ ಕಾವೇರಿ ಡೆಲ್ಟಾದಲ್ಲಿ ಕುರುವೈ ಬಿತ್ತನೆ 6.33 ಲಕ್ಷ ಎಕರೆಗಳಿಂದ 2 ಲಕ್ಷ ಎಕರೆಗೆ ಕುಸಿದಿರುವುದು ಮುಂದಿನ ವರ್ಷದ ಆಹಾರ ಭದ್ರತೆಗೆ ಆತಂಕ ತಂದೊಡ್ಡಿದೆ.
ತೆಲಂಗಾಣ: ಶೇ. 25 ರಿಂದ 30 ರಷ್ಟು ಮಳೆ ಕೊರತೆ ಎದುರಾಗಿದೆ. ಭತ್ತ ಬೆಳೆಯುವ ವಿಸ್ತೀರ್ಣವು ಕಳೆದ ಬಾರಿಯ 69.89 ಲಕ್ಷ ಎಕರೆಗಳಿಂದ ಈ ಬಾರಿ 38.51 ಲಕ್ಷ ಎಕರೆಗೆ (ಶೇ. 44.9 ಕುಸಿತ) ಇಳಿಕೆಯಾಗಲಿದೆ ಎಂದು ತಜ್ಞರ ಸಮಿತಿ ಎಚ್ಚರಿಸಿದೆ.

ಸ್ಥಗಿತದತ್ತ ಪ್ರಸಿದ್ಧ ರೈಸ್ ಮಿಲ್‌ಗಳು
ದಾವಣಗೆರೆ ಹಾಗೂ ರಾಯಚೂರು ಸೇರಿದಂತೆ ರಾಜ್ಯದ ಪ್ರಮುಖ ಅಕ್ಕಿ ಗಿರಣಿಗಳಿಗೆ ಭತ್ತದ ಪೂರೈಕೆ ಸ್ಥಗಿತಗೊಂಡಿದೆ. ದಾವಣಗೆರೆಯ ಬ್ರಾಂಡೆಡ್ ಅಕ್ಕಿಗೆ ಮಹಾರಾಷ್ಟ್ರದಲ್ಲೂ ಭಾರಿ ಬೇಡಿಕೆಯಿದೆಯಾದರೂ, ಪೂರೈಸಲು ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಹಲವು ಮಿಲ್‌ಗಳು ಭತ್ತ ಸಿಗದೆ ಈಗಾಗಲೇ ಮಿಲ್ಲಿಂಗ್ ನಿಲ್ಲಿಸಿವೆ. ಈಗ ಕಾರ್ಯನಿರ್ವಹಿಸುತ್ತಿರುವ ಮಿಲ್‌ಗಳಲ್ಲಿ ಇನ್ನು 15 ದಿನಗಳಿಗೆ ಆಗುವಷ್ಟು ಮಾತ್ರ ಸ್ಟಾಕ್ ಇದ್ದು, ತಿಂಗಳೊಳಗೆ ಬಹುತೇಕ ರೈಸ್ ಮಿಲ್‌ಗಳು ಬಂದ್ ಆಗುವ ಸಾಧ್ಯತೆಯಿದೆ.
ಪರಿಹಾರ ಮತ್ತು ಮುಂದಿನ ನಿರೀಕ್ಷೆ
ಕೃತಕ ಅಭಾವ ಹಾಗೂ ಕಾಳಸಂತೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಭಾರತೀಯ ಆಹಾರ ನಿಗಮದ (FCI) ಗೋದಾಮುಗಳಿಂದ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಆಂಧ್ರಪ್ರದೇಶದಲ್ಲಿ ಈಗಾಗಲೇ ರೈತ ಬಜಾರ್‌ಗಳ ಮೂಲಕ ಕೆಜಿಗೆ 50-52 ರೂ, ರಂತೆ ಸಬ್ಸಿಡಿ ಅಕ್ಕಿ ಮಾರಾಟ ಆರಂಭಿಸಲಾಗಿದೆ. ಜಲಾಶಯಗಳಿಗೆ ಈಗ ನೀರು ಹರಿಯುತ್ತಿದ್ದು, ನೀರಾವರಿ ಪ್ರದೇಶಗಳಲ್ಲಿ ತಡವಾಗಿಯಾದರೂ ನಾಟಿ ಪ್ರಾರಂಭವಾದರೆ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಹೊಸ ಭತ್ತ ಮಾರುಕಟ್ಟೆಗೆ ಬರಲಿದೆ. ಅಲ್ಲಿಯವರೆಗೆ ಅಕ್ಕಿ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಕಡಿಮೆ.
ಅನ್ನದ ಬಟ್ಟಲಿಗೆ ಬಿದ್ದಿರುವ ಈ ಬರಗಾಲದ ನೆರಳು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸ್ಪಷ್ಟ ಸೂಚನೆ ನೀಡುತ್ತಿದೆ. ಭತ್ತದ ಬಿತ್ತನೆ ಶೇ.20ಕ್ಕೆ ಕುಸಿದಿರುವುದು ಮತ್ತು ರೈಸ್ ಮಿಲ್‌ಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿರುವುದು ಕೇವಲ ಬೆಲೆ ಏರಿಕೆಯ ಪ್ರಶ್ನೆಯಷ್ಟೇ ಅಲ್ಲದೆ, ಸಾಗುತ್ತಿರುವ ದಿನಗಳಲ್ಲಿ ತೀವ್ರ ಆಹಾರ ಭದ್ರತಾ ಬಿಕ್ಕಟ್ಟಿಗೆ ದಾರಿಮಾಡಿಕೊಡಬಹುದು. ಸರ್ಕಾರಗಳು ತಕ್ಷಣವೇ ಎಚ್ಚೆತ್ತುಕೊಂಡು, ಮುಕ್ತ ಮಾರುಕಟ್ಟೆಗೆ ಧಾನ್ಯ ದಾಸ್ತಾನು ಬಿಡುಗಡೆ ಮಾಡುವುದು, ಕಾಳಸಂತೆ ತಡೆಯುವುದು ಹಾಗೂ ರೈತರಿಗೆ ಪರ್ಯಾಯ ಬೆಳೆ ಪ್ರೋತ್ಸಾಹದ ಜತೆಗೆ ಬೆಂಬಲ ನೀಡುವುದು ಅತ್ಯಗತ್ಯವಾಗಿದೆ.

