ಇಸ್ಲಾಮಾಬಾದ್: ಆರ್ಥಿಕ ಹಾಗೂ ರಾಜಕೀಯ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನದಲ್ಲಿ (Pakistan) ಶಹಬಾಸ್ ಶರೀಫ್ ನೇತೃತ್ವದ ಸರ್ಕಾರದ ಆಂತರಿಕ ಭಿನ್ನಾಭಿಪ್ರಾಯ ಬೀದಿಗೆ ಬಂದಿದೆ.
ದೇಶದ ಗೃಹ ಸಚಿವ ಮೊಹ್ಸಿನ್ ನಖ್ವಿ (Mohsin Naqvi) ಹಾಗೂ ಪ್ರಧಾನಿ ಶಹಬಾಜ್ ಶರೀಫ್ (Shehbaz Sharif) ಅವರ ಆಡಳಿತ ಯಂತ್ರದ ನಡುವೆ ತೀವ್ರ ಭೇದ-ಅಭಿಪ್ರಾಯಗಳು ಮೂಡಿದ್ದು, ಸರ್ಕಾರದ ಸ್ಥಿರತೆಗೆ ಭಾರೀ ಧಕ್ಕೆ ಉಂಟಾಗಿದೆ.
ಇತ್ತೀಚಿನ ದಿನಗಳಲ್ಲಿ ಸಚಿವ ಮೊಹ್ಸಿನ್ ನಖ್ವಿ ಅವರು ಸಚಿವ ಸಂಪುಟದ ಪ್ರಮುಖ ನಿರ್ಧಾರಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಮೊಹ್ಸಿನ್ ನಖ್ವಿ ಈಗ, ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವನ್ನು ಬಯಲಿಗೆಳೆಯುತ್ತೇನೆ. ನ್ಯಾಯಾಧೀಶರಿಂದ ಹಿಡಿದು ರಾಜಕಾರಣಿಗಳವರೆಗೆ ವ್ಯವಸ್ಥೆಯ ಪ್ರಮುಖ ಅಂಗಗಳೇ ಈ ಅಕ್ರಮದಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್(Asim Munir) ಅವರಿಗೆ ತೀರ ಆಪ್ತನಾಗಿರುವ ನಖ್ವಿ, “ಈ ಅಕ್ರಮಕ್ಕೆ ಕಾರಣರಾದ ಪ್ರತಿಯೊಬ್ಬ ವ್ಯಕ್ತಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪುನರುಚ್ಚರಿಸಿದ್ದಾರೆ.
🚨 After declaring Pakistan’s system “completely collapsed”, Mohsin Naqvi drops another bombshell.
“I don’t think there has ever been such a massive scam in the history of Pakistan, where judges, bureaucrats, politicians and bankers were all involved. For 21 years, money was… pic.twitter.com/FCIUWiiORM
— OsintTV 📺 (@OsintTV) August 3, 2026
ನಖ್ವಿ ಹೇಳಿದ್ದೇನು?
