ದುನಿಯಾ ವಿಜಯ್ (Duniya Vijay) ನಟನೆಯಿಂದ ನಿರ್ದೇಶಕರ ಭಡ್ತಿ ಪಡೆದಿದ್ದರೆ, ಇದೀಗ ಅವರ 2ನೇ ಪತ್ನಿ ಕೀರ್ತಿ ಗೌಡ (Keerthi Gowda) ನಿರ್ಮಾಪಕಿಯಾಗುತ್ತಿದ್ದಾರೆ. ಅರ್ಜುನ್ ಎಂಟರ್ ಟೇನ್ಮೆಂಟ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ. ಈ ಸಂಸ್ಥೆಯ ಮೂಲಕ ಮೊದಲ ಬಾರಿಗೆ ಕಿರುಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ.
ಕೀರ್ತಿ ಗೌಡ ಅವರಿಗೆ ಸಿನಿಮಾ ರಂಗ ಹೊಸದೇನೂ ಅಲ್ಲ. ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ಹಲವಾರು ಚಿತ್ರಗಳಲ್ಲೂ ನಟಿಸಿದ್ದಾರೆ. ಮದುವೆ ನಂತರ ನಟನೆಯಿಂದ ದೂರ ಉಳಿದಿದ್ದರು. ವಿಜಯ್ ಅವರ ಸಿನಿಮಾಗಳಿಗೆ ಸಹಾಯ ಮಾಡುತ್ತಿದ್ದರು. ಇದೀಗ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಮೊದಲ ನಿರ್ಮಾಣದ ಕಿರುಚಿತ್ರದಲ್ಲಿ ಬುಡಕಟ್ಟು ಮಕ್ಕಳ ಶಿಕ್ಷಣದ ಕುರಿತು ವಿಷಯ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವಂತಹ ಕೆಲಸಕ್ಕೆ ಅವರು ಮುಂದಾಗಿದ್ದಾರೆ.
ಕೀರ್ತಿ ಗೌಡ ಕೇವಲ ನಟಿ ಮಾತ್ರವಲ್ಲ, ಸಂಗೀತದಲ್ಲೂ ಅವರಿಗೆ ಆಸಕ್ತಿಯಿದೆ. ಈ ಹಿಂದೆ ಹಿಂದೂಸ್ತಾನಿ ಸಂಗೀತ ಕಲಿಯುತ್ತಿರುವ ಕುರಿತು ಅವರು ಬರೆದುಕೊಂಡಿದ್ದರು. ಜೊತೆಗೆ ವಿಜಯ್ ಅವರ ಕಷ್ಟ, ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ವಿಜಯ್ ಅಭಿಮಾನಿಗಳ ಪಾಲಿಗೆ ನೆಚ್ಚಿನ ಅತ್ತಿಗೆ ಕೂಡ ಆಗಿದ್ದಾರೆ.