– ಕಾಂಗ್ರೆಸ್ ಆಡಳಿತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ ಹಂತ ತಲುಪಿತ್ತು
ಭುವನೇಶ್ವರ: ಇಂದು ಯುದ್ಧಗಳು ಕೇವಲ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದ ಮಾತ್ರ ನಡೆಯುವುದಿಲ್ಲ. ಆರ್ಥಿಕತೆಯ ಮೇಲೆ ದಾಳಿ ನಡೆಸುವ ಮೂಲಕವೂ ಒಂದು ದೇಶವನ್ನು ದುರ್ಬಲಗೊಳಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ʻಸೈಬರ್ ಭಯೋತ್ಪಾದನೆʼ (Cyber Terrorism) ಬಗ್ಗೆ ಎಚ್ಚರಿಸಿದ್ದಾರೆ.
ಭುವನೇಶ್ವರದಲ್ಲಿಂದು ಆರ್ಬಿಐ ಡೇಟಾ ಸೆಂಟರ್ ಮತ್ತು ಸೈಬರ್ ಸೆಕ್ಯುರಿಟಿ ತರಬೇತಿ ಸಂಸ್ಥೆ ಉದ್ಘಾಟಿಸಿದ ಪ್ರಧಾನಿ ಮೋದಿ ಅವರು, ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಸುರಕ್ಷತೆಯ ಮಹತ್ವವನ್ನು ಒತ್ತಿಹೇಳಿದರು. ಭಾರತದ ಆರ್ಥಿಕತೆ ಬಲಗೊಳ್ಳುತ್ತಿರುವ ಹಿನ್ನೆಲೆ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಡಿಜಿಟಲ್ ಮೂಲಸೌಕರ್ಯವನ್ನ ಸೈಬರ್ ಅಪರಾಧಿಗಳು ಹಾಗೂ ಸೈಬರ್ ಭಯೋತ್ಪಾದಕರಿಂದ ರಕ್ಷಿಸುವುದು ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | 539 ಕೆರೆಗಳ 2,431 ಎಕರೆ ಭೂಮಿ ಒತ್ತುವರಿ ತೆರವಿಗೆ ಈಶ್ವರ್ ಖಂಡ್ರೆ ಸೂಚನೆ
ಇಂದು ಯುದ್ಧಗಳು ಕೇವಲ ಶಸ್ತ್ರಾಸ್ತ್ರಗಳಿಂದ ನಡೆಯುವುದಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಒಂದು ದೇಶದ ಆರ್ಥಿಕತೆಯ ಮೇಲೆ ದಾಳಿ ನಡೆಸುವ ಮೂಲಕವೂ ಆ ದೇಶವನ್ನ ದುರ್ಬಲಗೊಳಿಸಬಹುದು. ಭಾರತ ಆರ್ಥಿಕವಾಗಿ ಹೆಚ್ಚು ಬಲಿಷ್ಠವಾಗುತ್ತಿರುವ ಸಂದರ್ಭದಲ್ಲಿ, ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸೈಬರ್ ಅಪರಾಧಿಗಳು ಮತ್ತು ಸೈಬರ್ ಭಯೋತ್ಪಾದಕರಿಂದ ರಕ್ಷಿಸುವುದೂ ಅಷ್ಟೇ ಅಗತ್ಯವಾಗಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮೋದಿ ಅವರಪ್ಪನೂ ಜೈಲಿಗೆ ಹೋಗ್ಬೇಕು ಎಂದ ಖರ್ಗೆಗೆ ಸಂಕಷ್ಟ – ದೂರು ದಾಖಲು
ಸೈಬರ್ ಬೆದರಿಕೆ ಎದುರಿಸಲು ಆಧುನಿಕ ವ್ಯವಸ್ಥೆ ಅಗತ್ಯ:
ಸೈಬರ್ ಭದ್ರತೆಯ ಹೊಸ ಸವಾಲುಗಳ ಕುರಿತು ಮಾತನಾಡಿದ ಪ್ರಧಾನಿ, ಸೈಬರ್ ದಾಳಿಗಳ ಸ್ವರೂಪವು ವೇಗವಾಗಿ ಬದಲಾಗುತ್ತಿದೆ. ಹೀಗಾಗಿ ಹಳೆಯ ವ್ಯವಸ್ಥೆಗಳು, ಸಾಂಪ್ರದಾಯಿಕ ತರಬೇತಿ ವಿಧಾನಗಳು ಮತ್ತು ಹಳೆಯ ತರಬೇತಿ ಸಾಧನಗಳನ್ನ ಅವಲಂಬಿಸಿ ಈ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಈ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಆಧುನಿಕ ಮೂಲಸೌಕರ್ಯ ಹಾಗೂ ಪರಿಣತಿ ಹೊಂದಿರುವ ಸಿಬ್ಬಂದಿ ಅಗತ್ಯವಿದೆ. ಈ ನಿಟ್ಟಿನಲ್ಲಿ ನೂತನ ಸೈಬರ್ ಭದ್ರತಾ ತರಬೇತಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ದಶಕದಲ್ಲಿ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿದ್ದ ಜನರಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನ ತಲುಪಿಸುವುದಕ್ಕೆ ಆದ್ಯತೆ ನೀಡಲಾಗಿತ್ತು. ಆದರೆ ಮುಂಬರುವ ದಶಕದಲ್ಲಿ ಬ್ಯಾಂಕಿಂಗ್ ಸೇವೆಗಳನ್ನ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವಿಶ್ವಾಸಾರ್ಹವಾಗಿ ರೂಪಿಸುವುದರ ಮೇಲೆ ಗಮನ ಹರಿಸಲಾಗುವುದು. ಇದಕ್ಕಾಗಿ ಬಲಿಷ್ಠ ದತ್ತಾಂಶ ಕೇಂದ್ರಗಳು ಮತ್ತು ಶಕ್ತಿಶಾಲಿ ಕಂಪ್ಯೂಟಿಂಗ್ ವ್ಯವಸ್ಥೆಗಳು ಅಗತ್ಯವಿವೆ ಎಂದು ಪ್ರಧಾನಿಗಳು ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ ಹಂತ ತಲುಪಿತ್ತು:
ಇದೇ ವೇಳೆ, ಬ್ಯಾಂಕಿಂಗ್ ಕ್ಷೇತ್ರದ ನಿರ್ವಹಣೆಯ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದ ನೀತಿಗಳಿಂದಾಗಿ ಅವರ ಆಡಳಿತದಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ ಹಂತ ತಲುಪಿತ್ತು ಎಂದು ಆರೋಪಿಸಿದರು.
1 ಫೋನ್ಕಾಲ್ನಿಂದ ಸಾವಿರಾರು ಕೋಟಿ ಸಾಲ ಪಡೆಯುತ್ತಿದ್ರು:
ಅಷ್ಟೇ ಅಲ್ಲ, 2014ಕ್ಕೂ ಮೊದಲು ದೇಶದಲ್ಲಿ ಒಂದು ವಿಭಿನ್ನ ರೀತಿಯ ‘ಫೋನ್ ಬ್ಯಾಂಕಿಂಗ್’ ವ್ಯವಸ್ಥೆ ಇತ್ತು. ದೆಹಲಿಯ ಕಾಂಗ್ರೆಸ್ ನಾಯಕರಿಗೆ ನಿಕಟವಾಗಿದ್ದ ಪ್ರಭಾವಿ ವ್ಯಕ್ತಿಗಳು ಕೇವಲ ಫೋನ್ ಕಾಲ್ ಮೂಲಕವೇ ಸಾವಿರಾರು ಕೋಟಿ ರೂಪಾಯಿಗಳ ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಇದರಿಂದ ಮಧ್ಯಮ ವರ್ಗದ ಕುಟುಂಬಗಳಿಗೆ ಇಂತಹ ಸಾಲ ಪಡೆಯುವುದು ದೂರದ ಮಾತಾಗಿತ್ತು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಬ್ಯಾಂಕ್ ಖಾತೆ ತೆರೆಯಲು ಸಹ ಜಾಮೀನುದಾರರನ್ನ ಹುಡುಕಬೇಕಾದ ಪರಿಸ್ಥಿತಿ ಇತ್ತು. ಶ್ರೀಮಂತರು ಮಾತ್ರ ಕಾಂಗ್ರೆಸ್ನ ಫೋನ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಯಾವಾಗ ಬೇಕಾದರೂ ಸಾವಿರಾರು ಕೋಟಿ ರೂಪಾಯಿಗಳ ಸಾಲ ಪಡೆಯುವ ಅವಕಾಶ ಹೊಂದಿದ್ದರು. ಇಂತಹ ದುರ್ವ್ಯವಸ್ಥೆಯೇ ಭಾರತದ ಬ್ಯಾಂಕಿಂಗ್ ಕ್ಷೇತ್ರವನ್ನ ಕುಸಿತದ ಅಂಚಿಗೆ ತಳ್ಳಿತು ಎಂದು ಮೋದಿ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: NWKRTC ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆಯಾಗಿ ಮರುನಾಮಕರಣ: ಕಿತ್ತೂರು ಉತ್ಸವದಲ್ಲಿ ಡಿಕೆಶಿ ಘೋಷಣೆ
