ಬೆಂಗಳೂರು: ರಾಜಧಾನಿ ಬೆಂಗಳೂರು(Bengaluru) ರಸ್ತೆಗುಂಡಿಗಳ ನೈಜ ಸ್ಥಿತಿಯನ್ನು ಅನಾವರಣಗೊಳಿಸಿದ ಪಬ್ಲಿಕ್ ಟಿವಿ(PUBLiC TV) ವರದಿಗೆ ಕೊನೆಗೂ ಫಲಶ್ರುತಿ ಸಿಕ್ಕಿದೆ. ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿದ್ದ ಬೃಹತ್ ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಎಚ್ಚೆತ್ತುಕೊಂಡಿದ್ದು, ರಸ್ತೆಯುದ್ದಕ್ಕೂ ಡಾಂಬರೀಕರಣ ಕಾರ್ಯ ಕೈಗೊಂಡಿದೆ.
ಕಂಠೀರವ ಸ್ಟುಡಿಯೋ(Kanteerava Studio) ಜಂಕ್ಷನ್ನಿಂದ ಜಾಲಹಳ್ಳಿ ಕ್ರಾಸ್ವರೆಗಿನ ಮುಖ್ಯ ರಸ್ತೆಯಲ್ಲಿ ಗುಂಡಿಗಳ ಸರಮಾಲೆಯೇ ಸೃಷ್ಟಿಯಾಗಿತ್ತು. ವಾಹನ ಸವಾರರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದ ಈ ರಸ್ತೆಯ ಬೃಹತ್ ಗುಂಡಿಯೊಳಗೆ ಪಬ್ಲಿಕ್ ಟಿವಿ ವರದಿಗಾರ ಲೋಕೇಶ್ ಅವರು ನೇರವಾಗಿ ಇಳಿದು ರಿಯಾಲಿಟಿ ಚೆಕ್ ವರದಿ ಮಾಡಿದ್ದರು. ಈ ವಿಡಿಯೋ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ, ರಾಷ್ಟ್ರಮಟ್ಟದಲ್ಲೂ ಬೆಂಗಳೂರಿನ ರಸ್ತೆಗುಂಡಿಗಳ ದುಸ್ಥಿತಿಯ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿತ್ತು. ಇದರಿಂದ ಜಿಬಿಎಗೆ ಭಾರೀ ಮುಖಭಂಗವಾಗಿತ್ತು.
ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹಾಗೂ ಪಶ್ಚಿಮ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಕೆ.ವಿ. ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಸ್ತೆಯ ದುಃಸ್ಥಿತಿಯನ್ನು ಕಣ್ಣಾರೆ ಕಂಡು ಕೆಂಡಾಮಂಡಲರಾದ ಆಯುಕ್ತರು, ಸ್ಥಳದಲ್ಲೇ ಜಿಬಿಎ ಎಂಜಿನಿಯರ್ಗಳು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕ್ಲಾಸ್ ತೆಗೆದುಕೊಂಡಿದ್ದರು. ಅಲ್ಲದೆ ತಕ್ಷಣವೇ ರಸ್ತೆ ದುರಸ್ತಿ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಇದನ್ನೂ ಓದಿ: ಡೀಸೆಲ್ ಬಳಿಕ ಟಿಕೆಟ್ ರೋಲ್ ಕೊರತೆ; 3-4 ಜನರಿಗೆ ಸೇರಿ ಒಂದೇ ಟಿಕೆಟ್ ವಿತರಣೆ

