ಉಡುಪಿ: ತಾಯಿಯ ಮಡಿಲಲ್ಲಿದ್ದ ಕಂದಮ್ಮನ ಮೇಲೆ ತೆಂಗಿನಕಾಯಿ ಬಿದ್ದು, ಮಗು ದುರಂತ ಸಾವು ಕಂಡಿರುವ ಘಟನೆ ಉಡುಪಿಯಲ್ಲಿ (Udupi) ನಡೆದಿದೆ.
ಬ್ರಹ್ಮಾವರ ತಾಲೂಕಿನ ಹೇರಂಜೆಯಲ್ಲಿ ನಡೆದ ಈ ದುರಂತ, ಇಡೀ ಊರನ್ನೇ ಮೌನಗೊಳಿಸಿದೆ. ಶಾಲೆಗೆ ಮಗಳನ್ನು ಬಿಟ್ಟು ಬರಲು ತೆರಳಿದ್ದ ತಾಯಿಯ ಕಂಕುಳಲ್ಲಿದ್ದ ಮಗು, ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದು, ಕುಟುಂಬ ಕಣ್ಣೀರ ಸಾಗರದಲ್ಲಿ ಮುಳುಗಿದೆ.
ತಾಯಿ ತನ್ನ ಆರು ವರ್ಷದ ಮಗಳನ್ನು ಶಾಲೆಗೆ ಬಿಡಲು ಎಂದಿನಂತೆ ತೆರಳಿದ್ದರು. ಆದರೆ, ಈ ಬಾರಿ ಒಂದುವರೆ ವರ್ಷದ ಪುಟ್ಟ ಮಗುವನ್ನೂ ಕಂಕುಳಲ್ಲಿ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ಹಸಿ ತೆಂಗಿನಕಾಯಿ ಏಕಾಏಕಿ ಬಿದ್ದು, ನೇರವಾಗಿ ಮಗುವಿನ ತಲೆಗೆ ಅಪ್ಪಳಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ರೌಡಿಶೀಟರ್ ಕಾಲಿಗೆ ಗುಂಡೇಟು
ಬಿದ್ದ ರಭಸಕ್ಕೆ ಮಗುವಿನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತಕ್ಷಣವೇ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಉಸಿರಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಸಿಪಿಆರ್ ನೀಡಲು ಯತ್ನಿಸಿದ್ದಾರೆ. ಬಳಿಕ ಮಗುವನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮಗು ಕೊನೆಯುಸಿರೆಳೆದಿದೆ.
ಮೃತ ಮಗುವನ್ನು ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಕ್ಯಾಂಟೀನ್ ನಡೆಸುತ್ತಿದ್ದ ಪ್ರಶಾಂತ್ ಪೂಜಾರಿ ಹಾಗೂ ಸುಚಿತ್ರಾ ಪೂಜಾರಿ ದಂಪತಿಯ ಎರಡನೇ ಪುತ್ರ ದಕ್ಷ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಅಪ್ರಾಪ್ತೆಗೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಆರೋಪ – ಐವರ ಬಂಧನ
