ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದ (PoK) 17 ವರ್ಷದ ಬಾಲಕಿಯೊಬ್ಬಳು ಶುಕ್ರವಾರ (ಅ.2) ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿಯ ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದಾಳೆ. ಆಕೆಯನ್ನು ಭದ್ರತಾ ಪಡೆಯ (Indian Army) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ನೌಶೆರಾದ ‘ಲಾಮ್’ (Lam) ವಲಯದಲ್ಲಿರುವ ನಿಯಂತ್ರಣ ರೇಖೆಯ ಬೇಲಿಯ ಬಳಿ ಬಾಲಕಿ ಓಡಾಡುತ್ತಿದ್ದಳು. ಈ ವೇಳೆ ಭಾರತೀಯ ಸೇನೆಯ ಗಸ್ತು ತಂಡ ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಿಸಿದೆ. ಆಗ ಬಾಲಕಿ ಪಿಒಕೆಯ ಖುಯಿರೆಟ್ಟಾ (Khuiretta) ನಿವಾಸಿ ಎಂದು ಗೊತ್ತಾಗಿದೆ. ಇದನ್ನೂ ಓದಿ: ಭಾರತ – ಪಾಕ್ ಗಡಿಯಲ್ಲಿ ಇಬ್ಬರು ನುಸುಳುಕೋರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಬಾಲಕಿ ಪತ್ತೆಯಾದ ಸ್ಥಳದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ ಸೇನೆ, ಹೆಚ್ಚಿನ ವಿಚಾರಣೆಗೆ ಆಕೆಯನ್ನು ನೌಶೆರಾ ಪೊಲೀಸರಿಗೆ ಹಸ್ತಾಂತರಿಸಿದೆ. ವಿಚಾರಣೆಯ ವೇಳೆ, ತಾನು ಅರಿವಿಲ್ಲದೆ ಭಾರತದ ಕಡೆಗೆ ಬಂದಿರುವುದಾಗಿ ಬಾಲಕಿ ತಿಳಿಸಿದ್ದಾಳೆ.
ಅರಿವಿಲ್ಲದೆ ಗಡಿ ದಾಟಿ ಬಂದಿರುವುದಾ ಅಥವಾ ಇದರ ಹಿಂದೆ ಬೇರೆ ಏನಾದರೂ ದುರುದ್ದೇಶವಿದೆಯೇ ಎಂಬುದರ ಬಗ್ಗೆ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
ತರನ್‌ತಾರನ್‌ನಲ್ಲಿ ನುಸುಳುಕೋರರ ಹತ್ಯೆ
ಅ.2 ರಂದು ಪಂಜಾಬ್‌ನ (Punjab) ತರನ್‌ತಾರನ್ ಜಿಲ್ಲೆಯ ಭಾರತ-ಪಾಕಿಸ್ತಾನ (India – Pakistan) ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆಗೆ ಯತ್ನಿಸಿದ ಇಬ್ಬರು ನುಸುಳುಕೋರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಗಡಿ ಸಮೀಪದ ರಾಜೋಕೆ ಗ್ರಾಮದ ಬಳಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಇಬ್ಬರು ನುಸುಳುಕೋರರು ಯತ್ನಿಸಿದ್ದರು. ಈ ವೇಳೆ ಬಿಎಸ್‌ಎಫ್ (BSF) ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಶುಕ್ರವಾರ ಮುಂಜಾನೆ ರಾಜೋಕೆ ಪ್ರದೇಶದ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಮೂವರು ಓಡಾಡುತ್ತಿದ್ದರು. ಇದನ್ನು ಗಮನಿಸಿದ BSF ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಹಿಂದಕ್ಕೆ ತೆರಳದೆ ಭಾರತೀಯ ಪ್ರದೇಶದತ್ತಲೇ ಬಂದಿದ್ದಾರೆ. ಈ ವೇಳೆ BSF ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಒಳನುಸುಳುಕೋರ ಪಾಕಿಸ್ತಾನ ಭಾಗಕ್ಕೆ ಹಿಂದಿರುಗಿರುವ ಸಾಧ್ಯತೆ ಇದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಟಾಪ್ ಲಷ್ಕರ್ ಉಗ್ರ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ್ಯೆ

