– ಮನೆಯಿಂದಲೇ ಫ್ಯಾನ್ ತರುತ್ತಿದ್ದಾರೆ ಸಂಬಂಧಿಕರು
– ಇಲಾಖೆಗಳ ಮಧ್ಯೆ ಸಮನ್ವಯತೆ ಕೊರತೆಯಿಂದ ಕಳ್ಳತನ
ಗದಗ: ಜಿಲ್ಲಾ ಕೇಂದ್ರ ಗದಗ(Gadag) ನಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಭದ್ರತೆಯಿಲ್ಲದ ಕಾರಣ ಕಳ್ಳರು ಸರಣಿ ಕಳ್ಳತನ ನಡೆಸುತ್ತಿದ್ದು, ರೋಗಿಗಳು(Patient) ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ದುಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ(Government Maternity and Children Hospital) ಒಂದೇ ತಿಂಗಳ ಅಂತರದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಕಳ್ಳತನವಾಗಿದ್ದು (Theft) ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಇದೇ ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಪೈಪ್‌ಗಳನ್ನು ಕಳ್ಳತನ ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ಆಸ್ಪತ್ರೆಯ ಸೆಂಟ್ರಲೈಸ್ಡ್ ಎಸಿಯ (Centralized AC) ಒಟ್ಟು 8 ಔಟ್‌ಡೋರ್ ಯುನಿಟ್‌ಗಳ ಒಳಗಿನ ತಾಮ್ರದ (ಕಾಪರ್) ಪೈಪ್‌ಗಳನ್ನು ಕಳ್ಳರು ಕತ್ತರಿಸಿ ಪರಾರಿಯಾಗಿದ್ದಾರೆ.

ತಾಮ್ರದ ಪೈಪ್‌ಗಳನ್ನು ಕತ್ತರಿಸಿದ್ದರಿಂದ ಆಸ್ಪತ್ರೆಯ ಎಸಿ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಆಸ್ಪತ್ರೆಯಲ್ಲಿ ಪ್ರತಿದಿನ ನೂರಾರು ಮಹಿಳೆಯರು ಹಾಗೂ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಹತ್ತಾರು ಗರ್ಭಿಣಿಯರ ಹೆರಿಗೆಯಾಗುತ್ತಿತ್ತು.
ಎಸಿ ಸಪ್ಲೈ ಬಂದ್ ಆಗಿರುವ ಕಾರಣ ಆಪರೇಷನ್ ಥಿಯೇಟರ್ (Operation Theatre) ಅನ್ನು ಸದ್ಯಕ್ಕೆ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆಪರೇಷನ್ ಮಾಡಲು ಸಾಧ್ಯವಾಗದ ಕಾರಣ ರೋಗಿಗಳನ್ನು ಅನಿವಾರ್ಯವಾಗಿ ಜಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಜಿಹಾದಿ ಸಂಚು ಬಯಲು: ರಾಮಮಂದಿರ ಸ್ಫೋಟಿಸಲು ಸ್ಕೆಚ್, ಶಸ್ತ್ರಾಸ್ತ್ರ ಹಿಡಿದು ಫೋಟೋಶೂಟ್
ವಾರ್ಡ್‌ಗಳಲ್ಲಿ ಎಸಿ ಇಲ್ಲದೆ ಸೆಖೆಯಿಂದಾಗಿ ಬಾಣಂತಿಯರು ಮತ್ತು ರೋಗಿಗಳು ಪರದಾಡುವಂತಾಗಿದೆ. ರೋಗಿಗಳ ಪರಿಸ್ಥಿತಿಯನ್ನು ನೋಡಲಾಗದೇ ಅವರ ಸಂಬಂಧಿಕರು ಮನೆಯಿಂದಲೇ ಟೇಬಲ್ ಫ್ಯಾನ್‌ಗಳನ್ನು ಹೊತ್ತು ತರುತ್ತಿದ್ದಾರೆ. ಆಸ್ಪತ್ರೆಯ ಒಳಗಿನ ಈ ದುಸ್ಥಿತಿ ಹಾಗೂ ಸರಣಿ ಕಳ್ಳತನದ ಪ್ರಕರಣಗಳಿಂದಾಗಿ ಹೆರಿಗೆಗೆ ಬರುವ ಗರ್ಭಿಣಿಯರು ಮತ್ತು ರೋಗಿಗಳಲ್ಲಿ ಆತಂಕ ಮೂಡಿದೆ.
ಈ ಆಸ್ಪತ್ರೆಯಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳಾಗಲಿ ಅಥವಾ ಸೂಕ್ತ ಭದ್ರತಾ ಸಿಬ್ಬಂದಿಯಾಗಲಿ ಇಲ್ಲದಿರುವುದೇ ಕಳ್ಳರ ಪಾಲಿಗೆ ವರವಾಗಿದೆ. ಇದಕ್ಕೆ ಇಲಾಖೆಗಳ ನಡುವಿನ ಆಡಳಿತಾತ್ಮಕ ಗೊಂದಲವೇ ಕಾರಣ ಎನ್ನಲಾಗಿದೆ.

ಈ ಮೊದಲು ಈ ಆಸ್ಪತ್ರೆಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಟ್ಟಿತ್ತು. ಸದ್ಯ ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಳಪಡಿಸುವ ಹಸ್ತಾಂತರ (Transfer) ಪ್ರಕ್ರಿಯೆ ನಡೆಯುತ್ತಿದೆ. ಈ ಹಸ್ತಾಂತರದ ಗೊಂದಲದಿಂದಾಗಿ ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳಲು ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ
ಅಧಿಕಾರಿಗಳ ಈ ನಿರ್ಲಕ್ಷ್ಯದ ಧೋರಣೆಯಿಂದಾಗಿ ಕಳ್ಳರು ರಾಜಾರೋಷವಾಗಿ ಆಸ್ಪತ್ರೆಯ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಸ್ಥಳೀಯ ಸಾರ್ವಜನಿಕರು ಹಾಗೂ ರೋಗಿಗಳ ಕುಟುಂಬದವರು ತಕ್ಷಣವೇ ಆಸ್ಪತ್ರೆಗೆ ಭದ್ರತೆ ಒದಗಿಸಿ ಎಸಿ ವ್ಯವಸ್ಥೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.
