ಬೆಂಗಳೂರು: ತಾಯಿ ಚೆನ್ನಮ್ಮ(Chennamma Deve Gowda) ಅವರ ನಿಧನದ ನೋವಿನ ನಡುವೆಯೇ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಅತ್ತೆಯ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು.
ಚೆನ್ನಮ್ಮ ಅವರು ಅತ್ಯಂತ ದೊಡ್ಡ ಶಿವಭಕ್ತೆಯಾಗಿದ್ದರು ಎಂದು ಭವಾನಿ ರೇವಣ್ಣ ಹೇಳಿದರು. ಪ್ರತಿ ಸೋಮವಾರ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳನ್ನು ತಪ್ಪದೇ ಮಾಡುತ್ತಿದ್ದರು. ಶಿವನ ಧ್ಯಾನದಲ್ಲಿ ಕುಳಿತರೆ ಒಂದು ಗಂಟೆಯವರೆಗೆ ಕಣ್ಣು ತೆರೆಯದೆ ಭಕ್ತಿಯಲ್ಲಿ ಲೀನರಾಗುತ್ತಿದ್ದರು ಎಂದು ನೆನಪಿಸಿಕೊಂಡರು.
ಒಮ್ಮೆ ಪೂಜೆ ವೇಳೆ ಧ್ಯಾನದಲ್ಲಿ ಮಗ್ನರಾಗಿದ್ದಾಗ ದೀಪದ ಕಿಡಿ ಕೈಗೆ ತಗುಲಿ ಚರ್ಮ ಸುಟ್ಟಿದ್ದರೂ ಅವರಿಗೆ ಅದರ ಅರಿವೇ ಆಗಿರಲಿಲ್ಲ. ನಂತರ ಮನೆಯವರು ಗಮನಿಸಿ ವೈದ್ಯರನ್ನು ಮನೆಗೆ ಕರೆಸಿ ಚಿಕಿತ್ಸೆ ಕೊಡಿಸಿದ್ದರು. ಅಷ್ಟರ ಮಟ್ಟಿಗೆ ಅವರು ದೇವರ ಭಕ್ತಿಯಲ್ಲಿ ಮುಳುಗಿರುತ್ತಿದ್ದರು ಎಂದು ಹೇಳಿದರು.
ರೇವಣ್ಣಗೆ ತಂದೆ-ತಾಯಿ ಅಂದರೆ ಗುಡಿಯಲ್ಲಿರುವ ದೇವರು
ಹೆಚ್.ಡಿ. ರೇವಣ್ಣ ಅವರು ತಮ್ಮ ತಂದೆ-ತಾಯಿಯನ್ನು ದೇವರ ಸ್ಥಾನದಲ್ಲಿ ಕಾಣುತ್ತಿದ್ದರು. ಶಿವ-ಪಾರ್ವತಿಯರನ್ನು ಹೇಗೆ ಪೂಜಿಸುತ್ತಾರೋ, ಅದೇ ರೀತಿಯಲ್ಲಿ ಅತ್ತೆ-ಮಾವನನ್ನು ಗೌರವಿಸುತ್ತಾರೆ. ತಾಯಿಯನ್ನು ಕಳೆದುಕೊಂಡಿರುವ ನೋವು ಅವರನ್ನು ತುಂಬಾ ಕಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ದಾರಿಯುದ್ದಕ್ಕೂ ನಿಂತು ಚೆನ್ನಮ್ಮನ ಅಂತಿಮ ದರ್ಶನ ಪಡೆದ ಜನ; ಕೈಮುಗಿದ ದೇವೇಗೌಡರು
ಈ ದುಃಖದ ಸಮಯದಲ್ಲಿ ರೇವಣ್ಣ ಅವರ ಮೇಲಿನ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅಂತ್ಯಕ್ರಿಯೆಯ ಎಲ್ಲ ಸಿದ್ಧತೆಗಳನ್ನು ಅವರೇ ನಿಂತು ನೋಡಿಕೊಳ್ಳುತ್ತಿದ್ದಾರೆ ಎಂದರು. ತವರಿಗೊ, ಗಂಡನ ಮನೆಗೂ ಹೊಳೆನರಸೀಪುರವೇ ಆಗಿರುವುದರಿಂದ ಆ ಊರಿನ ಮೇಲೆ ರೇವಣ್ಣ ಅವರಿಗೆ ವಿಶೇಷವಾದ ಪ್ರೀತಿ ಇದೆ. ಅದಕ್ಕಾಗಿಯೇ ಎಲ್ಲ ವಿಧಿವಿಧಾನಗಳನ್ನು ಅಲ್ಲಿಯೇ ನೆರವೇರಿಸಲಾಗುತ್ತಿದೆ ತಿಳಿಸಿದರು. ಇದನ್ನೂ ಓದಿ: ಮೋದಿ ಮೌನ ಅಕ್ಷಮ್ಯ – ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ಸ್ವತಂತ್ರ ತನಿಖೆಗೆ ರಾಹುಲ್, ಖರ್ಗೆ ಆಗ್ರಹ
