ಬೆಂಗಳೂರು: ಕರ್ನಾಟಕವನ್ನು ನಶೆಮುಕ್ತ (Drug Free Karnataka) ರಾಜ್ಯವನ್ನಾಗಿಸುವ ಮುಖ್ಯಮಂತ್ರಿ ಅವರ ಆಶಯವನ್ನು ಸಾಕಾರಗೊಳಿಸುವ ಜವಾಬ್ದಾರಿ ರಾಜ್ಯದ ಪೊಲೀಸ್ ಇಲಾಖೆಯ ಮೇಲಿದೆ. ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸೂಚಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಮುಖ್ಯಮಂತ್ರಿ ಅವರೊಂದಿಗೆ ನಡೆದ ಸರ್ಕಾರಿ ನೌಕರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮಗಳ ಜೊತೆಗೆ ಜನರಲ್ಲಿ, ವಿಶೇಷವಾಗಿ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಬಿ.ನಾಗೇಂದ್ರ ಸಚಿವರಾಗಿರುವವರೆಗೂ ಅಧಿವೇಶನ ನಡೆಸಲು ಬಿಡಲ್ಲ: ಆರ್.ಅಶೋಕ್
ಈಗಾಗಲೇ ರಾಜ್ಯದಲ್ಲಿ ‘RISE’ ಹಾಗೂ ‘ಬೇಡ BRO’ ಅಭಿಯಾನಗಳ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ತಾಲ್ಲೂಕು ಮಟ್ಟದಲ್ಲಿಯೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಯುವಕರು ಹಾಗೂ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸುವಂತೆ ತಾಲ್ಲೂಕು ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಬರ ಪರಿಸ್ಥಿತಿಯಲ್ಲಿ ಅನುಸರಿಸಿದ SOP ಮಾದರಿಯಲ್ಲಿ ಕಾರ್ಯನಿರ್ವಹಿಸಿ
ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ರೂಪಿಸಿ ಜಾರಿಗೊಳಿಸಲಾಗಿದ್ದ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಮಾದರಿಯನ್ನು ಗಮನದಲ್ಲಿಟ್ಟುಕೊಂಡು, ಪರಿಸ್ಥಿತಿಗೆ ಅನುಗುಣವಾಗಿ ಇಲಾಖೆಗಳು ಪೂರ್ವಸಿದ್ಧತೆ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಮಸ್ಯೆ ಎದುರಾದ ನಂತರ ಪರಿಹಾರ ಕಂಡುಕೊಳ್ಳುವುದಕ್ಕಿಂತ, ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಇದಕ್ಕಾಗಿ ಈಗಾಗಲೇ ರೂಪಿಸಲಾಗಿರುವ ಕಾರ್ಯವಿಧಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಅವರು ಸಲಹೆ ನೀಡಿದರು.
ಒಬ್ಬ ಅರ್ಹ ಮತದಾರನೂ ಮತದಾನದ ಹಕ್ಕಿನಿಂದ ವಂಚಿತನಾಗಬಾರದು
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಅರ್ಹ ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಹೋರಾಟ ಮಾಡಿದವರು ಎಲ್ಲಿ ಮಾಯವಾಗಿದ್ದಾರೆ?: ಛಲವಾದಿ ನಾರಾಯಣಸ್ವಾಮಿ
SIR ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಪರಿಶೀಲನೆಗೆ ಒಳಪಟ್ಟಿರುವ ಹಿನ್ನೆಲೆಯಲ್ಲಿ, ಯಾವುದೇ ಒಬ್ಬ ಅರ್ಹ ಮತದಾರನೂ ತನ್ನ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಜನರಿಗೆ ತಲುಪಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಕರ್ನಾಟಕದ SIR ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪರಿಣಾಮಕಾರಿ ಮಾಹಿತಿ ಅಭಿಯಾನ ನಡೆಸಬೇಕು ಎಂದು ಸೂಚಿಸಿದರು. ರಾಜ್ಯದಲ್ಲಿ SIR ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರ ವಿವರಗಳ ಪರಿಶೀಲನೆ ಹಾಗೂ ಪರಿಷ್ಕರಣೆಯ ಪ್ರಕ್ರಿಯೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆಯುತ್ತಿದೆ. ಅರ್ಹ ಮತದಾರರ ಹಕ್ಕು ರಕ್ಷಿಸುವುದು ಪ್ರಜಾಪ್ರಭುತ್ವದ ಮೂಲಭೂತ ಜವಾಬ್ದಾರಿ. ಯಾವುದೇ ಕಾರಣಕ್ಕೂ ಒಬ್ಬ ಅರ್ಹ ಮತದಾರನ ಹೆಸರು ಪಟ್ಟಿಯಿಂದ ಕೈಬಿಡದಂತೆ, ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಸಚಿವರು ಹೇಳಿದರು.
ಮಾದಕ ವಸ್ತುಗಳ ನಿಯಂತ್ರಣ, ಸಾರ್ವಜನಿಕ ಜಾಗೃತಿ ಹಾಗೂ ಮತದಾರರ ಹಕ್ಕುಗಳ ರಕ್ಷಣೆಯಂತಹ ಪ್ರಮುಖ ವಿಚಾರಗಳಲ್ಲಿ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಗಳು ಜನಸ್ನೇಹಿಯಾಗಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