ನ್ಯಾಯಾಧೀಶರು, ಅಧಿಕಾರಿಗಳು, ರಾಜಕಾರಣಿಗಳು ಮತ್ತು ಬ್ಯಾಂಕರ್‌ಗಳು ಎಲ್ಲರೂ ಒಟ್ಟಾಗಿ ಭಾಗಿಯಾಗಿರುವ ಇಂತಹ ಬೃಹತ್ ಹಗರಣ ಪಾಕಿಸ್ತಾನದ ಇತಿಹಾಸದಲ್ಲೇ ಹಿಂದೆಂದೂ ನಡೆದಿದೆ ಎಂದು ನಾನು ಭಾವಿಸುವುದಿಲ್ಲ. ಕಳೆದ 21 ವರ್ಷಗಳಿಂದ ಇಲ್ಲಿ ನಿರಂತರವಾಗಿ ಲಂಚ ನೀಡಲಾಗಿದೆ ಮತ್ತು ಜನರು ಅದನ್ನು ಪಡೆದುಕೊಳ್ಳುತ್ತಲೇ ಬಂದಿದ್ದಾರೆ. ಇದಕ್ಕೆ ಹೊಣೆಗಾರರಾದ ಪ್ರತಿಯೊಬ್ಬರ ವಿರುದ್ಧವೂ ನಾವು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮುಖ್ಯಸ್ಥರೂ ಆಗಿರುವ ಗೃಹ ಸಚಿವ ಮೊಹ್ಸಿನ್ ನಖ್ವಿ, ಈ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಪ್ರಮುಖರ ಹೆಸರುಗಳನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಆದರೆ ಅವರ ಈ ನಿರಂತರ ಮತ್ತು ಸಂಚಲನಾತ್ಮಕ ಹೇಳಿಕೆಗಳು ಪಾಕಿಸ್ತಾನದಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಅಧಿಕಾರ ಬದಲಾವಣೆ ಅಥವಾ ರಾಜಕೀಯ ಸ್ಥಿತ್ಯಂತರ ಸಂಭವಿಸಲಿದೆಯೇ ಎಂಬ ಬಲವಾದ ಅನುಮಾನಗಳನ್ನು ಹುಟ್ಟುಹಾಕಿದೆ.

ಮುನೀರ್ ಪಾತ್ರವೇನು?
ಪಾಕಿಸ್ತಾನಿ ರಾಜಕೀಯದಲ್ಲಿ ಸೇನೆಯ ಹಸ್ತಕ್ಷೇಪ ಹೊಸದೇನಲ್ಲ. ಈ ಬೆಳವಣಿಗೆಯ ಬೆನ್ನಲ್ಲೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ (Asim Munir) ಅವರ ಪಾತ್ರ ಕುರಿತು ಚರ್ಚೆಗಳು ಕಾವು ಪಡೆದುಕೊಂಡಿವೆ. ಇದನ್ನೂ ಓದಿ: ಪಾಕ್‌ನಲ್ಲಿ ಅನಾಮಿಕ ವ್ಯಕ್ತಿಯ ಗುಂಡೇಟಿಗೆ 30ಕ್ಕೂ ಹೆಚ್ಚು ಉಗ್ರರ ಹತ್ಯೆ – ಒಪ್ಪಿಕೊಂಡ ಲಷ್ಕರ್ ಉಗ್ರ
ನಖ್ವಿ ಮತ್ತು ಪ್ರಧಾನಿ ಶಹಬಾಸ್ ಶರೀಫ್ ನಡುವಿನ ಈ ಶೀತಲ ಸಮರವು ವಾಸ್ತವವಾಗಿ ನಾಗರಿಕ ಸರ್ಕಾರ ಹಾಗೂ ಮಿಲಿಟರಿ ಶಕ್ತಿ ಕೇಂದ್ರದ ನಡುವಿನ ಸಂಘರ್ಷ ಎಂದು ವಿಶ್ಲೇಷಿಸಲಾಗುತ್ತಿದೆ.
ಆಡಳಿತಾರೂಢ ಮೈತ್ರಿಕೂಟದಲ್ಲಿ ಮೂಡಿರುವ ಈ ಬಿರುಕು ಶಹಬಾಸ್ ಶರೀಫ್ ಸರ್ಕಾರಕ್ಕೆ ಸಂಕಷ್ಟ ತಂದಿದೆ. ಪ್ರಮುಖ ಆಡಳಿತಾತ್ಮಕ ವಿಷಯಗಳು, ಕಾನೂನು ಸುವ್ಯವಸ್ಥೆ ಹಾಗೂ ಸಚಿವ ಸಂಪುಟದ ನಿರ್ಧಾರಗಳ ಅನುಷ್ಠಾನದಲ್ಲಿ ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿ ನಡುವಿನ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ಈ ಆಂತರಿಕ ಬಿಕ್ಕಟ್ಟು ಶಮನಗೊಳ್ಳದಿದ್ದರೆ ಪಾಕಿಸ್ತಾನದ ರಾಜಕೀಯ ಸ್ಥಿರತೆ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.

