– ಟಾರ್ಗೆಟ್ ಲಿಸ್ಟಲ್ಲಿ ಹರಿಯಾಣ ಡಾಬಾ, ಮಿಲಿಟರಿ ಕ್ಯಾಂಪ್
– ಪಾಕಿಸ್ತಾನಕ್ಕೆ ಫೋಟೋಗಳ ರವಾನೆ
ನವದೆಹಲಿ: ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ದೇಶದ ವಿವಿಧೆಡೆ ಭಯೋತ್ಪಾದಕ ದಾಳಿಗಳನ್ನು (Terror Attacks) ನಡೆಸಲು ಪಾಕ್‌ನ ಐಎಸ್‌ಐ ಯೋಜಿಸಿದ್ದ ಸಂಚನ್ನು ದೆಹಲಿ ಪೊಲೀಸ್ ವಿಶೇಷ ಘಟಕ (Delhi Police Special Cell) ಬಯಲಿಗೆಳೆದಿದೆ. ಬಂಧಿತ ಆರೋಪಿ ವಿಚಾರಣೆ ಸಮಯದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಶಹಜಾದ್ ಭಟ್ಟಿ ಮಾಡ್ಯೂಲ್‌ಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದಕ ಪಿತೂರಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.
ಪಾಕ್ ಬೆಂಬಲಿತ ಮ್ಯಾಡ್ಯೂಲ್‌ನ ಪ್ರಮುಖ ಗುರಿಗಳಲ್ಲಿ ದೆಹಲಿಯಲ್ಲಿರೋ ಐತಿಹಾಸಿಕ ದೇವಾಲಯವು (historic Delhi temple) ಸೇರಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಬಂಧಿತ ಆರೋಪಿಗಳಲ್ಲಿ ಒಬ್ಬ ದಾಳಿ ನಡೆಸಲು ಪ್ಲ್ಯಾನ್ ರೂಪಿಸುವುದಕ್ಕೆ ಮುನ್ನ ದೆಹಲಿಯ ದೇವಾಲಯಕ್ಕೆ ಹಾಗೂ ಹಿಸಾರ್‌ನಲ್ಲಿರುವ ಮಿಲಿಟರಿ ಕ್ಯಾಂಪ್‌ಗೆ ಭೇಟಿ ನೀಡಿದ್ದ. ಸಂಪೂರ್ಣ ಸ್ಥಳ ವೀಕ್ಷಣೆ ನಡೆಸಿ, ಪಾಕ್ ಮೂಲದ ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್‌ಗೆ ಫೋಟೋಗಳನ್ನೂ ಕಳುಹಿಸಿದ್ದ. ದೇವಸ್ಥಾನದ ಮೇಲೆ ದಾಳಿ ನಡೆಸುವುದಕ್ಕೆ ಮುನ್ನ ಮೊದಲು ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿ ಮೇಲೆ ಗುಂಡು ಹಾರಿಸುವುದು ಕೂಡ ಉಗ್ರರ ಪ್ಲ್ಯಾನ್‌ನಲ್ಲಿತ್ತು ಎಂದು ಹೇಳಲಾಗಿದೆ.

ಟಾರ್ಗೆಟ್ ಲಿಸ್ಟ್‌ನಲ್ಲಿ ಹರಿಯಾಣದ ಪ್ರಸಿದ್ಧ ಡಾಬಾ
ದೆಹಲಿ ಟೆಂಪಲ್ ಮಾತ್ರವಲ್ಲದೇ, ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಹರಿಯಾಣದ ಜನಪ್ರಿಯ ಡಾಬಾ (Haryana Dhaba) ಕೂಡ ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿತ್ತು. ಪ್ರತಿದಿನ ಸಾವಿರಾರು ಜನ ಈ ಡಾಬಾಗೆಗೆ ಭೇಟಿ ನೀಡುತ್ತಾರೆ. ಹಾಗಾಗಿ ಹ್ಯಾಂಡ್ ಗ್ರೆನೇಡ್ ಬಳಸಿ ದಾಳಿ ನಡೆಸಿ, ಕನಿಷ್ಠ ನೂರಾರು ಜನರನ್ನು ಕೊಲ್ಲಬೇಕೆಂಬುದು ಈ ದಾಳಿಯ ಉದ್ದೇಶವಾಗಿತ್ತು.
ಅಷ್ಟೇ ಅಲ್ಲ, ಹಿಸ್ಸಾರ್‌ನಲ್ಲಿರುವ ಮಿಲಿಟರಿ ಕ್ಯಾಂಪ್ ಮೇಲೆ ದಾಳಿ ನಡೆಸುವುದು ಮತ್ತು ಉತ್ತರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿರುವ ಕೆಲ ಅಧಿಕಾರಿಗಳನ್ನ ಹತ್ಯೆಗೈಯುವುದು ಉಗ್ರರ ಸಂಚಾಗಿತ್ತು ಅನ್ನೋದು ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ದೆಹಲಿ ಪೊಲೀಸ್ ವಿಶೇಷ ಘಟಕವು, ಗುರುವಾರ ಕೇಂದ್ರದ ತನಿಖಾ ಸಂಸ್ಥೆಗಳೊಂದಿಗೆ ದೆಹಲಿ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಶಹಜಾದ್ ಭಟ್ಟಿ ಮಾಡ್ಯೂಲ್‌ಗೆ ಸಂಬಂಧಿಸಿದ 9 ಆರೋಪಿಗಳನ್ನ ಬಂಧಿಸಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಅಪರಾಧ ಸಾಮಗ್ರಿಗಳನ್ನ ವಶಪಡಿಸಿಕೊಳ್ಳಲಾಗಿತ್ತು. ನಂತರ ಆರೋಪಿಗಳ ವಿಚಾರಣೆ ನಡೆಸುವ ಸಮಯದಲ್ಲಿ ಭಯೋತ್ಪಾದಕ ಸಂಚು ಬಯಲಾಗಿದೆ.

