ಗುವಾಹಟಿ: ಅಸ್ಸಾಂನಲ್ಲಿ (Assam) ಆನೆಗಳ ಹಿಂಡು ರೈಲು ಹಳಿಯನ್ನು ದಾಟುತ್ತಿದ್ದ ವೇಳೆ ದಿಬ್ರುಗಢ್ – ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ (Dibrugarh-Delhi Rajdhani Express) ರೈಲು ಎದುರಾಗಿದ್ದು, ಅರಣ್ಯಾಧಿಕಾರಿಯ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ತಪ್ಪಿದೆ. ಅರಣ್ಯಾಧಿಕಾರಿ ರೈಲಿನ ಲೋಕೋ ಪೈಲಟ್‌ಗೆ ಕೆಂಪು ಸಿಗ್ನಲ್‌ನ ಟಾರ್ಚ್ ತೋರಿಸಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಸ್ಸಾಂನ (Assam) ಹೋಜಾಯಿ (Hojai) ಜಿಲ್ಲೆಯ ಹವಾಯಿಪುರ (Hawaipur) ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ 4:57ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ನಯನ್ ಜ್ಯೋತಿ ರಾಜವಂಶಿ ತಿಳಿಸಿದ್ದಾರೆ. ಹವಾಯಿಪುರ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ರೇಂಜ್ ಫಾರೆಸ್ಟ್ ಆಫೀಸರ್ ಮಾಣಿಕ್ ಬರುವಾ ಮತ್ತು ಫಾರೆಸ್ಟರ್-1 ಶಶಾಂಕ್ ರೈ ಅವರಿಗೆ ರೈಲು ಹಳಿಯ ಬಳಿ ಕೆಲವು ಆನೆಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ಐದರಿಂದ ಹತ್ತು ಆನೆಗಳಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು. ಇದನ್ನೂ ಓದಿ: ಹನೂರು ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯ ಭಸ್ಮ
ಆದರೆ ಆನೆಗಳನ್ನು ಎಣಿಸಲು ಆರಂಭಿಸಿದಾಗ ಸುಮಾರು 90 ಆನೆಗಳಿರುವುದು ತಿಳಿದುಬಂದಿದೆ. ಹಿಂಡಿನಲ್ಲಿ ಮರಿಯಾನೆಗಳೂ ಇದ್ದವು. ಆನೆಗಳ ಹಿಂಡು ರೈಲು ಹಳಿಯನ್ನು ದಾಟಿ ಕಬ್ಬಿನ ಗದ್ದೆಗಳತ್ತ ಸಾಗುತ್ತಿತ್ತು. ಇದೇ ಸಂದರ್ಭದಲ್ಲಿ ದಿಬ್ರುಗಢ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆ ಮಾರ್ಗದಲ್ಲಿ ಬರುತ್ತಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅರಣ್ಯಾಧಿಕಾರಿ ಶಶಾಂಕ್ ರೈ, ಲೋಕೋ ಪೈಲಟ್‌ಗೆ ಕೆಂಪು ಸಿಗ್ನಲ್‌ನ ಟಾರ್ಚ್ ತೋರಿಸಿದ್ದಾರೆ. ಇದನ್ನೂ ಓದಿ: ರೀಲ್ಸ್‌ಗಾಗಿ 3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್ ಕೊಂಡೊಯ್ದು ಹುಚ್ಚಾಟ – ವಾಹನ ಸೀಜ್
ಸಿಗ್ನಲ್ ಗಮನಿಸಿದ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. ಪರಿಣಾಮವಾಗಿ ಆನೆಗಳ ಹಿಂಡಿಗೆ ಯಾವುದೇ ತೊಂದರೆಯಾಗದೆ ಸುರಕ್ಷಿತವಾಗಿ ರೈಲು ಹಳಿಯನ್ನು ದಾಟಲು ಸಾಧ್ಯವಾಗಿದೆ. ರೈಲು ನಿಲ್ಲಿಸದೇ ಮುಂದುವರಿದಿದ್ದರೆ ಆನೆಗಳೊಂದಿಗೆ ಭೀಕರ ರೈಲು ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ವಿಶೇಷವಾಗಿ ಹಿಂಡಿನಲ್ಲಿ ಮರಿಯಾನೆಗಳಿದ್ದ ಕಾರಣ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗಿತ್ತು. ಇದನ್ನೂ ಓದಿ: ತೆರೆದ ಚರಂಡಿಗೆ ಬಿದ್ದ 8 ವರ್ಷದ ಬಾಲಕ; ಮಗನ ಸಾವಿನ ಸುದ್ದಿ ಕೇಳಿ ತಾಯಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನ
ಆನೆಗಳ ಹಿಂಡು ಸುರಕ್ಷಿತವಾಗಿ ರೈಲು ಹಳಿಯನ್ನು ದಾಟಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ರೈಲಿಗೆ ಮುಂದುವರಿಯಲು ಅನುಮತಿ ನೀಡಲಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಲೋಕೋ ಪೈಲಟ್ ಅವರ ತ್ವರಿತ ಪ್ರತಿಕ್ರಿಯೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಆದೇಶ ಆ.24ಕ್ಕೆ ಮುಂದೂಡಿಕೆ

