ಬೆಳಗಾವಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು (NWKRTC) ಇನ್ಮುಂದೆ ‘ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಘೋಷಿಸಿದ್ದಾರೆ.
ಐತಿಹಾಸಿಕ ಕಿತ್ತೂರು ಉತ್ಸವದ(Kittur Utsav) ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನ ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕವಾದ ಕಿತ್ತೂರು ಸಂಸ್ಥಾನದ ಕೊಡುಗೆಯನ್ನು ಸ್ಮರಿಸಿದರು.
ವಾಯವ್ಯ ರಸ್ತೆ ಸಾರಿಗೆ ನಿಗಮದ ಹೆಸರನ್ನು ಮುಂಬರುವ ದಿನಗಳಲ್ಲಿ ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ(Rani Channamma Transport Corporation)ಎಂದು ನಾಮಕರಣ ಮಡಲಾಗುವುದು. ಕಿತ್ತೂರು ಭಾಗಕ್ಕೆ ಅನುಕೂಲವಾಗುವಂತೆ 520 ಕೋಟಿ ರೂಪಾಯಿ ವೆಚ್ಚದ ಚನ್ನವೃಷಭೇಂದ್ರ ನೀರಾವರಿ ಯೋಜನೆಗೂ ಅಗತ್ಯ ಅನುದಾನ ನೀಡಲಾಗುವುದು ಎಂದರು
ಕೋಟೆಯ ಆವರಣದಲ್ಲಿ ಇತಿಹಾಸದ ಮಹತ್ವ ಸಾರಲು ಅನಾವರಣಗೊಳಿಸಲು ದೃಶ್ಯಕಾವ್ಯ ರೂಪದ “ಫ್ರೀಡಂ ಪಾರ್ಕ್” ನಿರ್ಮಿಸಬೇಕು ಎಂಬ 40 ಕೋಟಿ ರೂಪಾಯಿ ವೆಚ್ಚದಲ್ಲಿ ಬೇಡಿಕೆಯನ್ನು ಶಾಸಕರು ಇಟ್ಟಿದ್ದು ಈ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು. ಈ ಬಗ್ಗೆ ತಕ್ಷಣವೇ ಸರಕಾರಿ ಆದೇಶವನ್ನೂ ಮಾಡಲಾಗುವುದು ಎಂದರು.
ಮೊದಲ ಬಾರಿಗೆ ಕಿತ್ತೂರಿನ ಸ್ವಾಭಿಮಾನದ ನೆಲಕ್ಕೆ ಬಂದಿದ್ದೇನೆ. ಈ ನೆಲದ ಕಿಚ್ಚು ಮತ್ತು ಸಂಸ್ಕೃತಿಗೆ ಗೌರವ ಸಲ್ಲಿಸಲು ಬಂದಿರುವೆ. ಚನ್ನಮ್ಮ ಕೇವಲ ಇತಿಹಾಸವಲ್ಲ, ಪ್ರತಿಯೊಂದು ಪೀಳಿಗೆಗೂ ಸ್ವಾಭಿಮಾನದ ಪಾಠ. ಆಕೆಯ ಸಾಹಸ ಹಾಗೂ ತ್ಯಾಗ ನಮಗೆ ಸದಾ ಸ್ಫೂರ್ತಿ ಎಂದರು.
ಕಿತ್ತೂರನ್ನು ಸಮಗ್ರ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಮತ್ತು ಐತಿಹಾಸಿಕ ಕೋಟೆಯನ್ನು ಮರುಸೃಷ್ಟಿಸಬೇಕು ಎಂಬ ಸ್ಥಳೀಯ ಶಾಸಕರ ಬೇಡಿಕೆಗೆ ಸ್ಪಂದಿಸಿದ ಅವರು, ಅಧಿಕಾರ ಸಿಕ್ಕಿರುವುದು ಆಳಲು ಅಲ್ಲ, ಜನರ ಸೇವೆ ಮಾಡಲು. ಈ ಭಾಗದ ಬಹುದಿನಗಳ ಬೇಡಿಕೆಯಾದ ವೃಷಭೇಂದ್ರ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ 500 ಕೋಟಿ ರೂ. ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಸಿದ್ದರಾಮಯ್ಯ(Siddaramaiah) ಹಾಗೂ ನಾನು ಸೇರಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದೆವು. ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಜನರ ಬದುಕನ್ನು ಬದಲಾಯಿಸುತ್ತಿವೆ. ಅಧಿಕಾರಕ್ಕೆ ಬಂದು ಮೂರು ವರ್ಷಗಳಿಂದ ಬಡವರ ಮತ್ತು ಮಹಿಳೆಯರ ಸಬಲೀಕರಣಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ದ್ವೇಷ ರಾಜಕಾರಣದಿಂದ ಏನೂ ಸಿಗುವುದಿಲ್ಲ; ಜನರ ಮೇಲಿನ ಪ್ರೀತಿಯಿಂದ ಮಾತ್ರ ನಿಜವಾದ ಜನಸೇವೆ ಸಾಧ್ಯ ಎಂದರು.
“ರಾಮಾಯಣದಲ್ಲಿ ರಾಮನ ಪಾತ್ರಕ್ಕಿಂತ ಸೀತೆಯ ತ್ಯಾಗದ ಪಾತ್ರ ಅತ್ಯಂತ ದೊಡ್ಡದು ಎಂದು ನಾನು ನಂಬುತ್ತೇನೆ. ಕಿತ್ತೂರು ಚನ್ನಮ್ಮನಂತೆಯೇ ಸೀತೆಯ ತ್ಯಾಗವೂ ಸ್ಫೂರ್ತಿದಾಯಕ” ಎಂದ ಅವರು, ಸರ್ಕಾರದ ಜನಪರ ಕೆಲಸಗಳಿಗೆ ನಾಡಿನ ಮಠಾಧೀಶರ ಮತ್ತು ಪೂಜ್ಯ ಶ್ರೀಗಳ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸಿದರು.
