ನವದೆಹಲಿ: ಉದ್ಯೋಗಿಗಳಿಗೆ ತಿಂಗಳಿಗೆ ಎರಡು ಬಾರಿ ಸಂಬಳ (Salary) ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಶಾರ್ಕ್ ಟ್ಯಾಂಕ್ ಇಂಡಿಯಾ ತೀರ್ಪುಗಾರ ಹಾಗೂ ಶಾದಿ ಡಾಟ್ ಕಾಂ (Shaadi.com) ಸಂಸ್ಥಾಪಕ ಅನುಪಮ್ ಮಿತ್ತಲ್ (Anupam Mittal) ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಲಿಂಕ್ಡ್ಇನ್‌ನಲ್ಲಿ ಬರೆದುಕೊಂಡಿರುವ ಅವರು, ಮುಂದಿನ ತಿಂಗಳಲ್ಲಿ ಸಂಬಳ ನೀಡುವ ಬ್ರಿಟಿಷರ ಕಾಲದ ಪದ್ಧತಿಗೆ ಈಗ ಅಂತ್ಯ ಹಾಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್‌ಮಾರುಕಟ್ಟೆಯಲ್ಲಿ ಸೂರ್ಯವಂಶಿ ಹವಾ: ಜಾಹೀರಾತು ಕಂಪನಿಗಳಿಂದ ‘ಐಪಿಎಲ್ ಹೀರೋʼಗೆ ಭಾರೀ ಬೇಡಿಕೆ
ಸಾಮಾನ್ಯವಾಗಿ ಉದ್ಯೋಗಿಗಳು ಒಂದು ತಿಂಗಳು ಕೆಲಸ ಮಾಡಿದ ಬಳಿಕ ಮುಂದಿನ ತಿಂಗಳ ಮೊದಲ ವಾರದಲ್ಲಿ ಸಂಬಳ ಪಡೆಯುತ್ತಾರೆ. ಆದರೆ ಈ ವ್ಯವಸ್ಥೆಯಿಂದ ಹಲವರಿಗೆ ಇಎಂಐ ಪಾವತಿ, ಮನೆ ಬಾಡಿಗೆ ಹಾಗೂ ಇತರೆ ಖರ್ಚುಗಳನ್ನು ನಿರ್ವಹಿಸಲು ತೊಂದರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೆಲವರಿಗೆ ಒಂದು ವಾರ ತಡವಾಗಿ ಸಂಬಳ ಬರುವುದು ದೊಡ್ಡ ಸಮಸ್ಯೆಯಾಗದಿರಬಹುದು. ಆದರೆ ಹೆಚ್ಚಿನ ಜನರಿಗೆ ಅದು ಇಎಂಐ ಬೌನ್ಸ್ ಆಗಲು, ಬಾಡಿಗೆ ಪಾವತಿಯಲ್ಲಿ ವಿಳಂಬವಾಗಲು ಅಥವಾ ಸಾಲದ ಬಲೆಗೆ ಸಿಲುಕಲು ಕಾರಣವಾಗಬಹುದು ಎಂದು ಅನುಪಮ್ ಹೇಳಿದ್ದಾರೆ.
ತಮ್ಮ ಸಂಸ್ಥೆ ಶಾದಿ ಡಾಟ್ ಕಾಂನಲ್ಲಿ ಕೆಲ ವರ್ಷಗಳ ಹಿಂದೆ ಸಂಬಳ ಪಾವತಿ ವಿಧಾನವನ್ನು ಬದಲಾಯಿಸಲಾಗಿತ್ತು. ಮುಂದಿನ ತಿಂಗಳ ಬದಲು ಅದೇ ತಿಂಗಳ ಕೊನೆಯಲ್ಲಿ ಸಂಬಳ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ, ತಿಂಗಳಿಗೆ ಎರಡು ಬಾರಿ ಅಂದರೆ 15 ಮತ್ತು 30ನೇ ತಾರೀಖಿನಂದು ಸಂಬಳ ನೀಡಿದರೆ ಉದ್ಯೋಗಿಗಳ ಹಣಕಾಸಿನ ಒತ್ತಡ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಂತ್ರಜ್ಞಾನ ಅಭಿವೃದ್ಧಿಯಾಗಿರುವ ಈ ಕಾಲದಲ್ಲಿ ತಿಂಗಳಿಗೆ ಎರಡು ಬಾರಿ ಸಂಬಳ ನೀಡುವುದು ಕಷ್ಟದ ಕೆಲಸವಲ್ಲ. ಇದರಿಂದ ಉದ್ಯೋಗಿಗಳಿಗೆ ನೆರವಾಗುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳೂ ಹೆಚ್ಚಾಗಲಿವೆ ಎಂದು ಅನುಪಮ್ ಮಿತ್ತಲ್ ಹೇಳಿದ್ದಾರೆ.
ಅನುಪಮ್ ಮಿತ್ತಲ್ 2021ರಿಂದ ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವು 103ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರೀ ಬೆಂಕಿ – ವಿದೇಶಿಯರು ಸೇರಿ 21 ಮಂದಿ ಸಾವು
