ರಾಮನಗರ: ಸೂರ್ಯಗ್ರಹಣ, ಚಂದ್ರ ಗ್ರಹಣದ ವೇಳೆ ತಿಂಡಿ ಸೇವಿಸಬಾರದು, ಊಟ ಮಾಡಬಾರದು ಅಷ್ಟೇ ಏಕೆ ಹನಿ ನೀರು ಕೂಡಾ ಕುಡಿಯಬಾರದೆಂಬ ನಂಬಿಕೆ ಜನರಲ್ಲಿದೆ. ಆದರೆ ಇದು ನೆರಳು-ಬೆಳಕಿನಾಟ ಇದರಲ್ಲಿ ಯಾವುದೇ ಕೇತು, ರಾಹುವಿನ ಪಾತ್ರವಿಲ್ಲ ಗ್ರಹಣದ ವೇಳೆ ಊಟ, ತಿಂಡಿ ಸೇವಿಸಬಹುದು ಎಂದು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಹಣದ ವೇಳೆಯೇ ರಾಮನಗರ ಅಧಿಕಾರಿಗಳು ತಿಂಡಿ ಸೇವಿಸಿದ್ದಾರೆ.
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಸಮಿತಿ, ವಿಜ್ಞಾನ ಹಾಗೂ ತಂತ್ರಜ್ಞಾ ಇಲಾಖೆ ಹಾಗೂ ಸಾರ್ವಜನಿಕರ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಸೇರಿದಂತೆ ನೂರಾರು ಸಾರ್ವಜನಿಕರು ಕಂಕಣ ಸೂರ್ಯ ಗ್ರಹಣವನ್ನ ವೀಕ್ಷಣೆ ಮಾಡಿದರು.
Advertisement
Advertisement
ಇದೇ ವೇಳೆ ಸಾರ್ವಜನಿಕರಲ್ಲಿ ಮೂಢನಂಬಿಕೆ ತೊಡೆದು ಹಾಕಲು ಅಧಿಕಾರಿಗಳು ಸೂರ್ಯ ಗ್ರಹಣ ವೀಕ್ಷಣೆ ವೇಳೆಯೇ ತಿಂಡಿ ತಿನ್ನುವಂತಹ ಕೆಲಸ ಮಾಡುವುದರ ಮೂಲಕ ಗ್ರಹಣದ ವೇಳೆ ತಿಂಡಿ, ನೀರು, ಊಟ ಸೇವನೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಇದೊಂದು ನೆರಳು-ಬೆಳಕಿನಾಟ ಅಷ್ಟೇ, ಜನರು ಗ್ರಹಣವನ್ನು ವೈಜ್ಞಾನಿಕವಾಗಿ ನೋಡಬೇಕು ಎಂದು ಅಧಿಕಾರಿಗಳು ತಿಳಿಸಿದರು.
Advertisement
ಅಧಿಕಾರಿಗಳ ಮನವಿ ಸಾಕಷ್ಟು ಜನರು ಸಹ ಸೂರ್ಯ ಗ್ರಹಣ ನೋಡುತ್ತಲೇ ತಿಂಡಿಯನ್ನು ಸೇವಿಸಿದರು. ಅಲ್ಲದೇ ತಮ್ಮ ಸಹವರ್ತಿಗಳಿಗೂ ಸಹ ತಿಂಡಿ ಸೇವಿಸಿ, ನೀರು ಕುಡಿಯುವಂತೆ ಮನವಿ ಮಾಡಿದರು. ಇದೇ ವೇಳೆ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ಬಂದ ವಿದ್ಯಾರ್ಥಿಗಳಿಗೆ ಗ್ರಹಣದ ಬಗ್ಗೆ ಮಾಹಿತಿ ನೀಡಲಾಯಿತು.