– ಪೇಂಟಿಂಗ್ ಕೆಲಸದ ಸೋಗಿನಲ್ಲಿ ಅಡಗಿದ್ದ ಶಂಕಿತ ಉಗ್ರ
ದಾವಣಗೆರೆ: ಬನ್ನಿಕೋಡು ಗ್ರಾಮದಲ್ಲಿ ಸೆರೆಯಾಗಿದ್ದ ಶಂಕಿತ ಉಗ್ರ ಅಯೋಧ್ಯೆ ರಾಮಮಂದಿರ (Ayodhya Ram Mandir) ಸ್ಫೋಟಿಸಲು ಸ್ಕೆಚ್ ಹಾಕಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ (Pakistan) ಮೂಲದ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರನೊಬ್ಬನನ್ನು ಕೇಂದ್ರ ಗುಪ್ತಚರ ಇಲಾಖೆ ಮತ್ತು ದಾವಣಗೆರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಿನ್ನೆ(ಜೂನ್ 23) ಯಶಸ್ವಿಯಾಗಿ ಬಂಧಿಸಿದ್ದರು.
ಉತ್ತರ ಪ್ರದೇಶ ಮೂಲದ ಸುಹೇಲ್ (20) ಬಂಧಿತ ಆರೋಪಿ. ಈತ ಹರಿಹರದ ಬನ್ನಿಕೋಡು ಗ್ರಾಮದಲ್ಲಿ ಅಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಈತನ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದೆ.
ದೇಶದಲ್ಲಿ ದೊಡ್ಡ ಮಟ್ಟದ ಸಮಾಜಘಾತಕ ಚಟುವಟಿಕೆಗಳನ್ನು ಈತನ ಗ್ಯಾಂಗ್ ಯೋಜನೆ ರೂಪಿಸಿದ್ದ ವಿಚಾರ ಲಭ್ಯವಾಗಿದೆ. ನಾನು ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ಬಯಸಿದ್ದೆ ಎಂದು ಆತ ಪೊಲೀಸರ ಮುಂದೆ ಒಪ್ಪಿಕೊಂಡಿರುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಮೂಲತಃ ಉತ್ತರ ಪ್ರದೇಶದವನಾದ ಸುಹೇಲ್, ಕಳೆದ 15 ದಿನಗಳ ಹಿಂದೆಯಷ್ಟೇ ಹರಿಹರಕ್ಕೆ ಬಂದಿದ್ದನು. ಯಾರೂ ತನ್ನನ್ನು ಶಂಕಿಸಬಾರದು ಎಂಬ ಕಾರಣಕ್ಕೆ ಹರಿಹರದ ಪಕ್ಕದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಾ ಬನ್ನಿಕೋಡು ಗ್ರಾಮದಲ್ಲಿ ತಂಗಿದ್ದನು.
ಜೂನ್ 3 ರಂದು ದಾವಣಗೆರೆಯಲ್ಲಿ ಬಂಧನಕ್ಕೊಳಗಾಗಿದ್ದ ಇತರ ಕೆಲವು ಶಂಕಿತ ಉಗ್ರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ಈ ಸುಹೇಲ್ ಹೆಸರು ಬೆಳಕಿಗೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೆಆರ್ ಪುರಂ ತ್ರಿವಳಿ ಹತ್ಯೆ ಕೇಸ್ – ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ
ವಾಟ್ಸಪ್‌ನಲ್ಲಿ ಪಾಕ್ ನಂಟು
ಸುಹೇಲ್‌ನ ಮೊಬೈಲ್ ಡೇಟಾವನ್ನು ರಿಟ್ರೀವ್ ಮಾಡಿದಾಗ ಆತನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪಾಕಿಸ್ತಾನದ ಲಿಂಕ್‌ಗಳು ಪತ್ತೆಯಾಗಿವೆ. ಈತ ಇನ್‌ಸ್ಟಾಗ್ರಾಮ್ (Instagram) ಚಾಟ್‌ಗಳ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದನು.
ಈತನ ಮೊಬೈಲ್‌ನಲ್ಲಿ ಪಾಕಿಸ್ತಾನದ ಕೋಡ್ (+92) ಇರುವ ನಂಬರ್ ಒಂದನ್ನು ರಾಣಾ ಭಾಯ್ ಎಂದು ಸೇವ್ ಮಾಡಿಕೊಳ್ಳಲಾಗಿತ್ತು. ಇದರ ಜೊತೆಗೆ ದೇಶವಿರೋಧಿ ಚಟುವಟಿಕೆ ನಡೆಸುವ MEMON & JUTTU- 333 ಹಾಗೂ RANABHAI 333’ಎಂಬ ಗ್ರೂಪ್‌ಗಳಲ್ಲಿ ಈತ ಸಕ್ರಿಯ ಸದಸ್ಯನಾಗಿದ್ದನು. ಅಷ್ಟೇ ಅಲ್ಲದೇ ಉಗ್ರರನ್ನು ಹೋಲುವ ರೀತಿಯಲ್ಲಿ, ಕೈಯಲ್ಲಿ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು (Weapons) ಹಿಡಿದುಕೊಂಡು ಈತ ತೆಗೆಸಿಕೊಂಡಿದ್ದ ಫೋಟೋಗಳು ಮೊಬೈಲ್‌ನಲ್ಲಿ ಲಭ್ಯವಾಗಿವೆ. ಇದನ್ನೂ ಓದಿ: ಆಸ್ತಿಗಾಗಿ ಮಗನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಮಗಳು
ಶಂಕಿತ ಉಗ್ರನ ಬಂಧನದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪ್ರಾಥಮಿಕ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ಕೆಲಸ ಹುಡುಕಿಕೊಂಡು ದಾವಣಗೆರೆಗೆ ಬಂದಿದ್ದನು. ಪ್ರಾಥಮಿಕ ತನಿಖೆಯ ಪ್ರಕಾರ ಆತ ಚಾಟ್ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ. ಆತನ ಮೊಬೈಲ್‌ನಲ್ಲಿ ಕೆಲವು ಆಕ್ಷೇಪಾರ್ಹ ವಿಚಾರಗಳು ಪತ್ತೆಯಾಗಿವೆ. ಸದ್ಯ ಆರೋಪಿ ಪೊಲೀಸರ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ. ತನಿಖೆಯ ನಂತರ ಮತ್ತಷ್ಟು ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ತಿಳಿಸಿದ್ದಾರೆ.
