– ರೈತರಿಗೆ ಬೆಳೆ ಬೆಳೆಯಬೇಡಿ ಅಂತೀರಿ, ನಿಮ್ಗೆ ಧೈರ್ಯ ಇದ್ದರೆ ತಮಿಳುನಾಡಿನಲ್ಲಿ ಹೇಳಿ ಅಂತ ವಾಗ್ದಾಳಿ
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ ಒಂದು ತಿಂಗಳಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಸರ್ಕಾರವನ್ನ ಟೀಕಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದು 1 ತಿಂಗಳು ಆಗಿದೆ ಆಡಳಿತದಲ್ಲಿ ಏನು ಬದಲಾವಣೆ ಆಗಿದೆ? ಅದೇ ಭ್ರಷ್ಟಾಚಾರ ಹಳೇ ಬಾಟಲಿ ಹೊಸ ಮದ್ಯ ತರ ಆಗಿದೆ ಎಂದ್ರು. ಡಿಕೆ ಶಿವಕುಮಾರ್ ಅಧಿಕಾರಕ್ಕೇರಿದ ಕಾಲ್ಗುಣನೇ ಏನೋ ಅವರು ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರಿಗೆ (Farmers) ಬೆಳೆಗಳನ್ನು ಬೆಳೆಯಬೇಡಿ ಅಂತೀರಿ… ನಿನಗೆ ಧೈರ್ಯ ಇದ್ದರೆ ತಮಿಳುನಾಡಿನಲ್ಲಿ ಹೇಳು ಅಂತಾ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಮೇಕೆದಾಟು ಮಾಡೋಕೆ ಬಿಡಲ್ಲ ಅಂತಾ ತಮಿಳುನಾಡು ಸಿಎಂ ವಿಜಯ್ ಹೇಳ್ತಿದ್ದಾರೆ. ನಮ್ಮ ಸಿಎಂ ಅಧಿಕಾರಕ್ಕೆ ಬಂದು ತಿಂಗಳು ಆಯ್ತು.. ಏನಾದರೂ ಅದಕ್ಕೆ ಪ್ರತಿಯಾಗಿ ಒಂದು ನಿರ್ಣಯ ಮಾಡಿದ್ರಾ? ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ. ನೀರಾವರಿ ಸಚಿವರು ಬೆಂಗಳೂರು ಬಿಟ್ಟು ಆಚೆ ಹೋಗಲ್ಲ ಎಂದಿದ್ದಾರೆ. ತುಂಗಭದ್ರಾ ಜಲಾಶಯ ಕ್ರಸ್ಟ್‌ಗೇಟ್ ಉದ್ಘಾಟನೆಗೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಬಂದಿದ್ರು. ಆದರೆ ನಮ್ಮ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮಕ್ಕೆ ಹೋಗೇ ಇಲ್ಲ. ಹತ್ತೇ ದಿನಗಳಲ್ಲಿ ಪೂರ್ತಿ ಸಚಿವ ಸಂಪುಟ ಅಂದ್ರು.. ಒಂದು ತಿಂಗಳು ಆದರೂ ಸಂಪುಟ ಪೂರ್ಣ ಇಲ್ಲ. ಬೆಳೆ ಬೆಳೆಯಬೇಡಿ ಅಂತೀಯಾ ಆದರೆ ಬೆಳೆಗೆ ಪರಿಹಾರ ಏನು ಕೊಡ್ತೀಯಾ? ಯಾವುದಾದರೂ ಒಬ್ಬ ಮಂತ್ರಿ ಒಂದು ವೀಕ್ಷಣೆಗೆ ಹೋಗಿದ್ದೀರಾ? ಎಂದು ಪ್ರಶ್ನೆ ಮಾಡಿದ್ರು.

ʻಪ್ರಜಾಸೇವೆ ಇಲಾಖೆʼ ಇಟ್ಟಿರೋದೇ ಕಾಂಗ್ರೆಸ್ ಸೇವೆ ಮಾಡೋಕೆ, ಕಮಿಷನ್ ಸಂಗ್ರಹಕ್ಕೆ ಎಂದು ಆರೋಪಿಸಿದ್ರು. ರೈತರಿಗೆ ನೀರಿಲ್ಲ ಬೆಳೆ ಬೆಳಿಬೇಡಿ ಅಂತೀರ ರೈತರಿಗೆ ಗೊತ್ತಿದೆ ನೀರು ಇದ್ದಾಗ ಯಾವ ಬೆಳೆ ಬೆಳೆಯಬೇಕು? ಇಲ್ಲದಾಗ ಯಾವ ಬೆಳೆ ಬೆಳೆಯಬೇಕು? ಎಂಬುದು ಮುಖ್ಯಮಂತ್ರಿ ಅವರಿಗೆ ಯಾರು ಐಡಿಯಾ ಕೊಡ್ತಾರೋ ಗೊತ್ತಿಲ್ಲ. ನೀರು ಇಲ್ಲ ಬೆಳೆ ಬಗ್ಗೆ ಗಮನ ಹರಿಸಿ ಅಂತಿದ್ದಾರೆ. ರೈತರಿಗೆ ಸಲಹೆ ಕೊಡಬೇಕಾ? ಯಾವ ಕಾಲದಲ್ಲಿ ಯಾವ ರೀತಿ ಬೆಳೆ ಬೆಳೆಯಬೇಕು ಅಂತ. ಯುದ್ಧದ ಸಂದರ್ಭದಲ್ಲಿ ಚಿನ್ನ ಖರೀದಿಸೋದು ಕಡಿಮೆ ಮಾಡಿ ಅಂದಿದ್ದಕ್ಕೆ ಏನೇನೋ ಹೇಳಿದ್ರಿ. ಮೇಕೆದಾಟುಗೆ ಒಂದೇ ಒಂದು ಇಟ್ಟಿಗೆ ಇಡಲು ಬಿಡಲ್ಲ ಅಂತ ಹೇಳ್ತಿದ್ದಾರೆ. ರಾಜ್ಯ ಸರ್ಕಾರವೇ ಜೆಲ್ಲಿ ಕಲ್ಲು ಹಾಕಲ್ಲ. ಸರ್ಕಾರ ಬಜೆಟ್‌ನಲ್ಲಿ ಹಣ ಇಟ್ಟಿಲ್ಲ. ಜಲಾಶಯಗಳಲ್ಲಿ ಮಾತ್ರ ನೀರಿನ ಕೊರತೆ, ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಲಂಚದ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಡ್ಯಾಮ್ ಅಕ್ಕಪಕ್ಕದ ರೈತರ ಸಭೆ ಕರೆದು ಮಾಹಿತಿ ಆದರೂ ಕೊಡಬಹುದಿತ್ತಲ್ಲ. ಈ ಸರ್ಕಾರಕ್ಕೆ ದಿಕ್ಕೂ ದೆಸೇ ಏನಿಲ್ಲ, ಬರೀ ಫೋಟೋ ಶೂಟ್ ಸರ್ಕಾರ ಎಂದು ಕಿಡಿಕಾರಿದ್ರು.
