-2025-26ರಲ್ಲಿ 92.35 ಕೋಟಿ ವೆಚ್ಚ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಲುಟೆನ್ಸ್ ಬಂಗಲೆ ವಲಯದಲ್ಲಿರುವ ಕೇಂದ್ರ ಸಚಿವರ ಅಧಿಕೃತ ನಿವಾಸಗಳ ದುರಸ್ತಿ, ನವೀಕರಣ ಹಾಗೂ ಪೀಠೋಪಕರಣಗಳಿಗೆ ಕಳೆದ 11 ವರ್ಷಗಳಲ್ಲಿ 547.68 ಕೋಟಿ ರೂ. ಹಾಗೂ 2025-26ನೇ ಸಾಲಿನಲ್ಲಿ ದಾಖಲೆಯ 92.35 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
2024-25ನೇ ಸಾಲಿನಲ್ಲಿ ಇದೇ ಉದ್ದೇಶಕ್ಕಾಗಿ 71.98 ಕೋಟಿ ರೂ. ಖರ್ಚಾಗಿತ್ತು. 2014-15ರಲ್ಲಿ 27.47 ಕೋಟಿ ರೂ. ವೆಚ್ಚವಾಗಿದ್ದರೆ, 11 ವರ್ಷಗಳಲ್ಲಿ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. 2014-15ರಿಂದ 2025-26ರವರೆಗೆ ಒಟ್ಟು 547.68 ಕೋಟಿ ರೂ. ಹಣವನ್ನು ಕೇಂದ್ರ ಲೋಕೋಪಯೋಗಿ ಇಲಾಖೆ ಮೂಲಕ ಸಚಿವರ ನಿವಾಸಗಳ ದುರಸ್ತಿ ಹಾಗೂ ನಿರ್ವಹಣೆಗೆ ವ್ಯಯಿಸಲಾಗಿದೆ. ಇದನ್ನೂ ಓದಿ: H1N1 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಆರೋಗ್ಯ ಇಲಾಖೆ ಹೈ ಅಲರ್ಟ್, ಆಸ್ಪತ್ರೆಗಳು ಸಂಪೂರ್ಣ ಸನ್ನದ್ಧ
2014ರಿಂದ 2019ರವರೆಗೆ ವಾರ್ಷಿಕ ಸರಾಸರಿ 26.78 ಕೋಟಿ ರೂ. ವೆಚ್ಚವಾಗಿತ್ತು. 2019ರಿಂದ 2024ರ ಅವಧಿಯಲ್ಲಿ ಈ ಸರಾಸರಿ ಸುಮಾರು 50 ಕೋಟಿ ರೂ.ಗೆ ಏರಿಕೆಯಾಯಿತು. ಬಳಿಕ 2024-25ರಲ್ಲಿ 71.98 ಕೋಟಿ ರೂ. ಹಾಗೂ 2025-26ರಲ್ಲಿ 92.35 ಕೋಟಿ ರೂ.ಗೆ ವೆಚ್ಚ ಹೆಚ್ಚಾಗಿದೆ.
ಲುಟೆನ್ಸ್ ಬಂಗಲೆ ವಲಯದ ಬಹುತೇಕ ಕಟ್ಟಡಗಳು 80ರಿಂದ 100 ವರ್ಷಗಳಷ್ಟು ಹಳೆಯವು. ಸೋರಿಕೆ, ಗೆದ್ದಲು ಬಾಧೆ, ಹಳೆಯ ವಿದ್ಯುತ್ ವ್ಯವಸ್ಥೆ, ಕೊಳವೆ ಮಾರ್ಗಗಳ ದೋಷ ಸೇರಿದಂತೆ ವಿವಿಧ ಸಮಸ್ಯೆಗಳಿಂದ ನಿರಂತರ ದುರಸ್ತಿ ಅಗತ್ಯವಾಗುತ್ತಿದೆ ಎಂದು ಸಿಪಿಡಬ್ಲ್ಯುಡಿ ಅಧಿಕಾರಿಗಳು ತಿಳಿಸಿದ್ದಾರೆ. ಹಣದುಬ್ಬರ ಹಾಗೂ ಹಳೆಯ ಕಟ್ಟಡಗಳ ಸವೆತವೂ ನಿರ್ವಹಣಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಡಿಕೆಶಿ – ಅದಾನಿ ಭೇಟಿ| ನಮ್ಮ ಹೋರಾಟ ಏಕಸ್ವಾಮ್ಯದ ವಿರುದ್ಧವೇ ಹೊರತು ಉದ್ಯಮಿಗಳ ವಿರುದ್ಧವಲ್ಲ: ಪವನ್ ಖೇರಾ
