ಇಸ್ಲಾಮಾಬಾದ್: ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಸದ್ಯ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಯುವ ಆಟಗಾರನ ಅತ್ಯುತ್ತಮ ಪ್ರದರ್ಶನಕ್ಕೆ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಪಾಕಿಸ್ತಾನ್ ಸೂಪರ್ ಲೀಗ್ ಪೇಶಾಚರ್ ಝಲ್ಮಿ ತಂಡದ ಮಾಲೀಕ ಜಾವೇದ್ ಅಫ್ರಿದಿ, ವೈಭವ್ ಸೂರ್ಯವಂಶಿಯನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ.
ಜಾವೇದ್ ಅಫ್ರಿದಿ ಹೇಳಿದ್ದೇನು?
15 ವರ್ಷದ ವೈಭವ್ ಸೂರ್ಯವಂಶಿಯ 97 ರನ್‌ಗಳ ಅದ್ಭುತ ಪ್ರದರ್ಶನ ನೋಡಿ ನಾನು ನಿಜಕ್ಕೂ ಬೆರಗಾಗಿದ್ದೆ! ಅವರ ಆಟದ ಶೈಲಿ ಉತ್ತಮವಾಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರತಿಭೆಗಳು ಅಪರೂಪ ಮತ್ತು ವಿಶೇಷ. ನೀನು ಭವಿಷ್ಯದ ಸೂಪರ್‌ಸ್ಟಾರ್ ಆಗುವ ನಿರೀಕ್ಷೆಯಿದೆ! ಇನ್ನೂ ಎತ್ತರದ ಮಟ್ಟಕ್ಕೆ ಬೆಳಿ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: New Six Machine – ಸೂರ್ಯವಂಶಿಯನ್ನು ಹಾಡಿ ಹೊಗಳಿದ ಕ್ರಿಸ್ ಗೇಲ್
ವೈಭವ್ ಸೂರ್ಯವಂಶಿಯಂತಹ ಯುವ ಪ್ರತಿಭೆಗಳಿಗೆ ಐಪಿಎಲ್ ಉತ್ತಮ ವೇದಿಕೆಯಾಗಿದೆ. ಅದೇ ರೀತಿ ಪಾಕಿಸ್ತಾನದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನಮ್ಮ ಪಿಎಸ್‌ಎಲ್‌ನಂತಹ ಲೀಗ್‌ಗಳು ತುಂಬಾ ಮುಖ್ಯವಾಗಿವೆ. ಪಾಕಿಸ್ತಾನದ ಯುವ ಆಟಗಾರರು ವೈಭವ್‌ನಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಅವಕಾಶಗಳನ್ನು ಪಡೆಯಲು ಇನ್ನೂ ಹೆಚ್ಚಿನ ವೇದಿಕೆ ಒದಗಿಸಿ ಅವಕಾಶ ಮಾಡಿಕೊಡಬೇಕಿದೆ ಎಂದು ಬರೆದುಕೊಂಡಿದ್ದಾರೆ.
ದಾಖಲೆಗಳೆಲ್ಲಾ ಉಡೀಸ್:
ವೈಭವ್ ಸೂರ್ಯವಂಶಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಎರಡೇ ವರ್ಷಗಳಲ್ಲಿ ಹಲವು ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಪ್ರಸ್ತುತ 19ನೇ ಆವೃತ್ತಿಯಲ್ಲಿ 15 ಪಂದ್ಯಗಳನ್ನಾಡಿ 242.85ರ ಸ್ಟ್ರೈಕ್‌ರೇಟ್‌ನಲ್ಲಿ 680 ರನ್ ಕಲೆಹಾಕುವ ಮೂಲಕ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ (ಆರೇಂಜ್ ಕ್ಯಾಪ್ ಹೋಲ್ಡರ್) ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೈಲಿಗಲ್ಲುಗಳ ಬೆನ್ನತ್ತಿದರೆ ವೃತ್ತಿಜೀವನ ಹಾಳಾಗುತ್ತೆ, ಶತಕ ಮಿಸ್ ಆಗಿದ್ದಕ್ಕೆ ಬೇಸರವಿಲ್ಲ: ಸೂರ್ಯವಂಶಿ
ವೈಭವ್ ಸೂರ್ಯವಂಶಿ ಕಳೆದ ಹೈದರಾಬಾದ್ ವಿರುದ್ಧದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಪಂದ್ಯದಲ್ಲಿ ಅವರು ಕೇವಲ 3 ರನ್‌ಗಳಿಂದ ಶತಕ ವಂಚಿತರಾಗಿದ್ದರು. ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಕೂಡ 15ರ ಹುಡುಗನಿಗೆ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಳೆದ ಎರಡು ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರದರ್ಶನದಲ್ಲಿ ವೈಭವ್ ಸೂರ್ಯವಂಶಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
