ಭಾರತ್ ಸ್ಟೇಜ್-6 (ಬಿಎಸ್-6) ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸದ, ದೆಹಲಿಯ ಹೊರಗೆ ನೋಂದಣಿಯಾಗಿರುವ ವಾಹನಗಳಿಗೆ ರಾಜಧಾನಿ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈ ಕ್ರಮದಿಂದ ನೆರೆಯ ರಾಷ್ಟ್ರೀಯ ರಾಜಧಾನಿ ವಲಯದ (NCR) 10 ಲಕ್ಷಕ್ಕೂ ಹೆಚ್ಚು ವಾಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದನ್ನೂ ಓದಿ: ದೆಹಲಿಯ ಐತಿಹಾಸಿಕ ನಾರ್ತ್ ಬ್ಲಾಕ್ನಲ್ಲಿ ಬೆಂಕಿ
ಈ ನಿರ್ಬಂಧವು ನವೆಂಬರ್ 1ರಿಂದ ಜನವರಿ 31ರವರೆಗೆ ಜಾರಿಯಲ್ಲಿರಲಿದೆ. ದೆಹಲಿಗೆ ಪ್ರತಿನಿತ್ಯ ಉದ್ಯೋಗ, ವ್ಯಾಪಾರ ಹಾಗೂ ಇತರ ಕೆಲಸಗಳಿಗಾಗಿ ಸಂಚರಿಸುವ ವಾಹನ ಸವಾರರಿಗೆ ಈ ನಿರ್ಧಾರದಿಂದ ತೊಂದರೆಯಾಗುವ ಸಾಧ್ಯತೆಯಿದೆ.
ಗುರುಗ್ರಾಮ ಮತ್ತು ಫರೀದಾಬಾದ್ನಲ್ಲಿ ಬಿಎಸ್-6 ಮಾನದಂಡ ಪೂರೈಸದ ಸುಮಾರು ಎರಡು ಲಕ್ಷ ವಾಹನಗಳಿವೆ. ಈ ಪೈಕಿ ಶೇ.70ರಷ್ಟು ವಾಹನಗಳು ಬಿಎಸ್-3 ಮತ್ತು ಬಿಎಸ್-4 ವರ್ಗಕ್ಕೆ ಸೇರಿವೆ. ಈ ಎರಡು ನಗರಗಳಲ್ಲಿ ಸುಮಾರು 50 ಸಾವಿರ ವಾಣಿಜ್ಯ ವಾಹನಗಳು ಕೂಡ ಬಿಎಸ್-6 ಮಾನದಂಡಕ್ಕಿಂತ ಕೆಳಮಟ್ಟದಲ್ಲಿವೆ.ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ಅರ್ನಬ್ ಚಂಡಮಾರುತ: ಅ.28ಕ್ಕೆ ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ವಾಹನಗಳು ಬಿಎಸ್-6 ಮಾನದಂಡ ಪೂರೈಸಿಲ್ಲ. ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಾಹನಗಳು ಬಿಎಸ್-4 ವರ್ಗಕ್ಕೆ ಸೇರಿವೆ. ಗಾಜಿಯಾಬಾದ್ನಲ್ಲಿಯೂ ಸುಮಾರು ನಾಲ್ಕು ಲಕ್ಷ ಇಂತಹ ವಾಹನಗಳಿವೆ ಎಂದು ಸಾರಿಗೆ ಇಲಾಖೆ ಅಂದಾಜಿಸಿದೆ.
ನಿರ್ಬಂಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದೆಹಲಿಯ ಗಡಿ ಪ್ರವೇಶ ಮಾರ್ಗಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗುತ್ತಿದೆ. ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ಗುರುತಿಸುವ ಎಎನ್ಪಿಆರ್ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದ ನೆರವಿನಿಂದ ನಿಯಮ ಉಲ್ಲಂಘಿಸುವ ವಾಹನಗಳನ್ನು ಗುರುತಿಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. ಇದಲ್ಲದೆ, ಸಾರಿಗೆ ಇಲಾಖೆಯ ಸುಮಾರು 300 ಜಾರಿ ಸಿಬ್ಬಂದಿಯನ್ನು ನಿಯೋಜಿಸಿ, ನಿರ್ಬಂಧಿತ ವಾಹನಗಳು ದೆಹಲಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ.ಇದನ್ನೂ ಓದಿ: ಅ.31ಕ್ಕೆ ಗೃಹ ಜ್ಯೋತಿ ಸಮೀಕ್ಷೆ ಮುಕ್ತಾಯ – ಶೇ.98.49 ಸಮೀಕ್ಷೆ ಪೂರ್ಣ, ಗಡುವು ವಿಸ್ತರಣೆ ಇಲ್ಲ
ಸಿಎನ್ಜಿ, ವಿದ್ಯುತ್ ವಾಹನಗಳಿಗೆ ವಿನಾಯಿತಿ:
ಬಿಎಸ್-6 ಮಾನದಂಡ ಪೂರೈಸುವ ಹೊರರಾಜ್ಯ ನೋಂದಾಯಿತ ವಾಹನಗಳಿಗೆ ಪ್ರವೇಶ ನಿರ್ಬಂಧ ಅನ್ವಯಿಸುವುದಿಲ್ಲ. ಸಿಎನ್ಜಿ ಮತ್ತು ವಿದ್ಯುತ್ ಚಾಲಿತ ವಾಹನಗಳಿಗೂ ವಿನಾಯಿತಿ ನೀಡಲಾಗಿದೆ. ಈ ನಿರ್ದಿಷ್ಟ ನಿಯಮವು ದೆಹಲಿಯಲ್ಲಿ ನೋಂದಣಿಯಾದ ವಾಹನಗಳಿಗೆ ಅನ್ವಯಿಸುವುದಿಲ್ಲ. ಆದರೆ ಅವುಗಳಿಗೆ ಇತರ ಮಾಲಿನ್ಯ ನಿಯಂತ್ರಣ ನಿಯಮಗಳು ಅನ್ವಯಿಸಬಹುದು.
ಚಳಿಗಾಲದಲ್ಲಿ ದೆಹಲಿಯ ವಾಯುಮಾಲಿನ್ಯ ಹೆಚ್ಚಾಗುವ ಹಿನ್ನೆಲೆ ವಾಹನಗಳಿಂದ ಹೊರಸೂಸುವ ಮಾಲಿನ್ಯವನ್ನು ನಿಯಂತ್ರಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ನೆರೆಯ ನಗರಗಳಿಂದ ಪ್ರತಿದಿನ ದೆಹಲಿಗೆ ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ಸಂಚರಿಸುವ ವಾಹನ ಸವಾರರು ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.ಇದನ್ನೂ ಓದಿ: ʻನನ್ನನ್ನು ಮದುವೆಯಾಗುʼ – ವಿಡಿಯೋ ಕರೆಯಲ್ಲಿ ಸಹೋದ್ಯೋಗಿಗೆ ಬೆದರಿಕೆ ಹಾಕಿ ನೇಣಿಗೆ ಶರಣಾದ ಟೆಕ್ಕಿ