2025-26ರಲ್ಲಿ ಸುಮಾರು 70ರಿಂದ 72 ಸಚಿವರನ್ನು ಒಳಗೊಂಡ ಕೇಂದ್ರ ಸಚಿವ ಸಂಪುಟದ ಆಧಾರದ ಮೇಲೆ ಲೆಕ್ಕ ಹಾಕಿದರೆ, ಸಚಿವರ ನಿವಾಸಗಳ ದುರಸ್ತಿ ಮತ್ತು ನವೀಕರಣಕ್ಕೆ ಪ್ರತಿ ಸಚಿವರಿಗೆ ಸರಾಸರಿ 1.2 ಕೋಟಿ ರೂ. ವೆಚ್ಚವಾಗಿದೆ. ಆದರೆ ವಾಸ್ತವಿಕ ವೆಚ್ಚವು ಪ್ರತಿ ಬಂಗಲೆಯ ಸ್ಥಿತಿ ಮತ್ತು ಕೈಗೊಳ್ಳಲಾದ ಕಾಮಗಾರಿಯ ಆಧಾರದ ಮೇಲೆ ಬದಲಾಗುತ್ತದೆ.
ಆರ್‌ಟಿಐ ಮಾಹಿತಿಯ ಪ್ರಕಾರ, 2014-15ರಲ್ಲಿ 27.47 ಕೋಟಿ ರೂ., 2015-16ರಲ್ಲಿ 29.57 ಕೋಟಿ ರೂ., 2016-17ರಲ್ಲಿ 30.10 ಕೋಟಿ ರೂ., 2017-18ರಲ್ಲಿ 23.34 ಕೋಟಿ ರೂ., 2018-19ರಲ್ಲಿ 23.42 ಕೋಟಿ ರೂ., 2019-20ರಲ್ಲಿ 26.37 ಕೋಟಿ ರೂ. ವೆಚ್ಚವಾಗಿತ್ತು. 2020-21ರಲ್ಲಿ 53.87 ಕೋಟಿ ರೂ., 2021-22ರಲ್ಲಿ 40.84 ಕೋಟಿ ರೂ., 2022-23ರಲ್ಲಿ 73.86 ಕೋಟಿ ರೂ., 2023-24ರಲ್ಲಿ 54.52 ಕೋಟಿ ರೂ., 2024-25ರಲ್ಲಿ 71.98 ಕೋಟಿ ರೂ. ಹಾಗೂ 2025-26ರಲ್ಲಿ 92.35 ಕೋಟಿ ರೂ. ಖರ್ಚಾಗಿದೆ.
ಈ ಬಂಗಲೆ ವಲಯವನ್ನು ನವದೆಹಲಿಯಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ 1912ರಿಂದ 1930ರ ನಡುವೆ ನಿರ್ಮಿಸಲಾಗಿತ್ತು. ಸ್ವಾತಂತ್ರ್ಯಾನಂತರ ಇವುಗಳನ್ನು ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಸಚಿವರ ಅಧಿಕೃತ ನಿವಾಸಗಳಾಗಿ ಬಳಸಲಾಗುತ್ತಿದೆ. ಆದರೆ ಆರ್‌ಟಿಐಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಚಿವರಲ್ಲದ ಸದಸ್ಯರ ನಿವಾಸಗಳಿಗೆ ಹಾಗೂ ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರ ಕಚೇರಿಗಳಿಗೆ ಇದೇ ಅವಧಿಯಲ್ಲಿ ಖರ್ಚಾದ ಮೊತ್ತದ ವಿವರಗಳನ್ನು ಸಿಪಿಡಬ್ಲ್ಯುಡಿ ನೀಡಿಲ್ಲ.ಇದನ್ನೂ ಓದಿ: ಯಶ್ ಭೇಟಿಯಾಗಿ ʻಟಾಕ್ಸಿಕ್ʼಗೆ ಶುಭ ಹಾರೈಸಿದ ಬಾಲಿವುಡ್ ದಿಗ್ಗಜ ಅನುಪಮ್ ಖೇರ್
